ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಕೀಯ, ಹಣಕ್ಕಾಗಿ ಸೊಹ್ರಾಬುದ್ದೀನ್ ಹತ್ಯೆ: ಸಿಬಿಐ (CBI | Amit Shah | Gujarat | Sohrabuddin Sheikh)
Bookmark and Share Feedback Print
 
ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಕೊರಳಿನ ಸಿಬಿಐ ಉರುಳು ದಿನಗಳು ಕಳೆಯುತ್ತಿದ್ದಂತೆ ಬಿಗಿಯಾಗುತ್ತಿದೆ. ಇತ್ತೀಚೆಗಷ್ಟೇ ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯ ಪ್ರಕಾರ ಸೊಹ್ರಾಬುದ್ದೀನ್‌ನನ್ನು ಹಣಕಾಸು ಮತ್ತು ರಾಜಕೀಯ ಉದ್ದೇಶಗಳಿಗಾಗಿ ಕೊಲೆಗೈಯಲಾಗಿತ್ತು.

ಆರೋಪಪಟ್ಟಿಯ ಮುಖ್ಯಾಂಶಗಳು...
* ರಾಜಕೀಯ ಸಂಬಂಧ ಹೊಂದಿರುವ ಮಾರ್ಬಲ್ ವ್ಯಾಪಾರಿಗಳಿಂದ ಸೊಹ್ರಾಬುದ್ದೀನ್ ಹಣ ವಸೂಲಿ ಆರಂಭಿಸಿದ್ದ.
* ಇದರಿಂದ ಕುಪಿತಗೊಂಡ ಮಾರ್ಬಲ್ ವ್ಯಾಪಾರಿಗಳು ರಾಜಸ್ತಾನದ ರಾಜಕಾರಣಿಗಳನ್ನು ಸಂಪರ್ಕಿಸಿದ್ದರು.
* ರಾಜಸ್ತಾನ ಪೊಲೀಸರು ನೀಡಿದ ಮಾಹಿತಿಯಂತೆ, ಗುಜರಾತ್ ಪೊಲೀಸರು ಸೊಹ್ರಾಬುದ್ದೀನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
* ಸೊಹ್ರಾಬುದ್ದೀನ್‌ನನ್ನು ಮುಗಿಸುವ ಹೊಣೆಗಾರಿಕೆಯನ್ನು ಡಿಜಿಪಿ ವಂಜಾರಾ ಮತ್ತು ಅಭಯ್ ಚೂಡಾಸಾಮಾ ಅವರಿಗೆ ಅಮಿತ್ ಶಾ ನೀಡಿದ್ದರು.
* ರಾಜಕೀಯ ಮತ್ತು ಹಣಕಾಸು -- ಈ ಎರಡು ಉದ್ದೇಶಗಳಿಗಾಗಿ ಸೊಹ್ರಾಬುದ್ದೀನ್‌ನನ್ನು ನಕಲಿ ಎನ್‌ಕೌಂಟರ್ ಮಾಡಲಾಗಿತ್ತು.

ಗುಜರಾತ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಜುಲೈ 25ರಂದು ಶರಣಾಗಿದ್ದ ಅಮಿತ್ ಶಾರನ್ನು ಸಿಬಿಐ ಬಂಧಿಸಿತ್ತು. ನಂತರ ಅವರಿಗೆ 13 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಸಕ್ತ ಸಾಬರಮತಿ ಜೈಲಿನಲ್ಲಿದ್ದಾರೆ.

ಸಿಬಿಐಯಿಂದ ವಿಚಾರಣೆ...
ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡಿರುವಂತೆ ಇಂದು ಸಿಬಿಐ ಅಧಿಕಾರಿಗಳು ಮಾಜಿ ಸಚಿವ ಅಮಿತ್ ಶಾ ಅವರನ್ನು ಸಾಬರಮತಿ ಜೈಲಿನಲ್ಲಿ ವಿಚಾರಣೆ ನಡೆಸಿದೆ.

ಸೂಪರಿಂಟೆಂಡೆಂಟ್ ಅಮಿತಾಬ್ ಠಾಕೂರ್ ನೇತೃತ್ವದ ಮೂರು ಸದಸ್ಯರ ಸಿಬಿಐ ತಂಡವು ಬುಧವಾರ ಬೆಳಿಗ್ಗೆ ಭಾರೀ ಭದ್ರತೆಯನ್ನು ಒದಗಿಸಲಾಗಿರುವ ಸಾಬರಮತಿ ಜೈಲಿಗೆ ತೆರಳಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿಯವರ ನಿಕಟವರ್ತಿಯ ವಿಚಾರಣೆ ನಡೆಸಿದ್ದಾರೆ ಎಂದು ವರದಿಗಳು ಹೇಳಿವೆ.

ಅಧಿಕಾರಿಗಳ ಜತೆ ಇಬ್ಬರು ವೀಡಿಯೋಗ್ರಾಫರುಗಳು, ಓರ್ವ ವಕೀಲರು ವಿಚಾರಣೆಗೆ ತೆರಳಿದ್ದರು.

ಜುಲೈ 28ರಿಂದ 30ರ ನಡುವೆ ಬೆಳಿಗ್ಗೆ 9.30ರಿಂದ ಸಂಜೆ 5.30ರ ನಡುವೆ ಅಮಿತ್ ಅವರನ್ನು ವಿಚಾರಣೆ ನಡೆಸಬಹುದು. ಆದರೆ ವಿಚಾರಣೆಯ ಆಡಿಯೋ ಮತ್ತು ವೀಡಿಯೋ ದೃಶ್ಯಗಳನ್ನು ದಾಖಲು ಮಾಡಿಕೊಳ್ಳಬೇಕು ಎಂದು ಸಿಬಿಐ ನ್ಯಾಯಾಲಯವು ಸೂಚನೆ ನೀಡಿತ್ತು.

ಸಿಬಿಐ ತಂತ್ರಕ್ಕೆ ವಿರೋಧ...
ಡಿಎಸ್‌ಪಿ ಎನ್.ಕೆ. ಅಮೀನ್ ಅವರನ್ನು ಪ್ರಕರಣದಲ್ಲಿ ಮಾಫಿ ಸಾಕ್ಷಿಯನ್ನಾಗಿ ಬಳಸುವ ಮೂಲಕ ಅಮಿತ್ ಶಾ ವಿರುದ್ಧ ಕಠಿಣ ತಂತ್ರಗಳನ್ನು ಹೆಣೆದಿರುವ ಸಿಬಿಐ ನಿರ್ಧಾರವನ್ನು ಇತರ ಆರೋಪಿ ಅಧಿಕಾರಿಗಳು ತೀವ್ರವಾಗಿ ವಿರೋಧಿಸಿದ್ದಾರೆ.

ಡಿಐಜಿ ಡಿ.ಜಿ. ವಂಜಾರಾ, ಎಸ್‌ಪಿ ರಾಜ್‌ಕುಮಾರ್ ಪಾಂಡ್ಯನ್, ದಿನೇಶ್ ಎಂ.ಎನ್. ಸೇರಿದಂತೆ ಪ್ರಕರಣ ಸಂಬಂಧ ಆರೋಪ ಎದುರಿಸುತ್ತಾ ಜೈಲಿನಲ್ಲಿರುವ ಹಲವು ಪೊಲೀಸ್ ಅಧಿಕಾರಿಗಳು ಸಿಬಿಐ ನಿಲುವನ್ನು ಪ್ರತಿಭಟಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಸೊಹ್ರಾಬುದ್ದೀನ್ ಹತ್ಯೆ ಪ್ರಕರಣದಲ್ಲಿ ಸ್ವತಃ ಆರೋಪಿಯಾಗಿರುವ ಅಮೀನ್, ತಾನು ಮಾಫಿ ಸಾಕ್ಷಿಯಾಗುವ ಮೂಲಕ ಶಿಕ್ಷೆಯಿಂದ ವಿನಾಯಿತಿ ಪಡೆದುಕೊಳ್ಳಲು ಬಯಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ