ಕನ್ನಡದ ಬೆನ್ನಲ್ಲೇ ಮಲಯಾಳಂಗೂ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಕೇರಳ ಸರಕಾರ ಆಗ್ರಹಿಸಿದೆ. ಈ ಬಗ್ಗೆ ಕೇಂದ್ರ ಸರಕಾರದ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ಕೇರಳ ರಾಜ್ಯ ಶಿಕ್ಷಣ ಮತ್ತು ಸಂಸ್ಕೃತಿ ಸಚಿವ ಎಂ.ಎ. ಬೇಬಿ ಬುಧವಾರ ತಿಳಿಸಿದ್ದಾರೆ.
ಕೆಲ ತಿಂಗಳುಗಳ ಹಿಂದೆಯಷ್ಟೇ ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಮತ್ತು ವಿಪಕ್ಷ ನಾಯಕ ಉಮ್ಮನ್ ಚಾಂಡಿ ನೇತೃತ್ವದ ಸರ್ವಪಕ್ಷ ನಿಯೋಗ ದೆಹಲಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಕೇರಳದ ಮನವಿಗೆ ಪ್ರಧಾನಿ ಕಾರ್ಯಾಲಯದಿಂದಲೂ ಸಕಾರಾತ್ಮಕ ನಿಲುವು ಬಂದಿದೆ. ಅಲ್ಲದೆ ಅಂತಾರಾಷ್ಟ್ರೀಯ ದ್ರಾವಿಡ ಭಾಷೆ ಅಧ್ಯಯನದ ತಿರುವನಂತಪುರ ಕೇಂದ್ರಕ್ಕೆ ಮಲಯಾಳಂ ಅಭಿಜಾತ ಭಾಷೆ ಎಂದು ಪರಿಗಣಿಸಲು ಬೇಕಾದ ಅಗತ್ಯ ದಾಖಲೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ಬೇಬಿ ತಿಳಿಸಿದರು.
ಪ್ರಧಾನಿಯಿಂದಲೂ ಸಕಾರಾತ್ಮಕ ನಿಲುವು ಮೂಡಿಬಂದಿದೆ ಎಂದು ಬೇಬಿ ತಿಳಿಸಿದರು. ಅಲ್ಲದೆ ತಮಿಳುನಾಡು ಇತ್ತೀಚೆಗಷ್ಟೇ ಆಯೋಜಿಸಿದ 'ವಿಶ್ವ ಶಾಸ್ತ್ರೀಯ ತಮಿಳು ಸಮ್ಮೇಳನ'ದಂತೆ 'ಮಲಯಾಳಂ ಭಾಷಾ ಸಂಗಮ' ಸಮಾವೇಶ ನಡೆಸಲು ಚಿಂತನೆ ನಡೆಸುತ್ತಿದ್ದು, ಸಮ್ಮೇಳನದ ದಿನಾಂಕವನ್ನು ಆನಂತರ ನಿಗದಿಪಡಿಸಲಾಗುವುದು ಎಂದವರು ಹೇಳಿದರು.
ಈ ಹಿಂದೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದರ ವಿರುದ್ಧ ತಮಿಳುನಾಡು ಭಾರೀ ವಿರೋಧ ವ್ಯಕ್ತಪಡಿಸಿತ್ತು.