ಭಾರತವು ಜಾಗತಿಕ ವಲಯದಲ್ಲಿ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದೆ ಎಂಬ ಅಂಕಿ-ಅಂಶಗಳನ್ನೆಲ್ಲ ಪ್ರತಿ ವರ್ಷವೂ ಕೇಳುತ್ತಿದ್ದೀರಿ. ಹಾಗಿದ್ದರೆ, ಭಾರತ ಏಕ್-ದಮ್ ಶ್ರೀಮಂತವಾಗುತ್ತಿದೆ ಎಂದುಕೊಂಡಿದ್ದರೆ ಅದು ಶುದ್ಧ ಮೂರ್ಖತನದ ಮಾತಾದೀತು -- ಈ ದೇಶದ ಪ್ರತಿಯೊಬ್ಬರ ತಲೆಯ ಮೇಲೂ ಕನಿಷ್ಠ 10,000 ರೂಪಾಯಿಗಳ ಅಂತಾರಾಷ್ಟ್ರೀಯ ಸಾಲವಿದೆ ಎನ್ನುವುದನ್ನು ತಿಳಿದುಕೊಂಡರೆ!
ಇಲ್ಲಿ ಮತ್ತೊಂದು ಹೇಳಲೇಬೇಕಾದ ಮಹತ್ವ ಅಂಶವೆಂದರೆ ಒಟ್ಟಾರೆ ದೇಶದ ಸಾಲ ಪ್ರಜೆಗಳಿಗೆ ಹಂಚಿಕೆಯಾಗುವ ಪ್ರಮಾಣಕ್ಕಿಂತ ಕರ್ನಾಟಕದ ಸಾಲವೇ ಕನ್ನಡಿಗರ ಮೇಲೆ ಹೆಚ್ಚಿರುವುದು. ಇಂತಹ ಹತ್ತು ಹಲವು ಅಂದಾಜು ಅಂಕಿ-ಅಂಶಗಳನ್ನು ಇಲ್ಲಿ ನೀಡಲಾಗಿದೆ.
ಭಾರತದ ಸಾಲವೆಷ್ಟು ಗೊತ್ತೇ? ಭಾರತವು 2010ರ ಮಾರ್ಚ್ ಅಂತ್ಯದ ಹೊತ್ತಿಗೆ ತನ್ನ ಸಾಲವನ್ನು 1.72 ಲಕ್ಷ ಕೋಟಿ ರೂಪಾಯಿಗಳನ್ನು ಹೆಚ್ಚಿಸುವುದರೊಂದಿಗೆ ಒಟ್ಟಾರೆ 12.3 ಲಕ್ಷ ಕೋಟಿ ರೂಪಾಯಿಗಳ ಸಾಲವನ್ನು ಹೊಂದಿದೆ. ಅಂದರೆ ಈ ದೇಶದ ಪ್ರತಿ ಪ್ರಜೆಯ ಮೇಲೆ 10,173 ರೂಪಾಯಿ ಸಾಲವಿದೆ.
ಇದು ಭಾರತದ ಒಟ್ಟು ದೇಶೀಯ ಉತ್ಪಾದನೆಯ (ಜಿಡಿಪಿ) ಶೇ.21ರಷ್ಟು. ಭಾರತದ ವಾರ್ಷಿಕ ಉತ್ಪಾದನೆಯ ಮೊತ್ತ 58.5 ಲಕ್ಷ ಕೋಟಿ ರೂಪಾಯಿಗಳು.
ಸ್ವತಃ ಭಾರತೀಯ ರಿಸರ್ವ್ ಬ್ಯಾಂಕ್ ಹೇಳುವ ಪ್ರಕಾರ ಭಾರತವು ವಿಶ್ವದ ಐದನೇ ಅತಿ ದೊಡ್ಡ ಸಾಲಗಾರ ರಾಷ್ಟ್ರ. ಆದರೂ ಭಾರತದ ವಿದೇಶಿ ವಿನಿಮಯ ಪ್ರಮಾಣವು 13.2 ಲಕ್ಷ ಕೋಟಿ ರೂಪಾಯಿಗಳಲ್ಲಿರುವುದರಿಂದ ದೇಶದ ಆರ್ಥಿಕ ಪರಿಸ್ಥಿತಿ ಅನಿಶ್ಚಿತತೆಯಲ್ಲಿಲ್ಲ.
ಸ್ವಿಸ್ ಬ್ಯಾಂಕ್ ಹಣ ಬಂದರೆ? ಇತ್ತೀಚಿನ ಕೆಲ ವರ್ಷಗಳಿಂದ ಸ್ವಿಸ್ ಬ್ಯಾಂಕ್‌ನಲ್ಲಿರುವ ರಾಜಕಾರಣಿ, ಅಧಿಕಾರಿಗಳು ಮತ್ತು ಸಿರಿವಂತರ ಕಪ್ಪು ಹಣವನ್ನು ಭಾರತಕ್ಕೆ ತರುವ ಬಗ್ಗೆ ರಾಜಕೀಯ ಪಕ್ಷಗಳು ಬೋಂಗು ಬಿಡುತ್ತಾ ಬಂದಿರುವುದು ತಿಳಿದೇ ಇದೆ. ಒಂದು ವೇಳೆ ಅದನ್ನು ಭಾರತಕ್ಕೆ ತರಲು ಸಾಧ್ಯವಾದರೆ, ಅದರಿಂದಲೇ ಭಾರತದ ಸಾಲವನ್ನು ತೀರಿಸಬಹುದೇ?
ಖಂಡಿತಾ. ಭಾರತ ಹೊಂದಿರುವ ಸಾಲ ಕೇವಲ 12.3 ಲಕ್ಷ ಕೋಟಿ ರೂಪಾಯಿಗಳು ಮಾತ್ರ. ಆದರೆ ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿ ಹೊಂದಿರುವ ಹಣ 70 ಲಕ್ಷ ಕೋಟಿ ರೂಪಾಯಿಗಳು.
ಇಲ್ಲಿ ಅದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ ಭಾರತದ 12.3 ಲಕ್ಷ ಕೋಟಿ ರೂಪಾಯಿ ಸಾಲವನ್ನು ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ 70 ಲಕ್ಷ ಕೋಟಿ ರೂಪಾಯಿಗಳಿಂದ ತೀರಿಸಿದ ನಂತರ ಉಳಿಯುವ ಹಣ 58 ಲಕ್ಷ ಕೋಟಿ ರೂಪಾಯಿಗಳು. ಅಂದರೆ ಇದನ್ನು ಭಾರತದ ಪ್ರತಿಯೊಬ್ಬ ಪ್ರಜೆಗಳಿಗೆ ಹಂಚಿದಾಗ ಪ್ರತಿಯೊಬ್ಬರೂ ಪಡೆದುಕೊಳ್ಳುವ ಮೊತ್ತ 50,000 ರೂಪಾಯಿಗಳು!
ವಿಷಯ
ವಿವರ
ಭಾರತದ ಸಾಲ
12207380000000 ರೂ.
ಭಾರತದ ಜನಸಂಖ್ಯೆ
115,00,00,000
ಪ್ರಜೆಯೊಬ್ಬನ ಸರಾಸರಿ ಸಾಲ
10173 ರೂಪಾಯಿ
ಭಾರತದ ಜಿಡಿಪಿ
58443980000000 ರೂ.
ಸ್ವಿಸ್ ಕಪ್ಪು ಹಣ
70132780000000 ರೂ.
ಸಾಲ ಮುಗಿಸಿ ಉಳಿಯುವ ಮೊತ್ತ
57925400000000
ಪ್ರಜೆಯೊಬ್ಬನಿಗೆ ಸಿಗುವ ಪಾಲು
50,369 ರೂ.
ಕರ್ನಾಟಕದ ಸಾಲವಿದು... ಭಾರತದ 28 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳು ತಮ್ಮ ತಲೆಯ ಮೇಲೆ ಹೊತ್ತುಕೊಂಡಿರುವ ಸಾಲಗಳೆಷ್ಟು ಎಂಬುದು ಕುತೂಹಲಕಾರಿಯಲ್ಲವೇ? ಇಲ್ಲಿ ಸಾಲ ಪಟ್ಟಿಯಲ್ಲಿ ಅಗ್ರ ಸ್ಥಾನಗಳಲ್ಲಿರುವ ಕೆಲವು ರಾಜ್ಯಗಳನ್ನು ಹೆಸರಿಸಲಾಗಿದೆ.
ಭಾರತದ ಎಂಟನೇ ಅತಿ ದೊಡ್ಡ ರಾಜ್ಯ ಹಾಗೂ ಜನಸಂಖ್ಯೆಯಲ್ಲಿ ಒಂಬತ್ತನೇ ಸ್ಥಾನ ಪಡೆದಿರುವ ಕರ್ನಾಟಕ ಹೊಂದಿರುವ ಒಟ್ಟು ಸಾಲ 66,000 ಕೋಟಿ ರೂಪಾಯಿಗಳು. ಅಂದರೆ ಅಂದಾಜು ಆರು ಕೋಟಿ ಜನಸಂಖ್ಯೆಯ ಲೆಕ್ಕಾಚಾರ ಮಾಡಿದರೂ ಪ್ರತಿಯೊಬ್ಬ ಕನ್ನಡಿಗನ ಮೇಲಿರುವ ಸಾಲ 11,000 ರೂಪಾಯಿಗಳು.
ಆದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಜಿಡಿಪಿ ಅತ್ಯುತ್ತಮವಾಗಿದೆ. ರಾಜಧಾನಿ ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೇಂದ್ರ ಬಿಂದುವಾಗಿರುವುದರಿಂದ ವಿಶ್ವದ ಗಮನವನ್ನೇ ಸೆಳೆಯುತ್ತಿದೆ.
ಉತ್ತರ ಪ್ರದೇಶ... ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆ ಸರಿಸುಮಾರು 19 ಕೋಟಿ. ಮಾಯಾವತಿ ಮುಖ್ಯಮಂತ್ರಿಯಾಗಿರುವ ಈ ರಾಜ್ಯ ಹೊಂದಿರುವ ಸಾಲ 2,21,000 ಕೋಟಿ ರೂಪಾಯಿಗಳು. ಅಂದರೆ ಪ್ರತಿಯೊಬ್ಬನ ಮೇಲಿರುವ ಸಾಲದ ಹೊರೆ 11,631 ರೂಪಾಯಿಗಳು.
ದೇಶದ ಎರಡನೇ ಅತಿ ದೊಡ್ಡ ರಾಜ್ಯ ಮತ್ತು ಆರ್ಥಿಕ ಉತ್ಪಾದನೆಯ ಮೂಲವಾಗಿರುವ ಉತ್ತರ ಪ್ರದೇಶವು ಮೂಲತಃ ಕೃಷಿಯನ್ನೇ ಇನ್ನೂ ಪ್ರಮುಖವಾಗಿ ಅವಲಂಬಿಸಿಕೊಂಡಿದೆ. ಇದು ದೇಶಕ್ಕೆ ನೀಡುತ್ತಿರುವ ಜಿಡಿಪಿ ಪ್ರಮಾಣ ಶೇಕಡಾ 8.
ಮಹಾರಾಷ್ಟ್ರ... ಭಾರತದ ವಾಣಿಜ್ಯ ರಾಜಧಾನಿ ಎಂದೇ ಹೆಸರಾಗಿರುವ ಮುಂಬೈಯನ್ನು ಹೊಂದಿರುವ ಮಹಾರಾಷ್ಟ್ರದ ಸಾಲ 2,08,000 ಕೋಟಿ ರೂಪಾಯಿಗಳು. ಇಲ್ಲಿನ ಜನಸಂಖ್ಯೆ ಸುಮಾರು 10 ಕೋಟಿ. ಅಂದರೆ ಪ್ರತಿಯೊಬ್ಬನ ಮೇಲಿರುವ ಸಾಲದ ಹೊರೆ 21,000 ರೂಪಾಯಿಗಳು.
ಇತರ ರಾಜ್ಯಗಳ ವಿವರ... * ಪಶ್ಚಿಮ ಬಂಗಾಲ: ಸಾಲ- 1,92,000 ಕೋಟಿ ರೂ. ಜನಸಂಖ್ಯೆ- 9 ಕೋಟಿ. * ಆಂಧ್ರಪ್ರದೇಶ: ಸಾಲ- 1,26,000 ಕೋಟಿ ರೂ. ಜನಸಂಖ್ಯೆ- 8 ಕೋಟಿ. * ಮಧ್ಯಪ್ರದೇಶ: ಸಾಲ 56,250 ಕೋಟಿ ರೂಪಾಯಿ. ಜನಸಂಖ್ಯೆ- 6 ಕೋಟಿ. * ಒರಿಸ್ಸಾ: ಸಾಲ- 50,000 ಕೋಟಿ ರೂ. ಜನಸಂಖ್ಯೆ- 4 ಕೋಟಿ. * ಕೇರಳ: ಸಾಲ- 65,000 ಕೋಟಿ ರೂಪಾಯಿ. ಜನಸಂಖ್ಯೆ- 3.25 ಕೋಟಿ. * ಬಿಹಾರ: ಸಾಲ- 45,000 ಕೋಟಿ ರೂಪಾಯಿ. ಜನಸಂಖ್ಯೆ- 10 ಕೋಟಿ.