ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೆಲೆಯೇರಿಕೆ; ಕೇಂದ್ರದ ಕುತ್ತಿಗೆ ಅಮುಕುತ್ತಿವೆ ಪ್ರತಿಪಕ್ಷಗಳು (Price rise | Parliament | Deve Gowda | UPA govt)
Bookmark and Share Feedback Print
 
ಬೆಲೆಯೇರಿಕೆ ಆಗಿಯೇ ಇಲ್ಲ, ಆಗಿದ್ದರೂ ಅದಕ್ಕೆ ನಾವು ಕಾರಣರಲ್ಲ ಎಂದು ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಾ ನುಣುಚಿಕೊಳ್ಳಲು ಯತ್ನಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ಪ್ರತಿಪಕ್ಷಗಳು ತಮ್ಮ ಹೋರಾಟವನ್ನು ಮತ್ತಷ್ಟು ಬಿಗಿಗೊಳಿಸಿದ್ದು, ನಿಲುವಳಿ ಗೊತ್ತುವಳಿಗೆ ಅವಕಾಶ ನೀಡಲೇಬೇಕೆಂದು ಪಟ್ಟು ಹಿಡಿಯುತ್ತಿವೆ.

ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಇತರ ವಿರೋಧಪಕ್ಷಗಳು ಬೆಲೆಯೇರಿಕೆ ಕುರಿತು ನಿಲುವಳಿ ಸೂಚನೆಗೆ ಅವಕಾಶ ನೀಡಬೇಕೆಂದು ಮಾಡಿಕೊಂಡಿದ್ದ ಮನವಿಯನ್ನು 'ಅಸಮರ್ಥನೀಯ' ಎಂಬ ಕಾರಣ ನೀಡಿ ಸ್ಪೀಕರ್ ಮೀರಾ ಕುಮಾರ್ ನಿನ್ನೆ ತಳ್ಳಿ ಹಾಕಿದ್ದರು. ಆದರೆ ಬೇಡಿಕೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಪಕ್ಷಗಳು ಘೋಷಿಸಿವೆ.

ಸಂಸತ್ತಿನಲ್ಲಿ ಕೋಲಾಹಲ...
ಪ್ರತಿಪಕ್ಷಗಳ ನಿಲುವಳಿ ಗೊತ್ತುವಳಿ ಬೇಡಿಕೆಯನ್ನು ತಳ್ಳಿ ಹಾಕಲಾಗಿದ್ದರೂ, ಪಟ್ಟು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ಒಕ್ಕೊರಲಿನಿಂದ ವಿಪಕ್ಷಗಳು ಘೋಷಿಸಿವೆ. ಆದರೆ ಸರಕಾರ ತನ್ನ ಪಟ್ಟು ಸಡಿಲಿಸುವ ಯಾವುದೇ ಸೂಚನೆಯನ್ನು ನೀಡುತ್ತಿಲ್ಲ.

ಇಂದು ಬೆಳಿಗ್ಗೆ ರಾಜ್ಯಸಭೆ ಮತ್ತು ಲೋಕಸಭೆ ಕಲಾಪಗಳು ಆರಂಭಗೊಂಡರೂ, ವಿರೋಧ ಪಕ್ಷಗಳ ಗದ್ದಲದಿಂದಾಗಿ ಎರಡೂ ಸದನಗಳನ್ನು ಮುಂದೂಡಲಾಗಿತ್ತು. 12 ಗಂಟೆಗೆ ಮತ್ತೆ ಆರಂಭವಾದ ಉಭಯ ಸದನಗಳನ್ನು ನಾಳೆಯವರೆಗೆ ಮುಂದೂಡಲಾಗಿದೆ.

ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಮತ್ತು ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಗದ್ದಲ ಮುಂದುವರಿಸಿ, ಬೆಲೆಯೇರಿಕೆ ಕುರಿತು ನಿಲುವಳಿ ಗೊತ್ತುವಳಿಗೆ ಅವಕಾಶ ನೀಡಬೇಕೆಂದು ಮತ್ತೆ ಮನವಿ ಮಾಡಿಕೊಂಡರು. ಅದು ಸಾಧ್ಯವಿಲ್ಲ, ದಯವಿಟ್ಟು ಪ್ರಶ್ನೋತ್ತರ ವೇಳೆಗೆ ಅವಕಾಶ ನೀಡಿ ಎಂಬ ಸ್ಪೀಕರ್ ಮನವಿಗೂ ನಾಯಕರು ಓಗೊಡದೆ ಪ್ರತಿಭಟನೆ ಮುಂದುವರಿಸಿದರು.

ನಿನ್ನೆ ಲೋಕಸಭೆಯಲ್ಲಿ ಸರಕಾರವನ್ನು ಸಮರ್ಥಿಸಿಕೊಂಡಿದ್ದ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಬೆಲೆಯೇರಿಕೆ ನಿಯಂತ್ರಣದಲ್ಲಿದೆ; ಪ್ರತಿಪಕ್ಷಗಳು ಕಾರಣವಿಲ್ಲದೆ ಕೋಲಾಹಲ ಸೃಷ್ಟಿಸುತ್ತಿವೆ. ಪೆಟ್ರೋಲಿಯಂ ಬೆಲೆಯೇರಿಕೆ ಅನಿವಾರ್ಯವಾಗಿತ್ತು ಎಂದಿದ್ದರು.

ತೃತೀಯ ರಂಗದ ಪ್ರತಿಭಟನೆ...
ಎಡಪಕ್ಷಗಳು, ಜೆಡಿಎಸ್, ಎಐಎಡಿಎಂಕೆ, ತೆಲುಗು ದೇಶಂ, ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ ಮುಂತಾದ ಪಕ್ಷಗಳನ್ನೊಳಗೊಂಡ ತೃತೀಯ ರಂಗವು ಕೇಂದ್ರ ಸರಕಾರದ ನಿಲುವನ್ನು ವಿರೋಧಿಸಿ ಸಂಸತ್ ಹೊರಗಡೆ ಪ್ರತಿಭಟನೆ ನಡೆಸುತ್ತಿವೆ.

ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಪಿಐಯ ಡಿ. ರಾಜಾ, ಸಿಪಿಐಎಂನ ಬಸುದೇಬ್ ಅಚಾರ್ಯ, ಸೀತಾರಾಮ್ ಯೆಚೂರಿ, ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಮುಖಂಡರು ಮತ್ತು ಸಂಸದರು ಪಾಲ್ಗೊಂಡಿದ್ದಾರೆ.

ಜನ ಸಾಮಾನ್ಯರ ಬಗ್ಗೆ ಸರಕಾರಕ್ಕೆ ಯಾವುದೇ ಕಾಳಜಿಯಿಲ್ಲ ಎಂದು ಆರೋಪಿಸಿರುವ ರಾಜಕೀಯ ನಾಯಕರು, ಬೆಲೆಯೇರಿಕೆ ಕುರಿತು ನಿಲುವಳಿ ಗೊತ್ತುವಳಿಗೆ ಅವಕಾಶ ನೀಡದ ಹೊರತು ಕಲಾಪವನ್ನು ಮುಂದುವರಿಯಲು ಬಿಡುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರತಿಪಕ್ಷಗಳ ಒಗ್ಗಟ್ಟಿದು: ಗೌಡ
ಆಡಳಿತ ಮೈತ್ರಿಕೂಟದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿರುವ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಏರುತ್ತಿರುವ ಅಗತ್ಯ ವಸ್ತುಗಳ ಬೆಲೆಯೇರಿಕೆಯ ವಿರುದ್ಧ ಎಲ್ಲಾ ಜಾತ್ಯತೀಯ ಪಕ್ಷಗಳು ಒಗ್ಗಟ್ಟಿನಿಂದಿವೆ. ಬೆಲೆಯೇರಿಕೆ ನಿಯಂತ್ರಿಸಲು ಕಾಂಗ್ರೆಸ್ ನೇತೃತ್ವದ ಸರಕಾರ ಸಂಪೂರ್ಣ ವಿಫಲವಾಗಿದೆ. ಅಕ್ರಮ ಗಣಿಗಾರಿಕೆಯ ಕುರಿತು ಚರ್ಚೆ ನಡೆಯಬೇಕು ಎಂದರು.

ಸಂಸತ್ತಿನ ಹೊರಗಡೆ ತೃತೀಯ ರಂಗ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಗೌಡರೂ ಪಾಲ್ಗೊಂಡಿದ್ದು, ಯುಪಿಎ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.

ಬಿಜೆಪಿಯಿಂದ ರಾಷ್ಟ್ರಪತಿ ಭೇಟಿ...
ಸರಕಾರದ ಉದ್ಧಟತನದಿಂದ ಆಕ್ರೋಶಗೊಂಡಿರುವ ಬಿಜೆಪಿ ಇಂದು ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರನ್ನು ಭೇಟಿ ಮಾಡಲಿದೆ. ಎಲ್.ಕೆ. ಅಡ್ವಾಣಿ, ನಿತಿನ್ ಗಡ್ಕರಿ ಮತ್ತು ಸುಷ್ಮಾ ಸ್ವರಾಜ್ ಅವರು ರಾಷ್ಟ್ರಪತಿ ಭವನದವರೆಗೆ ರ‌್ಯಾಲಿಯಲ್ಲಿ ಸಾಗಲಿದ್ದಾರೆ.

ಬಳಿಕ ಅವರು ಬೆಲೆಯೇರಿಕೆಯನ್ನು ವಿರೋಧಿಸಿರುವ 10 ಕೋಟಿಗೂ ಹೆಚ್ಚು ಜನಸಾಮಾನ್ಯರ ಸಹಿಗಳನ್ನು ಹೊಂದಿರುವ ಮನವಿ ಪತ್ರವನ್ನು ರಾಷ್ಟ್ರಪತಿಯವರಿಗೆ ಹಸ್ತಾಂತರಿಸಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ