ಭಾರೀ ಪ್ರಮಾಣದಲ್ಲಿ ಆಹಾರ ವಸ್ತುಗಳು ಕೊಳೆತು ವ್ಯರ್ಥವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಗುರಿ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ, ಬಡ ಮಹಿಳೆ ಕಲಾವತಿಯ ಮನೆಗೆ ಹೋಗಿದ್ದಾಗ ಇದೆಲ್ಲ ರಾಜಕುಮಾರನ ಕಣ್ಣಿಗೆ ಬಿದ್ದಿಲ್ಲವೇ ಎಂದು ಲೇವಡಿ ಮಾಡಿದ್ದಾರೆ.
ಸೂಕ್ತ ಉಗ್ರಾಣ ಮತ್ತು ಶೇಖರಣಾ ವ್ಯವಸ್ಥೆಯ ಕೊರತೆಯಿಂದಾಗಿ ರಾಷ್ಟ್ರದಾದ್ಯಂತ ಭಾರೀ ಪ್ರಮಾಣದಲ್ಲಿ ಆಹಾರ ವಸ್ತುಗಳು ಕೊಳೆತು ಹೋಗುತ್ತಿರುವುದು ಮತ್ತು ಪೋಲಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ಒಂದು ಕಾಳು ಕೂಡ ವ್ಯರ್ಥವಾಗಬಾರದು ಎಂದು ಇತ್ತೀಚೆಗಷ್ಟೇ ಹೇಳಿತ್ತು.
ವಿದರ್ಭ ಪ್ರಾಂತ್ಯದ ವಿಧವೆ ಕಲಾವತಿ ಬಂಡೂರ್ಕರ್ ಮನೆಗೆ 2008ರಲ್ಲಿ ಭೇಟಿ ನೀಡಿದ್ದ ರಾಹುಲ್ ಗಾಂಧಿಯವರನ್ನು ಈ ಹಿನ್ನೆಲೆಯಲ್ಲಿ ಗಡ್ಕರಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಲಾವತಿಯವರ ಮನೆಯಲ್ಲಿ ಊಟ ಮಾಡುವಾಗ ರಾಜಕುಮಾರನಿಗೆ ಆಹಾರ ಪದಾರ್ಥಗಳು ವ್ಯರ್ಥವಾಗುತ್ತಿರುವುದು ಮತ್ತು ರೈತರ ಪಾಡು ಗಮನಕ್ಕೆ ಬಂದಿರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿರುವ ಗಡ್ಕರಿ, ಅದರ ಘೋಷವಾಕ್ಯ 'ಗರೀಬಿ ಹಠಾವೋ' ಅಲ್ಲ, ನಿಜವಾಗಿ ಅದು ಬಡವರನ್ನು ತೊಲಗಿಸಿ ಎಂಬುದನ್ನು ಜಾರಿಗೆ ತರಲು ಯತ್ನಿಸುತ್ತಿದೆ ಎಂದರು.
ರೈತರ ಆತ್ಮಹತ್ಯೆ ನಿಯಂತ್ರಣಕ್ಕೆ ಬರದಿರುವುದಕ್ಕೆ ಸರಕಾರದ ಆರ್ಥಿಕ ನೀತಿಗಳೇ ಕಾರಣ. ಅವರು ಬೆಳೆಯುತ್ತಿರುವ ಬೆಳೆಗಳಿಗೆ ಪೂರಕ ಬೆಲೆ ಸಿಗುತ್ತಿಲ್ಲ. ಹಾಗಾಗಿ ರೈತರ ಬದುಕು ನರಕವಾಗುತ್ತಿದೆ. ಆದರೂ ಸರಕಾರವು ದೇಶದ ಬೆನ್ನೆಲುಬಾಗಿರುವ ಬಡ ರೈತರ ಕುರಿತು ಗಮನ ಹರಿಸುತ್ತಿಲ್ಲ ಎಂದು ಬಿಜೆಪಿ ಮುಖಂಡ ಟೀಕಿಸಿದರು.