ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಪ್ಯುಲರ್ ಫ್ರಂಟ್ ನಿಷೇಧಕ್ಕೆ ಮನವಿ ಬಂದಿಲ್ಲ: ಚಿದಂಬರಂ (Kerala | Islamic outfit | Popular Front of India | P Chidambaram)
Bookmark and Share Feedback Print
 
ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಆರೋಪಿಸಲಾಗುತ್ತಿರುವ ಮುಸ್ಲಿಂ ಮೂಲಭೂತವಾದಿ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಮೇಲೆ ನಿಷೇಧ ಹೇರಲು ಕೇರಲ ಸರಕಾರ ಮನವಿ ಮಾಡಿಕೊಂಡಿಲ್ಲ ಎಂದು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಸ್ಪಷ್ಟಪಡಿಸಿದ್ದಾರೆ.

ಪಾಪ್ಯುಲರ್ ಫ್ರಂಟ್ ನಿಷೇಧಕ್ಕೆ ರಾಜ್ಯ ಸರಕಾರವು ಕೇಂದ್ರ ಸರಕಾರವನ್ನು ಕೇಳಿಕೊಂಡಿದೆಯೇ ಎಂದು ಸಂಸತ್ ಹೊರಗಡೆ ಚಿದಂಬರಂ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ, 'ಈ ಕುರಿತು ಯಾವುದೇ ಮಾಹಿತಿಯನ್ನು ನಾನು ಪಡೆದಿಲ್ಲ' ಎಂದರು.

ಪ್ರವಾದಿ ಮಹಮ್ಮದ್ ಅವರ ಕುರಿತು ಅಪಮಾನಕಾರಿ ಉಲ್ಲೇಖಗಳನ್ನೊಳಗೊಂಡ ಪ್ರಶ್ನೆಪತ್ರಿಕೆಯನ್ನು ಕೇರಳದ ಉಪನ್ಯಾಸಕರೊಬ್ಬರು ತಯಾರಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶಂಕಿತ ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಅವರ ಕೈಕತ್ತರಿಸಿದ್ದರು.

ಈಗಾಗಲೇ ಹಲವು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರನ್ನು ಬಂಧಿಸಿರುವ ಕೇರಳ ಪೊಲೀಸರು, ಸಂಘಟನೆಗೆ ತಾಲಿಬಾನ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳ ಸಂಬಂಧವಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ತಾಲಿಬಾನ್ ಕುಕೃತ್ಯಗಳು, ಅದರ ಕಾರ್ಯಾಚರಣೆ ಕುರಿತ ಸಿಡಿಗಳನ್ನು ಕೂಡ ಪಾಪ್ಯುಲರ್ ಫ್ರಂಟ್ ಕಚೇರಿಗಳಿಂದ, ಸಂಬಂಧಪಟ್ಟ ವ್ಯಕ್ತಿಗಳಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಗಳ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಮೇಲೆ ನಿಷೇಧ ಹೇರುವ ಕುರಿತು ರಾಜ್ಯ ಮತ್ತು ಕೇಂದ್ರ ಸರಕಾರಗಳ ಅಭಿಪ್ರಾಯ ತಿಳಿಸುವಂತೆ ಜುಲೈ 13ರಂದು ಕೇರಳ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿರುವುದನ್ನೂ ಇದೀಗ ಸ್ಮರಿಸಬಹುದಾಗಿದೆ.

ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿರುವ ಕೇರಳ ಗೃಹಸಚಿವ ಕೊಡಿಯೇರಿ ಬಾಲಕೃಷ್ಣನ್, ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವರದಿ ಬಂದ ನಂತರ ಈ ಮುಸ್ಲಿಂ ಸಂಘಟನೆಯನ್ನು ನಿಷೇಧಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.

ಕೇರಳದ ಭಯೋತ್ಪಾದನಾ ಸಂಬಂಧ ಹೊಂದಿರುವ ಪ್ರಕರಣಗಳ ಕುರಿತು ಎನ್ಐಎ ತನಿಖೆ ನಡೆಸುತ್ತಿದೆ. ಇದು ಪಾಪ್ಯುಲರ್ ಫ್ರಂಟ್ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಜತೆ ಹೊಂದಿರುವ ಸಂಬಂಧದ ಕುರಿತು ಕೂಡ ವಿವರಣೆ ನೀಡಲಿದೆ. ಬಳಿಕ ನಾವು ಒಂದು ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ಅಲ್ಲದೆ ಪಾಪ್ಯುಲರ್ ಫ್ರಂಟ್ ಸಂಘಟನೆಗೆ ವಿದೇಶದಿಂದ ಬರುತ್ತಿರುವ ಹಣದ ಮೂಲವನ್ನು ಪತ್ತೆ ಹಚ್ಚಲು ತನಿಖೆ ನಡೆಸುವಂತೆ ತಾವು ಕೇಂದ್ರ ಸರಕಾರವನ್ನು ಮನವಿ ಮಾಡಿಕೊಳ್ಳಲಿದ್ದೇವೆ ಎಂದೂ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ಉನ್ನತ ಮೂಲಗಳ ಪ್ರಕಾರ, ಇದುವರೆಗೆ ಪಾಪ್ಯುಲರ್ ಫ್ರಂಟ್ ಕುರಿತು ಯಾವುದೇ ಪ್ರಸ್ತಾವನೆಯನ್ನು ಕೇರಳ ಸರಕಾರ ಮಾಡಿಲ್ಲ.

ಕೇರಳ ಸರಕಾರದ ಹೇಳಿಕೆಗಳನ್ನು ನಾವು ಮಾಧ್ಯಮಗಳಲ್ಲಷ್ಟೇ ನೋಡಿದ್ದೇವೆ. ಸಂಘಟನೆಯ ಮೇಲೆ ನಿಷೇಧ ಹೇರುವುದು ಅಥವಾ ಅದರ ಆದಾಯದ ಮೂಲವನ್ನು ಪತ್ತೆ ಹಚ್ಚುವ ಕುರಿತು ತನಿಖೆ ನಡೆಸುವುದು ಕೇರಳ ಸರಕಾರದ ಮನವಿಯನ್ನು ಆಧರಿಸಿದೆ. ಕೇವಲ ಮಾಧ್ಯಮ ವರದಿಗಳಿಂದ ಕ್ರಮ ತೆಗೆದುಕೊಳ್ಳಲಾಗದು ಎಂದು ಗೃಹ ಸಚಿವಾಲಯದ ಮೂಲ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ