ಬುರ್ಖಾ ಧರಿಸಬೇಕೆಂಬ ಮುಸ್ಲಿ ವಿಶ್ವವಿದ್ಯಾಲಯವೊಂದರ ಸಂಪ್ರದಾಯದ ವಿರುದ್ಧ ಬಂಡಾಯ ಎದ್ದಿರುವ ಶಿಕ್ಷಕಿಯ ಪಾಡಿದು. ಬುರ್ಖಾ ಧರಿಸದೆ ಪಾಠ ಮಾಡಬಾರದೆಂದು ಆಕೆಗೆ ವಿದ್ಯಾರ್ಥಿಗಳೇ ಕಟ್ಟಪ್ಪಣೆ ವಿಧಿಸಿದ್ದಾರೆ. ಆದರೂ ಆಕೆ ಸಂಬಂಧಪಟ್ಟವರಿಂದ ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.
ಪಶ್ಚಿಮ ಬಂಗಾಲದ ಮೊದಲ ಮುಸ್ಲಿಂ ಯುನಿವರ್ಸಿಟಿಯಲ್ಲಿನ ಶಿಕ್ಷಕಿಯೊಬ್ಬರ ವ್ಯಥೆಯಿದು. ಬುರ್ಖಾ ಧರಿಸಬೇಕೆಂಬ ನಿಯಮ ಶಾಲೆಯಲ್ಲಿ ಇಲ್ಲದೇ ಇದ್ದರೂ, ಆಕೆ ಪಾಠ ಮಾಡಬೇಕಿದ್ದರೆ ಸಂಪ್ರದಾಯವನ್ನು ಪಾಲಿಸಬೇಕು ಎಂದು ಯುನಿವರ್ಸಿಟಿಯ ವಿದ್ಯಾರ್ಥಿಗಳ ಸಂಘಟನೆ ಒತ್ತಡ ಹೇರುತ್ತಿದೆ.
PR
ಕೊಲ್ಕತ್ತಾ ಆಲಿ ಯುನಿವರ್ಸಿಟಿಯಲ್ಲಿ ಶಿಕ್ಷಕಿಯಾಗಿರುವ 24ರ ಹರೆಯದ ಶಿರಿನ್ ಮಿದ್ಯಾ ಎಂಬಾಕೆಯೇ ಇದೀಗ ಸಂಕಷ್ಟಕ್ಕೆ ಸಿಲುಕಿರುವ ಶಿಕ್ಷಕಿ. ಜಾದವಪುರ್ ವಿಶ್ವವಿದ್ಯಾಲಯದಲ್ಲಿ ಬೆಂಗಾಲಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ 2010ರ ಮಾರ್ಚ್ ತಿಂಗಳಲ್ಲಿ ಆಲಿ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಶಿರಿನ್ ಸೇರಿಕೊಂಡಿದ್ದರು.
ಅಚ್ಚರಿಯೆಂದರೆ ಇಲ್ಲಿ ಖಳ ಎನಿಸಿಕೊಂಡಿರುವುದು ವಿದ್ಯಾರ್ಥಿಗಳ ಸಂಘಟನೆ. ಕಾಲೇಜಿನಲ್ಲಿ ಪಾಠ ಮಾಡಲು ಬಯಸುವುದೇ ಆದಲ್ಲಿ ಬುರ್ಖಾ ಧರಿಸಲೇಬೇಕು ಎಂದು ವಿದ್ಯಾರ್ಥಿಗಳ ಯೂನಿಯನ್ ಏಪ್ರಿಲ್ ಎರಡನೇ ವಾರದಲ್ಲಿ ಶಿರಿನ್‌ಗೆ ಎಚ್ಚರಿಕೆ ರವಾನಿಸಿತ್ತು.
ತಾನು ಬುರ್ಖಾದಲ್ಲಿ ಕಾಲೇಜಿಗೆ ಬರುತ್ತೇನೆ ಎಂಬುದನ್ನು ಒಪ್ಪಿಕೊಂಡ ನಂತರವಷ್ಟೇ ಕಾಲೇಜಿನಲ್ಲಿ ಪಾಠ ಮಾಡಲು ಅವಕಾಶ ನೀಡಲಾಗುತ್ತದೆ ಎಂದು ನನಗೆ ಹೇಳಲಾಯಿತು. ಯುನಿವರ್ಸಿಟಿ ಕಾನೂನಿನ ಪ್ರಕಾರ ಇಂತಹ ಯಾವುದೇ ವಸ್ತ್ರಸಂಹಿತೆ ಇಲ್ಲಿ ಜಾರಿಯಲ್ಲಿಲ್ಲ. ದುರದೃಷ್ಟವೆಂದರೆ ವಿದ್ಯಾರ್ಥಿಗಳೇ ಬುರ್ಖಾ ಧರಿಸಬೇಕೆಂದು ನನಗೆ ಒತ್ತಾಯಿಸುತ್ತಿದ್ದಾರೆ ಎಂದು ಶಿಕ್ಷಕಿ ಹೇಳಿರುವುದನ್ನು ಪತ್ರಿಕೆಯೊಂದು ವರದಿ ಮಾಡಿದೆ.
ನನಗೆ ಬುರ್ಖಾ ಧರಿಸುವುದರಲ್ಲಿ ಯಾವುದೇ ಸಮಸ್ಯೆಯಿಲ್ಲ. ನಾನು ಕಟ್ಟಾ ಇಸ್ಲಾಂ ಧರ್ಮಾನುಯಾಯಿ. ಆದರೆ ಅದು ನನ್ನ ಸ್ವಂತ ನಿರ್ಧಾರವಾಗಿರಬೇಕೇ ಹೊರತು ಇತರರ ಬಯಕೆಯಾಗಿರಬಾರದು. ವಿದ್ಯಾರ್ಥಿಗಳ ಯೂನಿಯನ್ ನಿರ್ಧಾರದ ಕುರಿತು ವಿಶ್ವವಿದ್ಯಾಲಯ ಇದುವರೆಗೂ ಯಾವುದೇ ಅಂತಿಮ ನಿರ್ಣಯಕ್ಕೆ ಬಂದಿಲ್ಲ. ಆದರೂ ನನಗೆ ಯುನಿವರ್ಸಿಟಿ ನ್ಯಾಯ ಒದಗಿಸಲಿದೆ ಎಂಬ ಭರವಸೆ ನನ್ನಲ್ಲಿದೆ ಎಂದು ಶಿಕ್ಷಕಿ ಹೇಳಿಕೊಂಡಿದ್ದಾರೆ.
ಅಂದ ಹಾಗೆ ಇಲ್ಲಿ ಬುರ್ಖಾ ಧರಿಸಬೇಕೆಂದು ಕೇವಲ ಶಿರಿನ್ ಒಬ್ಬರಿಗೇ ವಿದ್ಯಾರ್ಥಿಗಳು ಷರತ್ತು ವಿಧಿಸಿರುವುದಲ್ಲ. ಯುನಿವರ್ಸಿಟಿಯ ಎಲ್ಲಾ ಎಂಟು ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ಕಾಲೇಜಿಗೆ ಬರಬೇಕೆಂದಿದ್ದರೆ ಬುರ್ಖಾ ಧರಿಸಲೇಬೇಕು ಎಂದಿದ್ದಾರೆ. ಈ ಸಂಬಂಧ ಪೋಸ್ಟರುಗಳನ್ನು ಹಿಡಿದು ವಿದ್ಯಾರ್ಥಿಗಳು ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಬುರ್ಖಾ ಧರಿಸಬೇಕೆಂಬ ವಿದ್ಯಾರ್ಥಿಗಳ ಈ ಷರತ್ತು ಹೆಚ್ಚಿನ ಶಿಕ್ಷಕಿಯರಿಗೆ ಪಥ್ಯವಾಗಿಲ್ಲ. ಆದರೆ ಅವರಿಗೆ ಇತರ ಯಾವುದೇ ಆಯ್ಕೆಯಿರದ ಕಾರಣ ಮೌನವಾಗಿ ಪಾಲಿಸಿಕೊಂಡು ಬರುತ್ತಿದ್ದಾರೆ. ಇದು ಶೈಕ್ಷಣಿಕ ಕ್ಷೇತ್ರದ ತಾಲಿಬಾನೀಕರಣವೇ ಹೊರತು ಬೇರೇನಲ್ಲ. ಆದರೂ ನಮ್ಮ ಸಮರ್ಥನೆಗೆ ಯಾರೊಬ್ಬರೂ ಬರುತ್ತಿಲ್ಲ ಎಂದು ಶಿರಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.