ಆತ ಶ್ರೀಮಂತ ಹಾಗೂ ಕುಖ್ಯಾತ ರಾಜಕಾರಣಿಯೊಬ್ಬನ ಮಗ. ತಂಗಿಯನ್ನು ಪ್ರೀತಿಸಿದ ಏಕೈಕ ಕಾರಣಕ್ಕಾಗಿ ವ್ಯಕ್ತಿಯೊಬ್ಬನನ್ನು ಕೊಂದು ಜೈಲು ಸೇರಿ ದೋಷಿಯೆಂದು ತೀರ್ಪು ಪಡೆದುಕೊಂಡು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಇದು ದಾಖಲೆಯಲ್ಲಿ ಮಾತ್ರ -- ವಾಸ್ತವದಲ್ಲಿ ಆತ ಕಂಬಿಗಳ ನಡುವೆಯೂ ಐಷಾರಾಮದ ಜೀವನ ನಡೆಸುತ್ತಿದ್ದಾನೆ.
ಇಂತಹ ವಿಚಾರಗಳು ಒಂದಲ್ಲ ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಅನುಭವಕ್ಕೆ ಬಂದಿರುತ್ತವೆ. ಶ್ರೀಮಂತರಿಗೊಂದು ನೀತಿ, ಬಡವರಿಗೊಂದು ನೀತಿಯನ್ನು ಸಂವಿಧಾನ ಸಮರ್ಥಿಸುತ್ತಿಲ್ಲವಾದರೂ, ನಮ್ಮ ಕಾನೂನಿನಲ್ಲಿರುವ ಕೆಲವೊಂದು ಲೋಪಗಳನ್ನು ಬಳಸಿಕೊಂಡು ಹೇಗೆ ದುರುಪಯೋಗ ಪಡಿಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಿರುತ್ತೇವೆ. ಅದಕ್ಕೊಂದು ಸೇರ್ಪಡೆಯಿದು.
PR
ಕಳೆದ 19 ತಿಂಗಳುಗಳ ಅವಧಿಯಲ್ಲಿ ಆತ ಬರೋಬ್ಬರಿ 66 ಸಲ, ಅಂದರೆ ತಿಂಗಳಿಗೆ ಸರಾಸರಿ ಐದು ಬಾರಿಯಂತೆ ಜೈಲಿನಿಂದ ಹೊರಗೆ ಹೋಗಿದ್ದಾನೆ. ಆತ ಗಣ್ಯಾತಿಗಣ್ಯ ಎಂಬ ಕಾರಣಕ್ಕೆ ಜೈಲು ಅಧಿಕಾರಿಗಳು ನಿಯಮಾವಳಿಗಳನ್ನು ಮುರಿದಿದ್ದಾರೆ. ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿನಲ್ಲೇ ಇಂತಹ ಅವಾಂತರಗಳು ನಡೆಯುತ್ತಿದ್ದರೂ, ಇದುವರೆಗೂ ಇದಕ್ಕೆ ಯಾವುದೇ ತಡೆ ಬಿದ್ದಿಲ್ಲ.
ಈ ಹಿಂದೆ ಬಿಜೆಪಿ, ಸಮಾಜವಾದಿ ಪಕ್ಷ ಮುಂತಾದೆಡೆ ತನ್ನ ಅದೃಷ್ಟ ಪರೀಕ್ಷೆ ಮಾಡಿ ಪ್ರಸಕ್ತ ಮಾಯಾವತಿಯವರ ಬಹುಜನ ಸಮಾಜ ಪಕ್ಷದಲ್ಲಿರುವ ಕುಖ್ಯಾತ ಹಾಗೂ ಅತಿ ಶ್ರೀಮಂತ ರಾಜಕಾರಣಿ ಡಿ.ಪಿ. ಯಾದವ್ ಪುತ್ರ ವಿಕಾಸ್ ಯಾದವ್ ಕಥೆಯಿದು.
ತನ್ನ ತಂಗಿ ಭಾರತಿ ಯಾದವ್‌ಳನ್ನು ನಿತೀಶ್ ಕತಾರಾ ಎಂಬ ಯುವಕ ಪ್ರೀತಿಸಿದ್ದ ಎಂಬ ಕಾರಣಕ್ಕೆ ಆತನನ್ನು ಈ ವಿಕಾಸ್ ಕೊಂದು ಹಾಕಿ ಜೈಲು ಸೇರಿದ್ದ. 2008ರಲ್ಲಿ ಈತನಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಪ್ರಕಟಿಸಿತ್ತು.
ಇಂತಹ ಒಬ್ಬ ಅಪ್ಪಟ ಕ್ರಿಮಿನಲ್‌ಗೆ ತಿಹಾರ್ ಜೈಲಿನಿಂದ ತಿಂಗಳಿಗೆ ಕನಿಷ್ಠ ಐದು ಬಾರಿ ಹೊರಗಡೆ ಹೋಗಲು ಅವಕಾಶ ನೀಡಲಾಗುತ್ತಿದೆ. ಅಪರಾಧಿಯೆಂದು ತೀರ್ಪು ಬಂದಿದ್ದರೂ ವಿಚಾರಣಾಧೀನ ಕೈದಿಗಳ ಕೊಠಡಿಗೆ ವಿಕಾಸ್ ಯಾದವ್‌ನನ್ನು ಸ್ಥಳಾಂತರಿಸಲಾಗಿದೆ.
ಇತರ ಕೈದಿಗಳಂತೆ ಈ ಶ್ರೀಮಂತ ಕೈದಿ ಜೈಲು ಸಮವಸ್ತ್ರ ಧರಿಸಬೇಕಾಗಿಲ್ಲ. ಆತನಿಗೆ ಜೈಲಿನಲ್ಲಿ ಯಾವುದೇ ಕೆಲಸವನ್ನೂ ಮಾಡಬೇಕಾಗಿಲ್ಲ. ಸ್ವತಃ ಪೊಲೀಸ್ ಅಧಿಕಾರಿಗಳೇ ಆತನಿಕೆ ಸಲಾಂ ಹೊಡೆಯುತ್ತಾ, ಬೆದರು ಬೊಂಬೆಗಳಾಗಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಈ ಮಾಹಿತಿಯನ್ನು ಸಂಬಂಧಪಟ್ಟವರಿಂದ ಪಡೆದುಕೊಳ್ಳಲಾಗಿದೆ. ಅದರ ಪ್ರಕಾರ ಈತನನ್ನು 66 ಬಾರಿ ಹೊರಗಡೆ ಹೋಗಲು ಅವಕಾಶ ನೀಡಿರುವುದು ಚಿಕಿತ್ಸೆಗಾಗಿ. ಕ್ಷಯ ರೋಗದಿಂದ ಬಳಲುತ್ತಿರುವ ವಿಕಾಸನನ್ನು ಏಮ್ಸ್, ದೀನ್ ದಯಾಳ್ ಉಪಾಧ್ಯಾಯ್, ಮೌಲಾನಾ ಆಜಾದ್ ದಂತವೈದ್ಯ ಕಾಲೇಜು ಮತ್ತು ತಿಬ್ಬಿಯಾ ಕಾಲೇಜುಗಳಿಗೆ ಚಿಕಿತ್ಸೆಗಳಿಗೆಂದು ಹೊರಗಡೆ ಕರೆದುಕೊಂಡು ಹೋಗಲಾಗಿತ್ತು.
ಇದನ್ನು ವಿಕಾಸ್ ಯಾದವ್ ಪರ ವಕೀಲ ಸಮರ್ಥಿಸಿಕೊಂಡಿದ್ದಾರೆ. ನನ್ನ ಕಕ್ಷಿದಾರ ನಿಜವಾಗಿಯೂ ದೈಹಿಕವಾಗಿ ಅನಾರೋಗ್ಯಗೊಂಡಿದ್ದಾರೆ. ಹಾಗಾಗಿ ಅವರಿಗೆ ಪೂರಕ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.
ಸುದ್ದಿ ಬಹಿರಂಗವಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ಅಧಿಕಾರಿಗಳಿಂದ ಉಂಟಾಗಿರುವ ಪ್ರಮಾದದ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ; ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ.