ಜನಸಾಮಾನ್ಯರ ನಿದ್ದೆಗೆಡಿಸಿರುವ ಬೆಲೆಯೇರಿಕೆ ಕುರಿತು ನಿಲುವಳಿ ಗೊತ್ತುವಳಿ ಮೇಲೆ ಚರ್ಚೆ ನಡೆಯಬೇಕು ಎಂಬ ಪ್ರತಿಪಕ್ಷಗಳ ಒಕ್ಕೊರಲಿನ ಬೇಡಿಕೆಗೆ ಸೊಪ್ಪು ಹಾಕದೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ತನ್ನ ಉದ್ಧಟತನವನ್ನು ಮುಂದುವರಿಸಿದ್ದು, ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನೂ ಸೋಮವಾರಕ್ಕೆ ಮುಂದೂಡಲಾಗಿದೆ.
ಬೆಲೆಯೇರಿಕೆ ಕುರಿತು ಕಲಾಪ ಪೋಲಾಗುತ್ತಿರುವುದು ಇದು ಸತತ ನಾಲ್ಕನೇ ದಿನ. ಜುಲೈ 26ರಂದು ಕಲಾಪ ಆರಂಭವಾಗಿತ್ತಾದರೂ, ಅಂದು ಸಂಪ್ರದಾಯದಂತೆ ಶ್ರದ್ಧಾಂಜಲಿ ಮತ್ತಿತರ ಕಾರ್ಯಗಳಿಗೆ ಸದನವನ್ನು ಮೀಸಲಿಡಲಾಗಿತ್ತು. ಮರುದಿನ ಅಂದರೆ ಮಂಗಳವಾರದಿಂದ ಉಭಯ ಸದನಗಳು ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳ ವೇದಿಕೆಯಾಗಿದ್ದವು. ಅಂದಿನಿಂದ ಸರಿಯಾಗಿ ಒಂದು ಗಂಟೆಯೂ ಕಲಾಪ ನಡೆದಿಲ್ಲ.
ಇಂದು ಬೆಳಿಗ್ಗೆ 11 ಗಂಟೆಗೆ ಉಭಯ ಸದನಗಳ ಕಲಾಪ ಆರಂಭವಾಗಿತ್ತಾದರೂ, ಪ್ರತಿಪಕ್ಷಗಳು ತಮ್ಮ ಒಗ್ಗಟ್ಟು ಮತ್ತು ಪಟ್ಟನ್ನು ಸಡಿಲಿಸದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಮುಂದೂಡಲಾಯಿತು.
ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿ (ಬಿಜೆಪಿ) ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ನಿಲುವಳಿ ಗೊತ್ತುವಳಿ ಬೇಡಿಕೆಯನ್ನು ಮುಂದಿಡುವುದನ್ನು ಮುಂದುವರಿಸಿದವು.
ಈ ಸಂದರ್ಭದಲ್ಲಿ ಮಾತನಾಡಿದ ಸುಷ್ಮಾ, ದಯವಿಟ್ಟು ಪ್ರಶ್ನೋತ್ತರ ವೇಳೆಯನ್ನು ಮುಂದಕ್ಕೆ ಹಾಕಿ, ನಮ್ಮ ಮನವಿಯಂತೆ ನಿಯಮ 184ರ ಅಡಿಯಲ್ಲಿ (ಮತ ಚಲಾವಣೆಗೆ ಅವಕಾಶವಿರುವ) ನಿಲುವಳಿಗೆ ಅವಕಾಶ ನೀಡಿ ಎಂದು ಸ್ಪೀಕರ್ ಮೀರಾ ಕುಮಾರ್ ಅವರಲ್ಲಿ ಕೇಳಿಕೊಂಡರು.
ಆದರೆ ಇದನ್ನು ತಳ್ಳಿ ಹಾಕಿದ ಸ್ಪೀಕರ್, ಭಾರೀ ಕೋಲಾಹಲದ ನಡುವೆಯೇ ಪ್ರಶ್ನೋತ್ತರ ವೇಳೆಯನ್ನು ಮುಂದುವರಿಸಲು ಯತ್ನಿಸಿದರು. ಇಂದು ಕೇಳಬೇಕೆಂದು ನಿಗದಿಯಾಗಿದ್ದ ಪ್ರಶ್ನೆಗಳಿಗೆ ಸ್ಪೀಕರ್ ಆಹ್ವಾನ ನೀಡುತ್ತಿದ್ದಂತೆ ಪ್ರತಿಪಕ್ಷಗಳ ಬಹುತೇಕ ಸಂಸದರು ಸ್ಪೀಕರ್ ಬಾವಿಗಿಳಿದು ತಮ್ಮ ಬೇಡಿಕೆಯನ್ನು ಈಡೇರಿಸಿ ಮುಂದುವರಿಯುವಂತೆ ಘೋಷಣೆಗಳನ್ನು ಕೂಗತೊಡಗಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಭನ್ಸಾಲ್, ವಿರೋಧ ಪಕ್ಷಗಳ ಬೇಡಿಕೆಯನ್ನು ತೀವ್ರವಾಗಿ ಆಕ್ಷೇಪಿಸಿದರು. ಅಲ್ಲದೆ ಉದ್ದೇಶಪೂರ್ವಕವಾಗಿ ಕಲಾಪವನ್ನು ನಡೆಯದಂತೆ ಮಾಡಲಾಗುತ್ತಿದೆ, ಅವರು ನಿಯಮಗಳ ಬಗ್ಗೆ ಮಾತನಾಡುತ್ತಾರೆ, ಆದರೆ ಸದನ ಮುಂದುವರಿಯಲು ಬಿಡುತ್ತಿಲ್ಲ ಎಂದರು.
ಪ್ರಶ್ನೋತ್ತರ ವೇಳೆ ನಡೆಸಲು ಬಿಡಿ ಎಂಬ ಮೀರಾ ಕುಮಾರ್ ಮನವಿಗೆ ಸಂಸದರು ಯಾವುದೇ ಬೆಲೆ ಕೊಡದ ಹಿನ್ನೆಲೆಯಲ್ಲಿ ಮೊದಲು ಅಪರಾಹ್ನದವರೆಗೆ ಕಲಾಪವನ್ನು ಮುಂದೂಡಿದರು. ಆದರೆ ನಂತರ ದಿನದ ಮಟ್ಟಿಗೆ ಕಲಾಪವನ್ನು ಮುಂದೂಡಿದ್ದಾರೆ. ಶನಿವಾರ ಕಲಾಪಗಳು ನಡೆಯದೇ ಇರುವುದರಿಂದ ಸೋಮವಾರ ಮತ್ತೆ ಕಲಾಪ ಆರಂಭವಾಗಲಿದೆ.
ಇದೇ ರೀತಿಯ ವಾತಾವರಣ ರಾಜ್ಯಸಭೆಯಲ್ಲೂ ಕಂಡು ಬಂತು. ಬೆಲೆಯೇರಿಕೆ ಕುರಿತು ನಿಯಮ 168ರ ಅಡಿಯಲ್ಲಿ ನಿಲುವಳಿ ಗೊತ್ತುವಳಿಗೆ ಅವಕಾಶ ನೀಡಬೇಕೆಂದು ಬಿಜೆಪಿಯ ಎಸ್.ಎಸ್. ಅಹ್ಲುವಾಲಿಯಾ ಮತ್ತು ಶಿವಸೇನೆಯ ಮನೋಹರ್ ಜೋಶಿ ನೇತೃತ್ವದಲ್ಲಿ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಕಲಾಪನ್ನು ಸೋಮವಾರಕ್ಕೆ ಮುಂದೂಡಲಾಯಿತು.