ಇತ್ತೀಚೆಗಷ್ಟೇ 12 ಸ್ಥಾನಗಳಿಗೆ ನಡೆದಿದ್ದ ಆಂಧ್ರಪ್ರದೇಶದ ತೆಲಂಗಾಣ ಪ್ರಾಂತ್ಯದ ಉಪ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಗೆದ್ದುಕೊಂಡು, ಇನ್ನೂ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಈ ಪ್ರಾಂತ್ಯದ ಜನತೆಯ ಭಾವನೆಗಳನ್ನು ಗೆದ್ದಿರುವುದು ಸ್ಪಷ್ಟವಾಗಿದೆ.
ಟಿಆರ್ಎಸ್ ಹೊರತುಪಡಿಸಿ ಗೆಲುವು ಸಾಧಿಸಿದ ಮತ್ತೊಂದು ಪಕ್ಷ ಬಿಜೆಪಿ. ನಿಜಾಮಾಬಾದ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ. ಶ್ರೀನಿವಾಸ್ ಅವರನ್ನು ಭಾರೀ ಅಂತರದಿಂದ ಬಿಜೆಪಿಯ ಲಕ್ಷ್ಮಿ ನಾರಾಯಣ ಸೋಲಿಸಿದ್ದಾರೆ. ಮಹಾ ಚುನಾವಣೆಯಲ್ಲೂ ಶ್ರೀನಿವಾಸ್, ನಾರಾಯಣ ಅವರೆದುರು ಪರಾಜಯ ಅನುಭವಿಸಿದ್ದರು.
ಇದರಿಂದ ಶ್ರೀನಿವಾಸ್ ತೀವ್ರ ಹಿನ್ನಡೆ ಅನುಭವಿಸಿದಂತಾಗಿದೆ. ಮುಖ್ಯಮಂತ್ರಿ ಕೆ. ರೋಸಯ್ಯ ನಂತರದ ಪ್ರಮುಖ ನಾಯಕ ಮತ್ತು ಮುಂದಿನ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದ ಶ್ರೀನಿವಾಸ್‌ಗೆ ಈಗ ಕನಿಷ್ಠ ಸಂಪುಟ ಸೇರ್ಪಡೆಯೂ ಅಸಾಧ್ಯವಾಗಿದೆ.
ಸಿದ್ದಿಪೇಟ್, ಸಿರ್ಪುರ್, ಮಂಚಿರ್ಯಾಲ್, ಧರ್ಮಪುರಿ ಮತ್ತು ಚೆನ್ನೂರು ಕ್ಷೇತ್ರಗಳಲ್ಲಿ ತನ್ನ ಸ್ಥಾನಗಳನ್ನು ಉಳಿಸಿಕೊಂಡಿರುವ ಟಿಆರ್ಎಸ್, ತೆಲುಗು ದೇಶಂ ಪಕ್ಷದ ವಶದಲ್ಲಿದ್ದ ವೇಮುಲವಾಡಾ ಕ್ಷೇತ್ರವನ್ನೂ ತನ್ನ ತೆಕ್ಕೆಗೆ ಎಳೆದುಕೊಂಡಿದೆ.
ಅಲ್ಲದೆ ಬಾಕಿ ಉಳಿದಿರುವ ಐದು ಕ್ಷೇತ್ರಗಳಲ್ಲೂ ಟಿಆರ್ಎಸ್ ಮುನ್ನಡೆ ಪಡೆದುಕೊಂಡಿದ್ದು, ಬಹುತೇಕ ಅವುಗಳನ್ನು ಗೆದ್ದುಕೊಳ್ಳಲಿದೆ. ಇದರೊಂದಿಗೆ ಟಿಆರ್ಎಸ್ ತೆಲಂಗಾಣ ಪ್ರಾಂತ್ಯದ ಜನತೆಯ ಮನಸ್ಸನ್ನು ಗೆದ್ದಿರುವುದು ಸ್ಪಷ್ಟವಾಗಿದೆ.
ಆಂಧ್ರಪ್ರದೇಶದಿಂದ ತೆಲಂಗಾಣವನ್ನು ಪ್ರತ್ಯೇಕಗೊಳಿಸಿ, ರಾಜ್ಯದ ಸ್ಥಾನ-ಮಾನವನ್ನು ನೀಡಬೇಕೆಂದು ಟಿಆರ್ಎಸ್ ಭಾರೀ ಹೋರಾಟವನ್ನು ನಡೆಸುತ್ತಾ ಬಂದಿತ್ತು. ಇದಕ್ಕಾಗಿ ಹಲವರು ಪ್ರಾಣವನ್ನೂ ತೆತ್ತಿದ್ದಾರೆ.