ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಶೀಲಿಬಾಜಿಗೆ ಎಸ್.ಎಂ. ಕೃಷ್ಣ, ಡಿಕೇಶಿಯನ್ನು ಸಂಪರ್ಕಿಸಿ! (SM Krishna | GG Masali | Congress | DK Shivakumar)
Bookmark and Share Feedback Print
 
ನೀವು ಸರಕಾರಿ ಉದ್ಯೋಗಿಯಾಗಿದ್ದರೆ, ಯಾವುದಾದರೂ ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾವಣೆ ಬೇಕಿದೆಯೇ? ಹಾಗಿದ್ದರೆ ಕಾಂಗ್ರೆಸ್‌ನ ಪುಡಾರಿಗಳನ್ನು ಮುಲಾಜಿಲ್ಲದೆ ಸಂಪರ್ಕಿಸಿ. ಖಂಡಿತಾ ನಿಮ್ಮ ಕೆಲಸ ನಡೆದೇ ನಡೆಯುತ್ತದೆ. ಇದಕ್ಕೆ ಸಿಕ್ಕಿರುವ ಉದಾಹರಣೆಯೊಂದು ಇಲ್ಲಿದೆ.

ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದುಕೊಂಡಿರುವ ವರದಿಯಿಂದ ಬಹಿರಂಗವಾಗಿರುವ ಅಂಶವಿದು. ಅದರ ಪ್ರಕಾರ ಇದೀಗ ವಿದೇಶಾಂಗ ಸಚಿವರಾಗಿರುವ ಎಸ್.ಎಂ. ಕೃಷ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್, ಹಿರಿಯ ಕಾಂಗ್ರೆಸ್ಸಿಗ ಅಜಿತ್ ಜೋಗಿ, ಛಗನ್ ಭುಜಬಲ್ ಮುಂತಾದವರ ಶಿಫಾರಸುಗಳನ್ನು ಪಡೆದುಕೊಂಡು ಬೃಹನ್ಮುಂಬೈ ಮಹಾನಗರ ಪಾಲಿಕೆಯಲ್ಲಿ ವಶೀಲಿಬಾಜಿ ನಡೆಸಲಾಗಿದೆ.

ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಇಂಜಿನಿಯರುಗಳು ಮತ್ತು ಉಪ ಇಂಜಿನಿಯರುಗಳಿಗಾಗಿ ಬಹುತೇಕ ಶಿಫಾರಸುಗಳನ್ನು ರಾಜಕಾರಣಿಗಳು ಮಾಡಿದ್ದಾರೆ. ಆಡಳಿತ ಪಕ್ಷದ ಸಚಿವರುಗಳು, ಮಾಜಿ ಸಚಿವರುಗಳು, ಸಂಸದರು ಮತ್ತು ಶಾಸಕರು ಸೇರಿದಂತೆ ಹತ್ತು ಹಲವು ಮಂದಿ ಇಂತಹ ರೆಕಮಂಡೇಶನ್‌ಗಳನ್ನು ಮಾಡಿದ್ದಾರೆ.

ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಾಲ್ಗಳಿ ಎಂಬವರು ಇದನ್ನು ಬಹಿರಂಗಪಡಿಸಿದ್ದಾರೆ ಎಂದು 'ಮಿಡ್-ಡೇ' ಪತ್ರಿಕೆ ವರದಿ ಮಾಡಿದೆ. ಅದರ ಪ್ರಕಾರ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇಂಜಿನಿಯರುಗಳ ವರ್ಗಾವಣೆ ಮತ್ತು ನೇಮಕ ಮುಂತಾದ ಕೆಲಸಗಳಿಗಾಗಿ ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರು ಪತ್ರಗಳನ್ನು ಬರೆದಿದ್ದಾರೆ.

ಇಂತಹ ರಾಜಕೀಯ ಹಸ್ತಕ್ಷೇಪಗಳು ಖಂಡಿತಾ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಅದು ಯಾವುದೇ ರೀತಿಯ ಶಿಫಾರಸುಗಳಿರಬಹುದು, ಇದರಿಂದಾಗಿ ನೈಜ ಪ್ರತಿಭೆಗಳು ವಂಚನೆಗೊಳಗಾಗುತ್ತವೆ ಮತ್ತು ಭ್ರಷ್ಟಾಚಾರ ಹೆಚ್ಚುತ್ತದೆ ಎಂದು ಅನಿಲ್ ಅಭಿಪ್ರಾಯಪಟ್ಟಿದ್ದಾರೆ.

ಕೃಷ್ಣ-ಡಿಕೇಶಿ ಪ್ರಭಾವ...
ಇದು ಎಸ್.ಎಂ. ಕೃಷ್ಣ ಸಂಸದರಾಗಿದ್ದಾಗ ಮಾಡಿರುವ ಶಿಫಾರಸು. ಕನಕಪುರ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮೂಲಕ ಬಂದಿದ್ದ ಮನವಿಯೊಂದನ್ನು ಸ್ವೀಕರಿಸಿದ್ದ ಕೃಷ್ಣ, ಅದನ್ನು ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಅವರಿಗೆ ತನ್ನ ಪತ್ರದ ಶಿಫಾರಸಿನೊಂದಿಗೆ ರವಾನಿಸಿದ್ದರು.

ಮಹಾನಗರ ಪಾಲಿಕೆಯ ರಸ್ತೆ ನಿರ್ಮಾಣ ಇಲಾಖೆಯಲ್ಲಿದ್ದ ವಿಕಲಚೇತನ ಸಬ್ ಇಂಜಿನಿಯರ್ ಜಿ.ಜಿ. ಮಸಾಲಿ ಎಂಬವರನ್ನು ಕಟ್ಟಡ ನಿರ್ಮಾಣ ಪ್ರಸ್ತಾಪ ಇಲಾಖೆಗೆ ವರ್ಗಾವಣೆ ಮಾಡಬೇಕು ಎಂದು ಡಿಕೇಶಿ ಮನವಿ ಹಿನ್ನೆಲೆಯಲ್ಲಿ ಕೃಷ್ಣ ಶಿಫಾರಸು ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯತ್ನಿಸಿದಾಗ, ಎಸ್.ಎಂ. ಕೃಷ್ಣ ಅವರು ಬ್ಯುಸಿಯಾಗಿದ್ದಾರೆ ಎಂಬ ಉತ್ತರ ಬಂದಿದೆ. ವಿದೇಶಾಂಗ ಸಚಿವರು ಪ್ರಧಾನ ಮಂತ್ರಿ ಮತ್ತು ಅವರ ನಿಯೋಗದ ಜತೆ ಚರ್ಚೆಯಲ್ಲಿ ನಿರತರಾಗಿದ್ದಾರೆ ಎಂದು ನವದೆಹಲಿಯ ಅವರ ನಿವಾಸದ ಮೂಲಗಳು ಹೇಳಿವೆ.

ಅಜಿತ್ ಜೋಗಿ ಶಿಫಾರಸು...
ಕೊಳೆಗೇರಿ ಪುನಶ್ಚೇತನಾ ಇಲಾಖೆಯಲ್ಲಿದ್ದ ಡಿ.ಎಂ. ಸೂರ್ಯವಂಶಿ ಎಂಬ ಸಿವಿಲ್ ಇಂಜಿನಿಯರ್‌ನನ್ನು ಕಟ್ಟಡ ನಿರ್ಮಾಣ ಪ್ರಸ್ತಾಪ ಇಲಾಖೆಗೆ ವರ್ಗಾಯಿಸುವಂತೆ ಹಿರಿಯ ಕಾಂಗ್ರೆಸ್ಸಿಗ ಅಜಿತ್ ಜೋಗಿಯವರು 2008ರ ಮೇ 23ರಂದು ಆಗಿನ ಮುಖ್ಯಮಂತ್ರಿ ದೇಶ್‌ಮುಖ್ ಅವರಿಗೆ ಶಿಫಾರಸು ಮಾಡಿದ್ದರು.

ಅಲ್ಲದೆ ವಿಶೇಷವಾಗಿ ಮನವಿ ಮಾಡಿಕೊಂಡಿದ್ದ ಜೋಗಿ, ತಾವೇ ಹೆಚ್ಚಿನ ಆಸಕ್ತಿ ವಹಿಸಿ ಸೂರ್ಯವಂಶಿಯವನ್ನು ತಕ್ಷಣವೇ ಯಾವುದೇ ವಿಳಂಬವಿಲ್ಲದೆ ಸಂಬಂಧಪಟ್ಟ ಇಲಾಖೆಗೆ ವರ್ಗಾವಣೆ ಮಾಡಬೇಕು ಎಂದಿದ್ದರು!

ಛಗನ್ ಭುಜಬಲ್...
ಪ್ರಸಕ್ತ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿರುವ ಎನ್‌ಸಿಪಿ ನಾಯಕ ಛಗನ್ ಭುಜಬಲ್, 2008ರ ಜುಲೈಯಲ್ಲಿ ತಾನು ಲೋಕೋಪಯೋಗಿ ಸಚಿವನಾಗಿದ್ದಾಗ ಮಹಾನಗರ ಪಾಲಿಕೆ ಆಯುಕ್ತ ಜೈರಾಜ್ ಪಾಠಕ್ ಅವರಿಗೆ ಪತ್ರ ಬರೆದಿದ್ದರು.

ಕಟ್ಟಡ ನಿರ್ಮಾಣ ಪ್ರಸ್ತಾವನೆ ಇಲಾಖೆಯ ಸಹಾಯಕ ಇಂಜಿನಿಯರ್ ದೀಪಕ್ ಕುಲಕರ್ಣಿಯನ್ನು ವರ್ಗಾವಣೆ ಮಾಡಬೇಕೆಂದು ಭುಜಬಲ್ ಆಯುಕ್ತರಿಗೆ ಪತ್ರ ಬರೆದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ