ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸತ್ಯಕ್ಕೆ ತಲೆ ಬಾಗುತ್ತೇನೆ, ಸುಳ್ಳಿಗೆ ಹೆದರಲ್ಲ: ಮೋದಿ (Narendra Modi | CBI | Congress | Amit Shah)
Bookmark and Share Feedback Print
 
ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಹತ್ಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ನನ್ನನ್ನು ಹೆದರಿಸಲು ಯಾರಾದರೂ ಬಯಸುತ್ತಿದ್ದರೆ ಅವರಿಗೆ ನಾನು ಹೇಳ ಬಯಸುವುದು ಇಷ್ಟೇ, ಈ ಮೋದಿ ಸತ್ಯಕ್ಕೆ ತಲೆ ಬಾಗುತ್ತಾನೆ, ಆದರೆ ಸಾವಿರ ಸುಳ್ಳು ಎದುರಾದರೂ ಅದನ್ನು ಲೆಕ್ಕಿಸುವುದಿಲ್ಲ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಎದೆ ತಟ್ಟಿಕೊಂಡಿದ್ದಾರೆ.

ಗುಜರಾತಿನಲ್ಲಿ ದೇಶಪ್ರೇಮಿಗಳು ಮತ್ತು ದೇಶದ್ರೋಹಿ ರಾಕ್ಷಸರ ನಡುವಿನ ಯುದ್ಧ ಆರಂಭವಾಗಿದೆ. ಆದರೆ ನೆನಪಿಡಿ, ಇದು ಗುಜರಾತ್. ಇಲ್ಲಿ ರಾಷ್ಟ್ರ ವಿರೋಧಿಗಳು ನೆಲ ಕಚ್ಚುತ್ತಾರೆ ಎಂದು ಭಾವ್‌ನಗರ್‌ ಜಿಲ್ಲೆಯ ಪಾಲಿಟಾನಾದಲ್ಲಿ ಸಾರ್ವಜನಿಕ ರ‌್ಯಾಲಿಯಲ್ಲಿ ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಸಿಬಿಐ ವಿರುದ್ಧ ಪರೋಕ್ಷವಾಗಿ ದಾಳಿ ನಡೆಸಿದ ಅವರು, ನನ್ನನ್ನು ಹೆದರಿಸಬಹುದೆಂದು ನೀವೇನಾದರೂ ಯೋಚಿಸಿದ್ದರೆ ನಿಮ್ಮ ಕಿವಿಗಳನ್ನು ಸರಿಯಾಗಿ ತೆರೆದು ಕೇಳಿ-- ಈ ಮೋದಿ ಸತ್ಯಕ್ಕೆ ತಲೆ ಬಾಗುತ್ತಾನೆ. ಆದರೆ ಸುಳ್ಳಿನ ವಿರುದ್ಧ 100 ಬಾರಿಯಾದರೂ ಹೋರಾಟ ಮಾಡುತ್ತಾನೆ ಎಂದರು.

ದೇಶಪ್ರೇಮಿಗಳು ಮತ್ತು ದೇಶ ವಿರೋಧಿಗಳ ನಡುವಿನ ಯುದ್ಧದಲ್ಲಿ ಗುಜರಾತ್ ಜಯ ಗಳಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿರುವ ಮುಖ್ಯಮಂತ್ರಿ, ಈ ದೇಶವು ಭಯೋತ್ಪಾದಕರ ಪರವಹಿಸಿ ನಿಲ್ಲುವವರ, ರಾಕ್ಷಸರ ಹಕ್ಕುಗಳಿಗಾಗಿ ಹೋರಾಡುವವರ, ರಾಷ್ಟ್ರ ವಿರೋಧಿಗಳ ಮತ್ತು ಭೂಗತ ಚಟುವಟಿಕೆಗಳಿಗೆ ಸಂಬಂಧಪಟ್ಟವರನ್ನು ಬೆಂಬಲಿಸುವವರ ಕಡೆ ಯಾವತ್ತೂ ನಿಲ್ಲುವುದಿಲ್ಲ ಎಂದರು.

ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಮಾಜಿ ಗೃಹಸಚಿವ ಅಮಿತ್ ಶಾ ಅವರನ್ನು ಬಂಧಿಸಿರುವ ಸಿಬಿಐ ಇದೀಗ ಮೋದಿಯವರನ್ನೂ ಪ್ರಶ್ನಿಸಲು ನಿರಂತರವಾಗಿ ಯತ್ನಿಸುತ್ತಿದೆ ಎಂದು ವರದಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ತಾನು ಯಾವುದಕ್ಕೂ ಸಿದ್ಧನಿದ್ದೇನೆ ಎಂಬ ಪರೋಕ್ಷ ಸಂದೇಶವನ್ನು ಮೋದಿ ರವಾನಿಸಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಗುಜರಾತಿನಲ್ಲಿ ಶಾಂತಿ ಮತ್ತು ಅಭಿವೃದ್ಧಿ ಸಾಗುತ್ತಿದೆ. ಆದರೆ ಇದನ್ನು ಬುಡಮೇಲು ಮಾಡಲು, ಗುಜರಾತಿನ ಪ್ರಗತಿಯನ್ನು ನಾಶ ಮಾಡಲು ಅವರು ಯತ್ನಿಸುತ್ತಿದ್ದಾರೆ. ಅವರಿಗೆ ಗುಜರಾತಿನ ಅಭಿವೃದ್ಧಿ ಹೊಟ್ಟೆಕಿಚ್ಚು ತರಿಸುತ್ತಿದೆ ಎಂದು ಮೋದಿ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ.

ಮೋದಿ ಪಾಪದ ಕೊಡ ತುಂಬಿದೆ...
ಹೀಗೆಂದು ಮೋದಿ ಟೀಕೆಗೆ ಪ್ರತಿಕ್ರಿಯೆ ನೀಡಿರುವುದು ಕಾಂಗ್ರೆಸ್. ಗುಜರಾತ್ ಮುಖ್ಯಮಂತ್ರಿಯವರು ತನ್ನದೇ ಪಾಪಗಳಿಂದ ಇದೀಗ ಹೆದರಿಕೊಳ್ಳುವಂತಾಗಿದೆ. ಹಿಂದೂ ಪುರಾಣಗಳಲ್ಲಿರುವಂತೆ ಸಹಜವಾಗಿ ಅವರ ಪಾಪಗಳಿಗೆ ಅವರೇ ಹೊಣೆಗಾರರು ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಟೀಕಿಸಿದ್ದಾರೆ.

ಮೋದಿ ಹಿಂದೂಗಳ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಆದರೆ ಅವರನ್ನು ಕಾನೂನು ಸುಮ್ಮನೆ ಬಿಡುವುದಿಲ್ಲ. ಅದು ಅದರದ್ದೇ ಹಾದಿಯಲ್ಲಿ ಸಾಗುತ್ತಾ ಅವರಿಗೆ ಮುಳ್ಳಾಗಲಿದೆ ಎಂದು ತಿವಾರಿ ಅಭಿಪ್ರಾಯಪಟ್ಟರು.
ಸಂಬಂಧಿತ ಮಾಹಿತಿ ಹುಡುಕಿ