ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಪ್ರತಿನಿಧಿಗಳ ಗದ್ದಲಕ್ಕೆ 40 ಕೋಟಿ ರೂ. ಪೋಲು! (Parliament | Opposition | price rise | adjournment motion)
Bookmark and Share Feedback Print
 
ಮಳೆಗಾಲದ ಸಂಸತ್ ಅಧಿವೇಶನದ ಮೊದಲ ವಾರದಲ್ಲಿ ತೆರಿಗೆ ಪಾವತಿದಾರರ ಬರೋಬ್ಬರಿ 40 ಕೋಟಿ ರೂಪಾಯಿಗಳನ್ನು ಪೋಲು ಮಾಡಲಾಗಿದೆ. ಯಾವುದೇ ಚರ್ಚೆಯಿಲ್ಲದೆ ಇಷ್ಟೊಂದು ಮೊತ್ತ ವ್ಯರ್ಥವಾಗಿದೆ. ಇದಕ್ಕೆ ಆಡಳಿತ ಪಕ್ಷದಷ್ಟೇ ಪ್ರತಿಪಕ್ಷಗಳೂ ಕಾರಣ ಎಂಬುದು ನಿರ್ವಿವಾದ.

ಸಂಸತ್ತಿನ ಅಧಿವೇಶನಗಳಿಗೆಂದು ವಾರ್ಷಿಕವಾಗಿ ಸಂಸದೀಯ ವ್ಯವಹಾರಗಳ ಸಚಿವಾಲಯಕ್ಕೆ ಬಜೆಟ್‌ನಲ್ಲಿ 535 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗುತ್ತದೆ. ಅಂದರೆ ಇದು 70 ದಿನಗಳ ಅವಧಿಗೆ ಮೀಸಲಾಗಿಡುವ ಮೊತ್ತ.

ಪ್ರತಿದಿನ 7.65 ಕೋಟಿ ರೂಪಾಯಿಗಳನ್ನು ಉಭಯ ಸದನಗಳಿಗೆ ಕಲಾಪ ನಡೆಯುವ ಸಂದರ್ಭದಲ್ಲಿ ವ್ಯಯ ಮಾಡಲಾಗುತ್ತದೆ. ಅದರಂತೆ ಮುಂಗಾರು ಅಧಿವೇಶನದ ಮೊದಲ ವಾರ ಕಾರ್ಯನಿರ್ವಹಿಸಿದ ಐದು ದಿನಗಳಿಗಾಗಿ 38.25 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ.

ತೆರಿಗೆದಾರರ ಹಣವನ್ನು ಇಷ್ಟೊಂದು ಪ್ರಮಾಣದಲ್ಲಿ ಅಧಿವೇಶನಕ್ಕಾಗಿ ವ್ಯಯಿಸಿದರೂ ಪ್ರತಿದಿನ ನಡೆಯುವ ಕಲಾಪಕ್ಕೆ ಸರಿಸುಮಾರು 100ರಷ್ಟು ಸಂಸದರು ಗೈರು ಹಾಜರಾಗುತ್ತಾರೆ.

ಮುಂಗಾರು ಅಧಿವೇಶನ ಆರಂಭವಾದ ಜುಲೈ 26ರಂದು 132 ಸಂಸದರು ಅಧಿವೇಶನಕ್ಕೆ ಬಂದಿರಲಿಲ್ಲ. ಮುಂದಿನ ನಾಲ್ಕು ದಿನಗಳ ಹಾಜರಾತಿಯೂ ಇದಕ್ಕಿಂತ ಭಿನ್ನವಲ್ಲ. ಜುಲೈ 27ರಂದು 101, ಜುಲೈ 28ರಂದು 91 ಹಾಗೂ ಜುಲೈ 29ರಂದು 92 ಮಂದಿ ಜನಪ್ರತಿನಿಧಿಗಳು ಸಂಸತ್ತಿನಿಂದ ದೂರವೇ ಉಳಿದಿದ್ದರು.

ಈ ಕುರಿತು ಜನಪ್ರತಿನಿಧಿಗಳನ್ನೇ ಪ್ರಶ್ನಿಸಿದರೆ, ತೆರಿಗೆದಾರರ ಹಣ ನಷ್ಟವಾಗಿರುವುದು ಹೌದು; ಆದರೆ ಬೆಲೆಯೇರಿಕೆ ವಿಚಾರವು ಮಹತ್ವದ್ದಾಗಿದೆ. ಈ ಕುರಿತು ಜನರ ಹಿತವನ್ನು ಬಲಿಕೊಡುತ್ತಿರುವ ಸರಕಾರದ ವಿರುದ್ಧ ಈ ರೀತಿಯ ಹೋರಾಟ ಅನಿವಾರ್ಯ ಎನ್ನುತ್ತಾರೆ.

ಭಾರೀ ಪ್ರತಿಭಟನೆ, ಕೋಲಾಹಲಗಳಿಂದಾಗಿ ಮುಂಗಾರು ಅಧಿವೇಶನದ ಮೊದಲ ವಾರ ಯಾವುದೇ ಫಲಪ್ರದ ಅಂಶಗಳು ಲೋಕಸಭೆ ಅಥವಾ ರಾಜ್ಯಸಭೆಗಳಲ್ಲಿ ನಡೆದಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ಬಿಜೆಪಿ ನೇತೃತ್ವದ ಪ್ರತಿಪಕ್ಷಗಳು ಬೆಲೆಯೇರಿಕೆ ಕುರಿತು ನಿಲುವಳಿ ಸೂಚನೆ ಮಂಡಿಸಲು ಬೇಡಿಕೆ ಮುಂದಿಟ್ಟು ಪಟ್ಟು ಹಿಡಿದಿರುವುದು.

ಆದರೆ ಉದ್ಧಟತನ ಮೆರೆದಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಯಾವುದೇ ಕಾರಣಕ್ಕೂ ನಿಲುವಳಿ ಗೊತ್ತುವಳಿಗೆ ಸಿದ್ಧವಿಲ್ಲ ಎಂದಿತ್ತು. ಪೂರಕವಾಗಿ ಸ್ಪೀಕರ್ ಕೂಡ, ಬೆಲೆಯೇರಿಕೆ ಕುರಿತು ಸರಕಾರ ಕ್ರಮಗಳನ್ನು ಕೈಗೊಂಡಿರುವುದರಿಂದ ನಿಲುವಳಿ ಸೂಚನೆ ಮಂಡಿಸಲು ಅರ್ಹವಾದ ವಿಚಾರವಲ್ಲ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ