ಆಂಧ್ರಪ್ರದೇಶದ ತೆಲಂಗಾಣ ಪ್ರಾಂತ್ಯದಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ವಿಧಾನಸಭಾ ಉಪಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯು ಭರ್ಜರಿ ಜಯ ದಾಖಲಿಸಿದೆ. ನಡೆದಿದ್ದ 12 ಸ್ಥಾನಗಳ ಚುನಾವಣೆಯಲ್ಲಿ 11 ಸ್ಥಾನಗಳನ್ನು ಬಗಲಿಗೆ ಹಾಕಿಕೊಂಡಿರುವ ಟಿಆರ್ಎಸ್ ಬೀಗುತ್ತಿದ್ದು, ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷಗಳು ಮುಖಭಂಗ ಅನುಭವಿಸಿವೆ.
ಹುಜುರಾಬಾದ್‌ನಲ್ಲಿ ಟಿಆರ್ಎಸ್ ಅಭ್ಯರ್ಥಿ ಇ. ರಾಜೇಂದ್ರ ತನಗೆ ನಿಕಟ ಹೋರಾಟ ನೀಡಿದ್ದ ಟಿಡಿಪಿ ಅಭ್ಯರ್ಥಿಯನ್ನು 55,360 ಮತಗಳ ಅಂತರದಿಂದ, ಕಾಂಗ್ರೆಸ್‌ನ ಎದುರಾಳಿ ಜೆ. ರತ್ನಾಕರ ರಾವ್ ವಿರುದ್ಧ 45,895 ಮತಗಳ ಅಂತರದಿಂದ ಟಿಆರ್ಎಸ್‌ನ ಕೆ. ವಿದ್ಯಾಸಾಗರ ರಾವ್ ಗೆಲುವು ಸಾಧಿಸಿದ್ದಾರೆ.
PTI
ಸಿರ್ಸಿಲ್ಲಾದಲ್ಲಿ ಟಿಆರ್ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಪುತ್ರ ಕೆ.ಟಿ. ರಾಮ ರಾವ್ 44,642 ಮತಗಳಿಂದ ಕಾಂಗ್ರೆಸ್ ಪ್ರತಿಸ್ಪರ್ಧಿ ಕೆ.ಕೆ. ಮಹೀಂದರ್ ರೆಡ್ಡಿಯವರನ್ನು ಮಣಿಸಿದ್ದಾರೆ. ಯೆಲ್ಲಾರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಎದುರಾಳಿ ಮೊಹಮ್ಮದ್ ಆಲಿ ಸಾಬಿರ್ ಅವರನ್ನು ಟಿಆರ್ಎಸ್‌ನ ಇ. ರವೀಂದ್ರ ರೆಡ್ಡಿ ಸೋಲಿಸಿದ್ದಾರೆ.
ವಾರಂಗಲ್ ಪಶ್ಚಿಮ ಕ್ಷೇತ್ರದಲ್ಲಿ ಟಿಆರ್ಎಸ್‌ನ ಡಿ. ವಿನಯ್ ಭಾಸ್ಕರೆಯವರು ಕಾಂಗ್ರೆಸ್ ವಿರುದ್ಧ 67,524 ಮತಗಳಿಂದ ಮೇಲುಗೈ ಸಾಧಿಸಿದ್ದಾರೆ.
ಉಳಿದ ಐದು ಕ್ಷೇತ್ರಗಳ ಮತ ಎಣಿಕೆ ವಿಳಂಬವಾದ ಕಾರಣ ನಂತರ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಈ ಎಲ್ಲಾ ಕ್ಷೇತ್ರಗಳಲ್ಲೂ ಟಿಆರ್ಎಸ್ ಗೆಲುವು ಸಾಧಿಸಿದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.
ಅದೇ ಹೊತ್ತಿಗೆ ಬಿಜೆಪಿಯು ತಾನು ಸ್ಪರ್ಧಿಸಿದ್ದ ಏಕೈಕ ಕ್ಷೇತ್ರ ನಿಜಾಮಾಬಾದ್‌ನ್ನು ಉಳಿಸಿಕೊಂಡಿದೆ. ನಿಜಾಮಾಬಾದ್ ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ. ಶ್ರೀನಿವಾಸ್ ಅವರನ್ನು ಭಾರೀ ಅಂತರದಿಂದ ಬಿಜೆಪಿಯ ಲಕ್ಷ್ಮಿ ನಾರಾಯಣ ಸೋಲಿಸಿದ್ದಾರೆ. ಮಹಾ ಚುನಾವಣೆಯಲ್ಲೂ ಶ್ರೀನಿವಾಸ್, ನಾರಾಯಣ ಅವರೆದುರು ಪರಾಜಯ ಅನುಭವಿಸಿದ್ದರು.
ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ ಟಿಆರ್ಎಸ್‌ನ 10 ಹಾಗೂ ಟಿಡಿಪಿ ಮತ್ತು ಬಿಜೆಪಿ ತಲಾ ಒಬ್ಬೊಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆ ನಡೆದಿತ್ತು.
ಟಿಡಿಪಿಯಲ್ಲಿದ್ದು ರಾಜೀನಾಮೆ ನೀಡಿದ್ದ ಶಾಸಕ ನಂತರ ಟಿಆರ್ಎಸ್ ಸೇರಿಕೊಂಡು ಇದೀಗ ವೇಮುಲವಾಡಾ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.