ಸೊಹ್ರಾಬುದ್ದೀನ್ ಶೇಖ್ ಹತ್ಯೆಗಾಗಿ ಮಾರ್ಬಲ್ ವ್ಯಾಪಾರಿಗಳು ಮತ್ತು ರಾಜಸ್ತಾನದ ಮಾಜಿ ಗೃಹಸಚಿವರ ನಡುವೆ 10 ಕೋಟಿ ರೂಪಾಯಿಗಳ ವ್ಯವಹಾರ ನಡೆದಿತ್ತು ಎಂದು ಪ್ರತ್ಯಕ್ಷದರ್ಶಿ ಸಾಕ್ಷಿಯೊಬ್ಬ ಹೇಳಿದ್ದಾನೆ ಎಂದು ವರದಿಗಳು ಹೇಳಿವೆ.
ಸೊಹ್ರಾಬುದ್ದೀನ್ ಹತ್ಯೆಯ ಏಕೈಕ ಸಾಕ್ಷಿ ತುಳಸೀರಾಮ್ ಪ್ರಜಾಪತಿಯೊಂದಿಗೆ ಜೈಲಿನಲ್ಲಿ ಕೊಠಡಿ ಹಂಚಿಕೊಂಡಿದ್ದ ಆಜಂ ಖಾನ್ ಎಂಬಾತನೇ ಇದನ್ನು ಬಹಿರಂಗಪಡಿಸಿರುವುದು.
ಟಿವಿ ಚಾನೆಲ್ ಒಂದರ ಜತೆ ಮಾತನಾಡುತ್ತಿದ್ದ ಖಾನ್ ಪ್ರಕಾರ ಬಿಜೆಪಿ ನಾಯಕ ಮತ್ತು ರಾಜಸ್ತಾನದ ಮಾಜಿ ಗೃಹಸಚಿವ ಗುಲಾಬ್ ಚಾಂದ್ ಕಠಾರಿಯಾ ಅವರಿಗೆ ಸೊಹ್ರಾಬುದ್ದೀನ್‌ನನ್ನು ಮುಗಿಸುವಂತೆ ಆರ್.ಕೆ. ಮಾರ್ಬಲ್ಸ್ 10 ಕೋಟಿ ರೂಪಾಯಿಗಳನ್ನು ನೀಡಿತ್ತು. ಸೊಹ್ರಾಹುದ್ದೀನ್ ಮಾರ್ಬಲ್ ವ್ಯಾಪಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಕಾರಣಕ್ಕೆ ಈ ರೀತಿ ಮಾಡಲಾಗಿತ್ತು.
ಆರ್.ಕೆ. ಮಾರ್ಬಲ್ಸ್ ನೀಡಿದ್ದ ಹಣದ ಸ್ವಲ್ಪ ಮೊತ್ತವನ್ನು ಸಂಬಂಧಪಟ್ಟವರಿಗೆ ಹಂಚಿದ್ದ ಕಠಾರಿಯಾ, ಉಳಿದ ಹಣವನ್ನು ತಾನೇ ಇಟ್ಟುಕೊಂಡಿದ್ದರು ಎಂದು ಜೈಲಿನಲ್ಲಿರುವ ಸಂದರ್ಭದಲ್ಲಿ ತನಗೆ ತುಳಸೀರಾಂ ಹೇಳಿದ್ದ ಎಂದು ಖಾನ್ ವಿವರಣೆ ನೀಡಿದ್ದಾನೆ.
ಸೊಹ್ರಾಬುದ್ದೀನ್ ಕೊಲೆಯನ್ನು ನೋಡಿದ್ದ ಕಾರಣಕ್ಕಾಗಿ ಗುಜರಾತ್ ಮತ್ತು ರಾಜಸ್ತಾನ ಪೊಲೀಸರು ನಕಲಿ ಎನ್‌ಕೌಂಟರ್ ಮೂಲಕ ತುಳಸೀರಾಂನನ್ನು ಮುಗಿಸಿದ್ದರು. ಜೈಲಿನಿಂದ ಎರಡೂ ರಾಜ್ಯಗಳ ಪೊಲೀಸರು ಬಂದು ಆತನನ್ನು ಕರೆದುಕೊಂಡು ಹೋಗಿದ್ದರು ಎಂದಿರುವ ಖಾನ್, ಇಷ್ಟೆಲ್ಲ ಮಾಹಿತಿಗಳನ್ನು ಹೊಂದಿರುವ ನನ್ನ ಜೀವವೂ ಈಗ ಅಪಾಯದಲ್ಲಿದೆ ಎಂದಿದ್ದಾನೆ.
ನನ್ನ ಜೀವವೀಗ ಅಪಾಯದಲ್ಲಿದೆ. ಸತತವಾಗಿ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಆಜಂ ಖಾನ್ ತಿಳಿಸಿದ್ದಾನೆ.
ಸಂಬಂಧವೇ ಇಲ್ಲ: ಕಠಾರಿಯಾ ಆಜಂ ಖಾನ್ ಆರೋಪವನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಕಠಾರಿಯಾ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಸಿಬಿಐ ನನ್ನನ್ನು ಯಾವತ್ತೂ ಸಂಪರ್ಕಿಸಿಲ್ಲ. ಈ ಪ್ರಕರಣಕ್ಕೆ ಯಾವುದೇ ರೀತಿಯಲ್ಲೂ ನನಗೆ ಸಂಬಂಧವಿಲ್ಲ ಎನ್ನುವುದರ ಬಗ್ಗೆ ಶೇ.100ರಷ್ಟು ಭರವಸೆಯಿದೆ ಎಂದು ವಸುಂಧರಾ ರಾಜೆ ಸರಕಾರದಲ್ಲಿ ಗೃಹಸಚಿವರಾಗಿದ್ದ ಕಠಾರಿಯಾ ಸ್ಪಷ್ಟಪಡಿಸಿದ್ದಾರೆ.
ಸೊಹ್ರಾಬುದ್ದೀನ್ ಹತ್ಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಅವರನ್ನು ಸಿಬಿಐ ಈಗಾಗಲೇ ಬಂಧಿಸಿದೆ.