ಗುಜರಾತ್ ಶತ್ರುರಾಷ್ಟ್ರವೊಂದರ ಭಾಗವೆಂದು ಕೇಂದ್ರಕ್ಕೆ ಅನಿಸುತ್ತಿದೆಯೇ ಎಂದು ಪ್ರಶ್ನಿಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಮತ್ತು ಸಿಬಿಐ ವಿರುದ್ಧದ ದಾಳಿಯನ್ನು ಯಥಾವತ್ತಾಗಿ ಮುಂದುವರಿಸಿದ್ದಾರೆ.
ಗುಜರಾತ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ತುಂಬಿ ತುಳುಕುತ್ತಿದ್ದ ಜನತೆಯೆದುರು ಮುಷ್ಠಿ ಬಿಗಿ ಹಿಡಿದು ಹತ್ತಕ್ಕೂ ಹೆಚ್ಚು ಬಾರಿ 'ವಂದೇ ಮಾತರಂ' ಎಂದು ಪೂರ್ಣ ವಾಗ್ಝರಿಯಲ್ಲಿ ಸಾರಿದ ಮೋದಿ, 'ದೆಹಲಿ ಸುಲ್ತಾನರ ಕಿವಿಗಳಿಗೆ ಎಷ್ಟು ಜೋರಾಗಿ ಕೂಗಿ ಹೇಳಿದರೂ ಕೇಳದು. ಗುಜರಾತನ್ನು ದೆಹಲಿಯ ಸುಲ್ತಾನರು ಶತ್ರು ದೇಶದಂತೆ ಉಪಚರಿಸುತ್ತಿದ್ದಾರೆ' ಎಂದರು.
ನನ್ನ ವಿರುದ್ಧ ಏನಾದರೂ ಹೇಳಲಿ, ಸಹಿಸಿಕೊಳ್ಳಬಲ್ಲೆ. ಕಳೆದ ಎಂಟು ವರ್ಷಗಳಿಂದ ನನ್ನ ಹೆಸರನ್ನು ಕೆಡಿಸಲು ಅವರು ಎಲ್ಲಿಲ್ಲದ ಪ್ರಯತ್ನಗಳನ್ನು ಮಾಡಿದರು. ಆದರೆ ನನ್ನ ರಾಜ್ಯದ, ನನ್ನ ರಾಜ್ಯದ ನ್ಯಾಯಾಂಗ ವ್ಯವಸ್ಥೆಯನ್ನು ಶಂಕಿಸಿದರೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದ ಅವರು, ಭಯೋತ್ಪಾದನೆ ವಿರುದ್ಧ ಹೋರಾಡುವುದು ನನ್ನ ತಪ್ಪೇ ಎಂದು ಪ್ರಶ್ನಿಸಿದರು.
ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಿಬಿಐ ಮತ್ತು ಕೇಂದ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದ ಮುಖ್ಯಮಂತ್ರಿ, ಆ ಪಕ್ಷ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ಅವರು ಗುಜರಾತ್‌ನ ವಾತಾವರಣವನ್ನು ಕಲುಷಿತಗೊಳಿಸಲು ಯತ್ನಿಸುತ್ತಿದ್ದಾರೆ. ಅವರು ನಮ್ಮ ರಾಜ್ಯದ ವಕೀಲರು, ನ್ಯಾಯಾಧೀಶರು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಅಪಮಾನಗೊಳಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಪ್ರಕರಣವನ್ನು ಗುಜರಾತಿನಿಂದ ಬೇರೆ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಸಿಬಿಐ ಸುಪ್ರೀಂ ಕೋರ್ಟಿನಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್, ಗುಜರಾತ್‌ನ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಶಂಕೆಯ ಮಾತುಗಳನ್ನಾಡಿತ್ತು. ಇದಕ್ಕೆ ಮೋದಿ ಮೇಲಿನಂತೆ ಪ್ರತಿಕ್ರಿಯಿಸಿದರು.
ಯಾವುದೇ ರೀತಿಯ ಅನ್ಯಾಯವನ್ನು ನಾನು ಸಹಿಸಲಾರೆ. ನನಗೆ ಈ ಮುಖ್ಯಮಂತ್ರಿ ಪದವಿಯೆನ್ನುವುದು ಗುಜರಾತಿಗರ ಹಕ್ಕುಗಳು ಮತ್ತು ಗೌರವವನ್ನು ರಕ್ಷಿಸುವ ವಿಚಾರಕ್ಕೆ ಬಂದಾಗ ಏನೂ ಅಲ್ಲ. ನನಗೆ ನಿಮ್ಮ ಬೆಂಬಲವಿದ್ದರೆ ಸಾಕು. ಖಂಡಿತಾ ಭಯೋತ್ಪಾದನೆಯ ವಿರುದ್ಧದ ಹೋರಾಟದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದರು.