ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಕ್ತಸಿಕ್ತ ರವಿವಾರ; ಕಾಶ್ಮೀರ ಹಿಂಸಾಚಾರಕ್ಕೆ ಎಂಟು ಬಲಿ (Kashmir situation | Kashmir violence | Manmohan Singh | Jammu and Kashmir)
Bookmark and Share Feedback Print
 
ಕಾಶ್ಮೀರ ಕಣಿವೆಯ ನಾಗರಿಕರಿಗೆ ರವಿವಾರ ರಕ್ತಸಿಕ್ತ ಅಧ್ಯಾಯವಾಗಿ ಮಾರ್ಪಟ್ಟಿದೆ. ರಕ್ಷಣಾ ಪಡೆಗಳೊಂದಿಗಿನ ಪ್ರತ್ಯೇಕ ಘರ್ಷಣೆ ಮತ್ತು ಸ್ಫೋಟಕಗಳಿಂದಾಗಿ ಎಂಟು ಮಂದಿ ಸಾವನ್ನಪ್ಪಿದ್ದು, ಶುಕ್ರವಾರದ ನಂತರ ಒಟ್ಟು ಬಲಿಯಾದವರ ಸಂಖ್ಯೆ 14ಕ್ಕೇರಿದೆ.

ಶ್ರೀನಗರದ ಹೊರವಲಯದ ಕ್ರೂವ್ ಎಂಬಲ್ಲಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪರಿಣಾಮ ಐವರು ನಾಗರಿಕರು ಸಾವನ್ನಪ್ಪಿದರೆ, 35 ಮಂದಿ ಗಾಯಗೊಂಡರು. ಭಾರೀ ಸ್ಫೋಟಕಗಳನ್ನು ಶೇಖರಿಸಿಡಲಾಗಿದ್ದ ಪೊಲೀಸ್ ಠಾಣೆಗೆ ಆಕ್ರೋಶಿತ ಗುಂಪು ಬೆಂಕಿ ಹಚ್ಚಿದ್ದರಿಂದ ಪ್ರಬಲ ಸ್ಫೋಟ ಸಂಭವಿಸಿತ್ತು.

ಶ್ರೀನಗರದಿಂದ 20 ಕಿಲೋ ಮೀಟರ್ ದೂರದಲ್ಲಿರುವ ಈ ಪೊಲೀಸ್ ಠಾಣೆಯ ಮೇಲೆ ಪ್ರಚೋದಿತ ಗುಂಪು ಕಲ್ಲು ತೂರಾಟ ನಡೆಸುತ್ತಾ ಇಡೀ ಠಾಣೆಯನ್ನೇ ವಶಕ್ಕೆ ತೆಗೆದುಕೊಂಡಿತ್ತು. ನಂತರ ಹೆಚ್ಚುವರಿ ಪಡೆಗಳು ಸ್ಥಳಕ್ಕಾಗಮಿಸಿ ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿಯನ್ನು ರಕ್ಷಿಸಿತ್ತು.

ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಇತರ ಸ್ಫೋಟಕ ವಸ್ತುಗಳಿದ್ದ ಠಾಣೆಯಿಂದ ಪೊಲೀಸರು ತಪ್ಪಿಸಿಕೊಂಡ ನಂತರ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದು, ಕಿವಿ ಗಡಚಿಕ್ಕುವ ಭಾರೀ ಶಬ್ದದೊಂದಿಗೆ ಠಾಣೆ ಸ್ಫೋಟಗೊಂಡಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಕ್ರೂವ್ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಪ್ರತಿಭಟನಾಕಾರರು ಪೊಲೀಸ್ ಪೋಸ್ಟ್ ಒಂದರ ಮೇಲೆ ಬೆಂಕಿ ಹಚ್ಚಲು ಮತ್ತು ಶಸ್ತ್ರಾಸ್ತ್ರಗಳನ್ನು ಅಪಹರಿಸಲು ಯತ್ನಿಸಿದ ವೇಳೆ ಆಕ್ರೋಶಿತರನ್ನು ಚದುರಿಸಲು ಪೊಲೀಸರು ಗುಂಡು ಹಾರಿಸಿದ್ದರು. ಈ ಸಂದರ್ಬದಲ್ಲಿ ಅಫ್ರೋಸಾ ಎಂಬ ಮಹಿಳೆಯೊಬ್ಬಳು ಸಾವನ್ನಪ್ಪಿದ್ದಳು.

ಇತರ ಎರಡು ಸಾವುಗಳು ಕೂಡ ಪೊಲೀಸ್ ಗುಂಡು ಹಾರಾಟದಿಂದ ನಡೆದಿದೆ. ಶ್ರೀನಗರದ ಹೊರವಲಯದಲ್ಲಿನ ರಾಷ್ಟ್ರೀಯ ಹೆದ್ದಾರಿ ತಡೆಗೆ ಯತ್ನಿಸುತ್ತಿದ್ದ ಗುಂಪನ್ನು ಚದುರಿಸಲು ಪೊಲೀಸರು ಯತ್ನಿಸಿದಾಗ ಇಬ್ಬರು ಬಲಿಯಾಗಿದ್ದಾರೆ.

ಪ್ರಧಾನಿ ತುರ್ತು ಸಭೆ...
ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ದಿನೇದಿನೇ ಹೆಚ್ಚುತ್ತಿರುವುದರಿಂದ ಕಳವಳಗೊಂಡಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಭಾನುವಾರ ರಾತ್ರಿ ಭದ್ರತೆಗಾಗಿ ಸಂಪುಟ ಸಮಿತಿಯ ಸಭೆಯನ್ನು ಕರೆದು ಚರ್ಚೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಯಿತು ಎಂದು ವರದಿಗಳು ಹೇಳಿವೆ.

ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಜನತೆಯನ್ನು ತಾಳ್ಮೆಯಿಂದಿರುವಂತೆ ಮನವಿ ಮಾಡಿಕೊಂಡಿದ್ದಾರೆ. ಕಣಿವೆಯಲ್ಲಿ ಶಾಂತಿ ಮರುಕಳಿಸಲು ರಾಜಕೀಯ ಪಕ್ಷಗಳು ಮತ್ತು ನಾಯಕರು ಸರಕಾರದೊಂದಿಗೆ ಸಹಕರಿಸಬೇಕು ಎಂದಿರುವ ಅಬ್ದುಲ್ಲಾ, ಹಿಂಸಾಚಾರದ ರೂವಾರಿಗಳು ಮತ್ತು ಕಾನೂನು ಭಂಜಕರಿಗೆ ಗೆಲುವು ದಾಖಲಿಸಲು ತಾನು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ