2009ರ ಜುಲೈ 2ರಂದು ಸಲಿಂಗಕಾಮ ಅಪರಾಧವಲ್ಲ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇತ್ತೀಚೆಗಷ್ಟೇ ಅದರ ವಾರ್ಷಿಕ ಸಂಭ್ರಮವನ್ನೂ ಸಲಿಂಗಕಾಮಿಗಳು ಆಚರಿಸಿದ್ದರು. ಅದರ ಬೆನ್ನಿಗೆ ಅವರಿಗೆ ಮತ್ತೊಂದು ಶುಭ ಸುದ್ದಿ ಬಂದಿದೆ.
ಎಚ್ಐವಿ ಸೋಂಕು ಸಲಿಂಗಕಾಮಿಗಳಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ಹರಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತವು ಇದೀಗ ಅವರಿಗಾಗಿಯೇ ವಿಶೇಷವಾಗಿ ರೂಪಿಸಲಾದ ಕಾಂಡೋಮ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
PTI
ಸಲಿಂಗಿಗಳು ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆ ಮತ್ತು ಕಾಂಡೋಮ್ ಉತ್ಪಾದಕರ ಕುಟುಂಬ ಕಲ್ಯಾಣ ಪ್ರಚಾರ ಸಂಸ್ಥೆ ಜಂಟಿಯಾಗಿ ವಿಶ್ಲೇಷಣೆ ನಡೆಸಿವೆ ಎಂದು ವರದಿಗಳು ಹೇಳಿವೆ.
ಅಹಿತಕಾರಿಯಾಗಿರುತ್ತದೆ ಎಂಬ ಕಾರಣಕ್ಕೆ ಸಲಿಂಗಿಗಳು ತಮ್ಮ ದೈಹಿಕ ಸಂಪರ್ಕದ ಸಂದರ್ಭದಲ್ಲಿ ಕಾಂಡೋಮ್ ಬಳಸುತ್ತಿಲ್ಲ. ಇದನ್ನೇ ಪ್ರಮುಖವಾಗಿ ಗಮನಕ್ಕೆ ತೆಗೆದುಕೊಂಡಿರುವ ಕಾಂಡೋಮ್ ತಯಾರಿಕಾ ಸಂಸ್ಥೆಗಳು, ಹೆಚ್ಚಿನ ತೈಲ ಲೇಪನವನ್ನೊಳಗೊಂಡ 'ಗೇ ಕಾಂಡೋಮ್' ತಯಾರಿಸಲಿವೆ.
ಪ್ರಸಕ್ತ ಮಾರುಕಟ್ಟೆಯಲ್ಲಿರುವ ಕಾಂಡೋಮ್‌ಗಳು ನಿಸರ್ಗದತ್ತ ಲೈಂಗಿಕ ಚಟುವಟಿಕೆಗೆ ಅನುಗುಣವಾಗಿ ಕಾಂಡೋಮ್ ತಯಾರಿಸುತ್ತವೆ. ಅಂದರೆ ಹೆಚ್ಚಿನ ಲುಬ್ರಿಕೆಂಟ್ ಬಳಸುತ್ತಿಲ್ಲ. ಆದರೆ ಸಲಿಂಗಿಗಳು ಅನೈಸರ್ಗಿಕ ರೀತಿಯಲ್ಲಿ ದೈಹಿಕ ಸಂಪರ್ಕ ಬೆಳೆಸುವುದರಿಂದ ಅವರಿಗೆ ವಿಶೇಷ ಕಾಂಡೋಮ್ ಅಗತ್ಯವಿದೆ ಎಂಬುದನ್ನು ಕಂಪನಿ ಕಂಡುಕೊಂಡಿದೆ.
'ಸ್ಪೈಸ್ ಅಪ್' ಎಂಬ ಹೆಸರಿನಡಿಯಲ್ಲಿ ಈ ನೂತನ ಕಾಂಡೋಮ್ ಬಿಡುಗಡೆಯಾಗಲಿದ್ದು, ಇದನ್ನು ಸಲಿಂಗಿಗಳು ಸ್ವಾಗತಿಸಲಿದ್ದಾರೆ ಎಂಬ ಭರವಸೆ ಕಂಪನಿಗಳದ್ದು.
ಅದೇ ಹೊತ್ತಿಗೆ ಹೆಚ್ಚುವರಿ ತೈಲ ಲೇಪನವನ್ನೊಳಗೊಂಡ ಕಾಂಡೋಮ್ ಬಿಡುಗಡೆಯಾದಲ್ಲಿ ಇದು ಸಲಿಂಗಿ ಜೋಡಿಗಳಿಗೆ ಸಹಕಾರಿಯಾಗಲಿದೆ ಎಂದು ಲೈಂಗಿಕ ತಜ್ಞ ಡಾ. ಪ್ರಕಾಶ್ ಕೊಠಾರಿ ಅಭಿಪ್ರಾಯಪಟ್ಟಿದ್ದಾರೆ.
ಸಲಿಂಗಿಗಳಿಂದ ಏಡ್ಸ್ ಹೆಚ್ಚಾಗುತ್ತಿದೆ.... ಹೌದು, ವಿಶ್ವಸಂಸ್ಥೆಯು ಇತ್ತೀಚೆಗಷ್ಟೇ ಪ್ರಕಟಿಸಿರುವ ವರದಿಯೊಂದರ ಪ್ರಕಾರ ಭಾರತದಲ್ಲಿ ಅರ್ಧಕ್ಕರ್ಧ ಏಡ್ಸ್ ಪೀಡಿತರ ಸಂಖ್ಯೆ ಏರಿಕೆಯಾಗಲು ಕಾರಣ ಸಲಿಂಗಕಾಮಿಗಳ ಅಸುರಕ್ಷಿತ ಲೈಂಗಿಕ ಸಂಪರ್ಕ.
ಭಾರತವು ಸರಿಸುಮಾರು 3.05 ಕೋಟಿ ಸಲಿಂಗಕಾಮಿಗಳನ್ನು ಹೊಂದಿದೆ. ಪ್ರಮುಖ ನಗರಗಳನ್ನು ಗಣನೆಗೆ ತೆಗೆದುಕೊಂಡಾಗ ದೆಹಲಿಯಲ್ಲಿನ ಒಟ್ಟು ಸಲಿಂಗಕಾಮಿಗಳಲ್ಲಿ ಶೇ.49 ಹಾಗೂ ಮುಂಬೈಯಲ್ಲಿನ ಶೇ.42ರಷ್ಟು ಮಂದಿ ಎಚ್‌ಐವಿ ಬಾಧಿತರಾಗಿದ್ದಾರೆ. ಈ ವರದಿಯನ್ನು ಭಾರತವು ಗಂಭೀರವಾಗಿ ಪರಿಗಣಿಸಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಘಟನೆಯ ಪ್ರಕಾರ ಪ್ರಸಕ್ತ ಮುಂಬೈ ಮತ್ತು ಪುಣೆಗಳಲ್ಲಿ 19,000ಕ್ಕೂ ಹೆಚ್ಚು ಮಂದಿ ತಾವು ಸಲಿಂಗಕಾಮಿಗಳು ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದು, ಅವರಲ್ಲಿ 9,900 ಮಂದಿಯ ಲೈಂಗಿಕ ಚಟುವಟಿಕೆಗಳನ್ನು ಅಧ್ಯಯನ ನಡೆಸಿ ಪೂರಕವಾದ ಕಾಂಡೋಮ್ ತಯಾರಿಸಲಾಗುತ್ತದೆ.