ಸಂಸದ ಶಶಿ ತರೂರ್ ಮುಂಗಾರು ಅಧಿವೇಶನದಿಂದ ದೂರವೇ ಉಳಿದುಕೊಂಡಿದ್ದಾರೆ. ಇದರ ಹಿಂದಿರುವ ಕಾರಣ ಅವರ 'ಕೌಟುಂಬಿಕ' ಸಮಸ್ಯೆಗಳು. ತನ್ನ ಎರಡನೇ ಪತ್ನಿಗೂ ವಿಚ್ಛೇದನ ನೀಡಿರುವ ತರೂರ್, ಇದೀಗ ಸುನಂದಾ ಪುಷ್ಕರ್ ಜತೆ ಸಿನಿಮಾ ಮಂದಿರ, ದೇವಸ್ಥಾನಗಳಿಗೆ ಸುತ್ತುತ್ತಿದ್ದಾರೆ.
PTI
ಇತ್ತೀಚಿನವರೆಗೂ ಸಂಸತ್ ದಾಖಲೆಗಳಲ್ಲಿ ತನ್ನ ಪತ್ನಿ ಕೆನಡಾದ ಕ್ರಿಸ್ತಾ ಗೈಲ್ಸ್ ಎಂದೇ ನಮೂದಿಸುತ್ತಿದ್ದ ತರೂರ್ ಇದೀಗ ಅಧಿಕೃತವಾಗಿ ವಿಚ್ಛೇದನ ನೀಡಿದ್ದು, ದಾಖಲೆಗಳಿಂದ ಕ್ರಿಸ್ತಾ ಹೆಸರು ನಾಪತ್ತೆಯಾಗಿದೆ.
ಹಾಗಾಗಿ ನಿರುಮ್ಮಳಗೊಂಡಿರುವ ತರೂರ್ ಆಗಸ್ಟ್ 17ರಂದು ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ತನ್ನ ದೀರ್ಘ ಕಾಲದ ಗೆಳತಿ ಸುನಂದಾ ಪುಷ್ಕರ್ ಅವರನ್ನು ವಿವಾಹವಾಗಲಿದ್ದಾರೆ ಎಂದು ವರದಿಗಳು ಹೇಳಿವೆ.
ಇದೇ ನಿಟ್ಟಿನಲ್ಲಿ ಅವರು ಪ್ರಸಕ್ತ ನಡೆಯುತ್ತಿರುವ ಮಳೆಗಾಲದ ಸಂಸತ್ ಅಧಿವೇಶನದತ್ತಲೂ ಮುಖ ಮಾಡಿಲ್ಲ. ಐಪಿಎಲ್ ವಿವಾದಕ್ಕೆ ಸಂಬಂಧಪಟ್ಟಂತೆ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದ ತರೂರ್ ಇದೀಗ ತನ್ನ ವೈಯಕ್ತಿಕ ಜೀವನದತ್ತ ಹೆಚ್ಚಿನ ಗಮನವನ್ನು ಕೊಡುತ್ತಿದ್ದಾರೆ ಎಂದು ಹೇಳಲಾಗಿದೆ.
ಐಪಿಎಲ್ ವಿವಾದದ ನಂತರ ಬಹಿರಂಗವಾಗಿ ಜತೆಗೆ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತಿದ್ದ ತರೂರ್ ಮತ್ತು ಸುನಂದಾ ಶುಕ್ರವಾರ 'ಕುಚ್ ಬೀ ಹೋ ಸಕ್ತಾ ಹೈ' ಚಿತ್ರವನ್ನು ವೀಕ್ಷಿಸಿಸಿದರು.
ನಂತರ ಶನಿವಾರ ಬೆಳಿಗ್ಗೆ ಸುನಂದಾ ಜತೆ ಮುಂಬೈಗೆ ಆಗಮಿಸಿದ ತರೂರ್, ಇಲ್ಲಿಂದ 250 ಕಿಲೋ ಮೀಟರ್ ದೂರದಲ್ಲಿರುವ ಶಿರ್ಡಿ ಸಮೀಪದ ಶನೇಶ್ವರ ದೇವಳಕ್ಕೆ ನಾಸಿಕ್ ಮೂಲಕ ತೆರಳಿ 'ಸಂಕಲ್ಪ ಪೂಜೆ'ಯನ್ನು ಮಾಡಿದ್ದಾರೆ. ಬಳಿಕ ಶಿರ್ಡಿ ಸಾಯಿ ಬಾಬಾ ಮಂದಿರಕ್ಕೂ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಕೇಡುಗಾಲದಿಂದ ಹೊರಬರುವಂತೆ ಕೈಗೊಳ್ಳಲಾಗುವ ಅಭಿಷೇಕವೊಂದನ್ನೂ ತರೂರ್-ಸುನಂದಾ ಶನಿ ದೇವಳದಲ್ಲಿ ಕೈಕೊಂಡಿದ್ದಾರೆ. ಕಮ್ಯೂನಿಸ್ಟ್ ಸಹಿತ ಹಲವು ರಾಜಕಾರಣಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದರಿಂದ ಕೇರಳದ ಜ್ಯೋತಿಷಿಯೊಬ್ಬರು ತರೂರ್ ಅವರಿಗೂ ಇದೇ ಸಲಹೆಯನ್ನು ನೀಡಿದ್ದರು ಎಂದು ಮೂಲಗಳು ಹೇಳಿವೆ.
ಕೇರಳದ ಸಾಂಪ್ರದಾಯಿಕ ಹೊಸ ವರ್ಷದ ಮೊದಲ ತಿಂಗಳು 'ಚಿಂಗಮಾಸಂ' (ಕನ್ನಡದಲ್ಲಿ ಸಿಂಹ ಮಾಸ ಅಥವಾ ತುಳುವಿನಲ್ಲಿ ಸೋಣ ಎನ್ನುತ್ತಾರೆ) ಮೊದಲ ದಿನವಾದ ಆಗಸ್ಟ್ 17ರಂದು ಕಾಂಗ್ರೆಸ್ ಮಾಜಿ ಸಚಿವರು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.