ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೇಡಿಕೆ ಕೈ ಬಿಟ್ಟ ವಿಪಕ್ಷಗಳು; ಸಂಸತ್ ಕಲಾಪ ಆರಂಭ
(Price rise | Parliament | Pranab Mukherjee | opposition leaders)
ಕೊನೆಗೂ ಪ್ರತಿಪಕ್ಷಗಳು ತಮ್ಮ ಬೇಡಿಕೆಯಿಂದ ಹಿಂದಕ್ಕೆ ಸರಿದಿವೆ. ಬೆಲೆಯೇರಿಕೆ ಕುರಿತು ನಿಲುವಳಿ ಸೂಚನೆ ಮಂಡಿಸಲು ಅವಕಾಶ ನೀಡಬೇಕೆಂದು ಕಳೆದ ವಾರ ಪೂರ್ತಿ ಸಂಸತ್ ಕಲಾಪಕ್ಕೆ ಅಡ್ಡಿ ಪಡಿಸಿದ್ದ ವಿಪಕ್ಷಗಳ ಸಂಸದರು ಇದೀಗ ಮತ ಚಲಾವಣೆಯಿಲ್ಲದೆ ಚರ್ಚೆ ನಡೆಸಲು ಒಪ್ಪಿಗೆ ಸೂಚಿಸಿದ್ದು, ಉಭಯ ಸದನಗಳಲ್ಲಿ ಪ್ರಶ್ನೋತ್ತರ ವೇಳೆ ಆರಂಭವಾಗಿದೆ.
ಇದರ ಕೀರ್ತಿ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರಿಗೆ ಸಲ್ಲುತ್ತದೆ. ಅವರು ವಿಪಕ್ಷಗಳ ಹಿರಿಯ ಮುಖಂಡರ ಜತೆ ನಡೆಸಿದ ಮಾತುಕತೆಯ ನಂತರ ಈ ಬದಲಾವಣೆಗಳು ಕಂಡು ಬಂದಿವೆ. ಮೂಲಗಳ ಪ್ರಕಾರ ಸರಕಾರ ಮತ್ತು ಪ್ರತಿಪಕ್ಷಗಳು ಒಪ್ಪಂದವೊಂದಕ್ಕೆ ಬಂದಿವೆ.
ಈ ಒಪ್ಪಂದದ ಪ್ರಕಾರ ಸಂಸತ್ತಿನ ಎರಡೂ ಸದನಗಳಲ್ಲಿ ಮತ ಚಲಾವಣೆಯಿಲ್ಲದೆ ಬೆಲೆಯೇರಿಕೆ ಕುರಿತು ಚರ್ಚೆ ನಡೆಯುತ್ತದೆ. ನಂತರ ಸರಕಾರಕ್ಕೆ ನಿರ್ದೇಶನ ನೀಡುವ ನಿಟ್ಟಿನಲ್ಲಿ ಬೆಲೆಯೇರಿಕೆ ಕುರಿತು ಬದಲಿ ಹೆಸರಿನಲ್ಲಿ ಗೊತ್ತುವಳಿಯನ್ನು ಅಂಗೀಕರಿಸಲಾಗುತ್ತದೆ.
ಪ್ರತಿಪಕ್ಷಗಳು ಸದನಗಳಲ್ಲಿ ಗೊತ್ತುವಳಿ ಮಂಡಿಸುವಾಗ ಬೆಲೆಯೇರಿಕೆ ಎಂಬ ಪದದ ಬದಲು ಅರ್ಥ ವ್ಯವಸ್ಥೆಯ ಮೇಲೆ ಹಣದುಬ್ಬರದ ಒತ್ತಡ ಎಂಬುದನ್ನು ಬಳಸಬೇಕು ಎಂದು ಸರಕಾರ ನಿಬಂಧನೆ ವಿಧಿಸಿದೆ. ಆದರೆ ಪ್ರತಿಪಕ್ಷಗಳು ಬೆಲೆಯೇರಿಕೆ ಎಂಬ ಪದವನ್ನು ನಮೂದಿಸುವ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ.
ಸಭೆಯ ನಂತರ ಪ್ರತಿಕ್ರಿಯೆ ನೀಡಿರುವ ಸಿಪಿಐ ನಾಯಕ ಗುರುದಾಸ್ ದಾಸ್‌ಗುಪ್ತಾ, ಎಲ್ಲಾ ಪಕ್ಷಗಳು ಒಮ್ಮತಕ್ಕೆ ಬರಲು ಸಾಧ್ಯವಾಗಿರುವುದಕ್ಕೆ ನಮಗೂ ಸಂತೋಷವಾಗಿದೆ; ಸಂಸತ್ ಅಂಗೀಕರಿಸುವ ಗೊತ್ತುವಳಿಯನ್ನು ಸರಕಾರವು ಸಂಸದೀಯ ನಿರ್ದೇಶನ ಎಂದು ಪರಿಗಣಿಸಿ ಸಾಮಾನ್ಯ ಜನರ ಮೇಲಾಗುತ್ತಿರುವ ಬೆಲೆಯೇರಿಕೆ ಕುರಿತು ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ನಂಬಿದ್ದೇವೆ ಎಂದರು.
ನಿಲುವಳಿ ಗೊತ್ತುವಳಿ ಅಡಿಯಲ್ಲಿ ಚರ್ಚೆ ನಡೆಸಲು ಸರಕಾರ ಅವಕಾಶ ನೀಡುವುದಿಲ್ಲ ಎಂಬುದನ್ನು ಅರಿತುಕೊಂಡ ಪ್ರತಿಪಕ್ಷಗಳು ಇದೀಗ ಸರಕಾರದ ಜತೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿವೆ.
ಬೆಲೆಯೇರಿಕೆ ಕುರಿತ ಚರ್ಚೆ ಮಂಗಳವಾರ ಉಭಯ ಸದನಗಳಲ್ಲಿ ಹಣದುಬ್ಬರದ ಒತ್ತಡ ಎಂಬ ಹೆಸರಿನಲ್ಲಿ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಇಂದು ಬೆಳಿಗ್ಗೆ ನಡೆದ ಈ ಸಭೆಯಲ್ಲಿ ಬಿಜೆಪಿ ನಾಯಕರಾದ ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ, ಎನ್‌ಸಿಪಿ ನಾಯಕ ಶರದ್ ಪವಾರ್, ಎಡಪಕ್ಷಗಳ ಮುಖಂಡರಾದ ಗುರುದಾಸ್ ದಾಸ್‌ಗುಪ್ತಾ, ಬಸುದೇವ್ ಆಚಾರ್ಯ ಮತ್ತು ಎ.ಬಿ. ಬರ್ಧನ್, ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಮತ್ತು ರಾಮ್ ಗೋಪಾಲ್ ಯಾದವ್ ಹಾಗೂ ಜೆಡಿಯು ಮುಖಂಡ ಶರದ್ ಯಾದವ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸರಕಾರದ ಪರವಾಗಿ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ಸಂಸದೀಯ ವ್ಯವಹಾರಗಳ ಸಚಿವ ಪವನ್ ಕುಮಾರ್ ಭನ್ಸಾಲ್ ಮತ್ತು ಪೃಥ್ವಿ ರಾಜ್ ಚೌಹಾನ್ ಭಾಗವಹಿಸಿದ್ದರು.