ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶದ ಕಥೆಯಿದು. ಸಣ್ಣ ಪುಟ್ಟ ಅಪರಾಧಗಳಿಂದ ಹಿಡಿದು ಹತ್ಯೆ, ಕೊಲೆ ಯತ್ನ ಮತ್ತು ಅಪರಹರಣ ಸೇರಿದಂತೆ ಸಾಕಷ್ಟು ಅಪರಾಧಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಆರೋಪಗಳನ್ನು ಇಲ್ಲಿನ ಪ್ರತಿ ಐವರು ಶಾಸಕರಲ್ಲಿ ಒಬ್ಬರ ಮೇಲಿರುತ್ತದೆ!
230 ಸದಸ್ಯರನ್ನು ಹೊಂದಿರುವ ಮಧ್ಯಪ್ರದೇಶ ವಿಧಾನಸಭೆಯ 42 ಸದಸ್ಯರು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ಸಚಿವರು, ಓರ್ವ ಮಾಜಿ ಸಚಿವ ಮತ್ತು ಏಳು ಮಂದಿ ಮಹಿಳೆಯರೂ ಸೇರಿರುವುದು ವಿಶೇಷ.
ಕಾಂಗ್ರೆಸ್ ಶಾಸಕ ರಣವೀರ್ ಜಾತವ್ ಅವರು ಕೇಳಿದ ಪ್ರಶ್ನೆಯೊಂದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿರುವ ರಾಜ್ಯದ ಗೃಹಸಚಿವ ಉಮಾಶಂಕರ್ ಗುಪ್ತಾ ಈ ಮಾಹಿತಿಯನ್ನು ನೀಡಿದ್ದಾರೆ.
ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಮಹಿಳಾ ಶಾಸಕಿಯರಿವರು -- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರಂಜನಾ ಬಾಗೆಲ್, ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕಿ (ಕಾಂಗ್ರೆಸ್) ಜಮುನಾ ದೇವಿ, ಬಿಜೆಪಿ ಶಾಸಕಿ ಆಶಾ ರಾಣಿ, ಕಾಂಗ್ರೆಸ್ ಶಾಸಕಿಯರಾದ ಕಲ್ಪನಾ ಪರುಲೇಕರ್, ಸಾಧನಾ ಸ್ಥಾಪಕ್ ಮತ್ತು ಇಮ್ರತಿ ದೇವಿ ಹಾಗೂ ಭಾರತೀಯ ಜನಶಕ್ತಿ ಪಕ್ಷದ ಶಾಸಕಿ ರೇಖಾ ಯಾದವ್.
ರಂಜನಾ ಬಾಗೆಲ್ ಹೊರತುಪಡಿಸಿ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಮಂತ್ರಿ ಸಾರ್ವಜನಿಕ ಆರೋಗ್ಯ ನಿರ್ವಹಣೆ ಮತ್ತು ಸಹಕಾರ ಸಚಿವ ಗೌರಿಶಂಕರ್ ಬಿಸೇನ್.
2009ರಲ್ಲಿ ಬಾಗೆಲ್ ಅವರ ವಿರುದ್ಧ ಕೊಲೆ ಬೆದರಿಕೆ ಮತ್ತು ಉದ್ದೇಶಪೂರ್ವಕವಾಗಿ ಹಾನಿ ಪ್ರಕರಣ ದಾಖಲಾಗಿತ್ತು. ಅಧಿಕಾರದಲ್ಲಿದ್ದಾಗಲೇ ಬಂಧನಕ್ಕೊಳಗಾಗಿ ಬಿಡುಗಡೆಯಾದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಸಂಪುಟದ ಏಕೈಕ ಸಚಿವೆ ಎಂಬ ಕುಖ್ಯಾತಿಯೂ ಇವರದ್ದು.
ಮತ್ತೊಬ್ಬ ಸಚಿವ ಬಿಸೇನ್ ವಿರುದ್ಧ ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿದ ಪ್ರಕರಣ ದಾಖಲಾಗಿದೆ. ಜತೆಗೆ ನ್ಯಾಯಾಂಗ ನಿಂದನೆಯ ಇನ್ನೊಂದು ಪ್ರಕರಣವೂ ಇವರ ಮೇಲಿದೆ.
ಪ್ರತಿಪಕ್ಷದ ನಾಯಕಿ ಹಾಗೂ ಕಾಂಗ್ರೆಸ್ ಮುಖಂಡೆ ಜಮುನಾ ದೇವಿ ಕಾನೂನನ್ನು ಕೈಗೆತ್ತಿಕೊಂಡ ಪ್ರಕರಣ ಎದುರಿಸುತ್ತಿದ್ದಾರೆ.
ಒಟ್ಟಾರೆ ಮಧ್ಯಪ್ರದೇಶದಲ್ಲಿ ಪಕ್ಷಬೇಧವಿಲ್ಲದೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸ್ಪಷ್ಟವಾಗಿದೆ.