ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇವರ ನಾಡಿನ ಬಾಲಕಿಗೆ ಪುನರ್ಜನ್ಮ ನೀಡಿದ್ದು ಸಂಗೀತ! (Radhika | Girija Mohan | Dr. Mohan | Music therapy)
Bookmark and Share Feedback Print
 
ಸಂಗೀತವೆಂದರೆ ಹಾಗೆ, ಅದರ ಮಾಯೆಗೆ ಸಿಲುಕದವರಾದರೂ ಯಾರಿದ್ದಾರೆ. ಜಗತ್ತನ್ನೇ ಮಂತ್ರಮುಗ್ಧವಾಗಿಸುವ ಶಕ್ತಿ ಅದರದ್ದು. ಸಂಗೀತಕ್ಕೆ ಭಾಷೆಯಿಲ್ಲ, ಅದು ಯಾರ ಸೊತ್ತೂ ಅಲ್ಲ, ವಿಶ್ವ ಭಾಷೆಯದು. ಇಂತಿಪ್ಪ ಸಂಗೀತ ಸತ್ತವರನ್ನೂ ಎಬ್ಬಿಸುವ ಶಕ್ತಿ ಹೊಂದಿದೆ ಎಂದು ಕೇಳಿ ತಿಳಿದಿದ್ದೇವೆ. ಆದರೆ ಅದರ ಸಾಕ್ಷಾತ್ ದರ್ಶನವೀಗ ನಮ್ಮ ಪಕ್ಕದ ರಾಜ್ಯದಲ್ಲೇ ಆಗಿದೆ. ಯಮರಾಜನ ಪಾಶಕ್ಕೆ ಸಿಲುಕಿ ಸ್ತಬ್ಧವಾಗಿದ್ದ ಬಾಲಕಿಯೊಬ್ಬಳು ಸಂಗೀತದ ಶಕ್ತಿಯಿಂದ ಮತ್ತೆ ಮಾನವ ಜಗತ್ತಿಗೆ ಮರಳಿದ್ದಾಳೆ.

ಈ ಅಪರೂಪದ ಪ್ರಸಂಗ ವರದಿಯಾಗಿರುವುದು 'ದೇವರ ನಾಡು' (ದೈವತ್ತಿಂದೆ ಸ್ವಂತಂ ನಾಡ್) ಕೇರಳದ ಅಳಪುರಂ ಜಿಲ್ಲೆಯಿಂದ. ಇಲ್ಲಿನ ಅಂಬಲಾಪುರ ಎಂಬಲ್ಲಿನ ಬೆಸ್ತ ದಂಪತಿ ಮಂಜು ಮತ್ತು ರಾಜು ಎಂಬವರ ಪುತ್ರಿ ರಾಧಿಕಾ ಎಂಬವಳೇ ಮರುಜನ್ಮ ಪಡೆದುಕೊಂಡವಳು.
ಮಗಳು ರಾಧಿಕಾ ಜತೆ ಮಂಜು
PR

ಆಕಸ್ಮಿಕವಾಗಿ ತಲೆಗೆ ಪೆಟ್ಟಾಗಿ ಪ್ರಜ್ಞೆ ಕಳೆದುಕೊಂಡು ತಿಂಗಳುಗಟ್ಟಲೆ ಕೋಮಾ ಸ್ಥಿತಿಯಲ್ಲಿದ್ದ ಆರರ ಹರೆಯದ ಬಾಲಕಿ ರಾಧಿಕಾ ಕರ್ನಾಟಕ ಸಂಗೀತ ಮತ್ತು ಇತರ ಶಾಸ್ತ್ರ್ರೀಯ-ಸುಗಮ ಸಂಗೀತಗಳನ್ನು ನಿರಂತರವಾಗಿ ಆಲಿಸಿದ ನಂತರ ನಿಧಾನವಾಗಿ ಪ್ರತಿಕ್ರಿಯೆ ನೀಡಲಾರಂಭಿಸಿದ್ದಳು. ಪ್ರಸಕ್ತ ಶೇ.80ರಷ್ಟು ಗುಣಮುಖಳಾಗಿದ್ದಾಳೆ.

ಆಡುವಾಗ ಅಚಾತುರ್ಯ...
ಚೂಡಿದಾರ್ ಶಾಲಿನೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕತ್ತು ಸಿಕ್ಕಿಹಾಕಿಕೊಂಡು ನೆಲಕ್ಕುರುಳಿದ್ದ ರಾಧಿಕಾಳ ಮೆದುಳಿಗೆ ಗಂಭೀರ ಗಾಯವಾಗಿತ್ತು. ಆಕೆಯನ್ನು ಮೇ 30ರಂದು ವಂದನಂ ಎಂಬಲ್ಲಿನ ಟಿ.ಡಿ. ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು.

ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದ ಬಾಲಕಿಯನ್ನು ತಕ್ಷಣವೇ ತುರ್ತು ನಿಗಾ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. ಎಷ್ಟೇ ಚಿಕಿತ್ಸೆಗಳನ್ನು ನೀಡಿದರೂ ರಾಧಿಕಾಳ ಆರೋಗ್ಯದಲ್ಲಿ ಸುಧಾರಣೆ ಕಂಡುಕೊಂಡಿರಲಿಲ್ಲ.

ಸ್ಮರಣ ಶಕ್ತಿ ಮತ್ತು ಸ್ಪರ್ಶಜ್ಞಾನವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದ ಬಾಲಕಿ ಉಸಿರಾಟದ ತೊಂದರೆಯನ್ನೂ ಅನುಭವಿಸುತ್ತಿದ್ದುದರಿಂದ ಗಂಭೀರ ಸ್ಥಿತಿಗೆ ತಲುಪಿದ್ದಳು. ನಂತರ ಕೃತಕ ಉಸಿರಾಟದ ವ್ಯವಸ್ಥೆಯಲ್ಲಿ ಆಕೆಯನ್ನು ಇಡಲಾಗಿತ್ತು. ಆಸ್ಪತ್ರೆಯ ಶಿಶು ತಜ್ಞೆ ಗಿರಿಜಾ ಮೋಹನ್ ಮಗುವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದರು.

ಬದುಕಿನ ಭರವಸೆಯೇ ಇರಲಿಲ್ಲ...
ರಾಧಿಕಾಳ ಚೇತರಿಕೆ ಬಗ್ಗೆ ಲವಲೇಶ ಭರವಸೆಯೂ ನಮ್ಮಲ್ಲಿರಲಿಲ್ಲ. ಆದರೂ ಪ್ರಾಣಪಕ್ಷಿ ಹಾರಿ ಹೋಗಬಾರದೆಂಬ ಕಾರಣಕ್ಕೆ ನಾವು ವೈದ್ಯಕೀಯ ಚಿಕಿತ್ಸೆಗಳನ್ನು ಮುಂದುವರಿಸಿದ್ದೆವು. ಸಂಪೂರ್ಣ ಕೋಮಾ ಸ್ಥಿತಿಯಲ್ಲಿದ್ದ ಆಕೆ ಸ್ಪರ್ಶ ಅಥವಾ ಶಬ್ಧಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ತೋರಿಸುತ್ತಿರಲಿಲ್ಲ ಎಂದು ಮತ್ತೊಬ್ಬ ವೈದ್ಯ ಡಾ. ಮೋಹನ್ ಆ ಸಂದರ್ಭವನ್ನು ಬಿಚ್ಚಿಟ್ಟರು.

ನಮ್ಮ ಪ್ರಯತ್ನಗಳೆಲ್ಲ ಫಲ ಕೊಡದೇ ಇದ್ದಾಗ ಹೊಸತೇನಾದರೂ ಸಂಶೋಧನೆಗಳು ನಡೆದಿವೆಯೇ ಎಂಬುದನ್ನು ಅಂತರ್ಜಾಲದಲ್ಲಿ ಹುಡುಕಲಾರಂಭಿಸಿದೆ. ಆಗ ನನಗೆ ತಿಳಿದು ಬಂದ ವಿಚಾರವೆಂದರೆ ಇಂತಹ ಪ್ರಕರಣಗಳಲ್ಲಿ ಸಂಗೀತ ಚಿಕಿತ್ಸೆಯ (Music therapy) ಉಪಯೋಗ ಹೆಚ್ಚಿದೆ ಎನ್ನುವುದು ಎಂದು ಮೋಹನ್ ವಿವರಿಸಿದ್ದಾರೆ.

ಜೀವ ಮರಳಿಸಿದ್ದು ಕೃಷ್ಣ....
ಹೆತ್ತವರಾದ ರಾಜು ಮತ್ತು ಮಂಜು ಅವರಿಂದ ರಾಧಿಕಾಳ ಸಂಗೀತಾಭಿರುಚಿಯನ್ನು ಕೇಳಿದಾಗ, ಆಕೆಗೆ ಶ್ರೀಕೃಷ್ಣನ ಪದಗಳು ತುಂಬಾ ಇಷ್ಟ ಎಂಬುದು ವೈದ್ಯರಿಗೆ ತಿಳಿದು ಬಂತು. ಇಂಟರ್ನೆಟ್ ಸರ್ಚ್ ಇಂಜಿನ್‌ಗಳ ಶೋಧ ನೀಡಿದ ಮಾಹಿತಿಯಂತೆ ಮಧುರ ಸಂಗೀತಗಳನ್ನು ಮಂದ್ರಸ್ಥಾಯಿಯಾಗಿ ಕೇಳಿಸಬೇಕೆನ್ನುವ ನಿಬಂಧನೆಗಳನ್ನೂ ಪಾಲಿಸಿದರು.

ಇಂಟರ್ನೆಟ್ ಮಾಹಿತಿ ಪ್ರಕಾರ ತಾರಕ ಸ್ವರದಲ್ಲಿರುವ ಸಂಗೀತದ ಪ್ರಕಾರಗಳನ್ನು ಕೇಳಿಸಬಾರದು ಎಂದು ತಿಳಿದು ಬಂತು. ರಾಧಿಕಾಳಿಗೆ ಶ್ರೀಕೃಷ್ಣನ ಪದಗಳು ಇಷ್ಟ ಎಂಬುದನ್ನು ಪರಿಗಣಿಸಿ ಶಾಸ್ತ್ರೀಯ ಸಂಗೀತ ಮತ್ತು ಕರ್ನಾಟಕ ಸಂಗೀತವನ್ನು ಇಯರ್ ಫೋನ್ ಮೂಲಕ ಕೇಳಿಸುತ್ತಾ ಬರಲಾಯಿತು.

ಆಶ್ಚರ್ಯಕರ ರೀತಿಯಲ್ಲಿ ರಾಧಿಕಾ ನಿಧಾನವಾಗಿ ಸಂಗೀತಕ್ಕೆ ಸ್ಪಂದಿಸಲಾರಂಭಿಸಿದಳು. ಹಂತ ಹಂತವಾಗಿ ಸಂಗೀತ ಚಿಕಿತ್ಸೆ ಮುಂದುವರಿಸಿದ ವೈದ್ಯರಿಗೆ ಬಾಲಕಿ ಕೆಲವೇ ದಿನಗಳಲ್ಲಿ ಕಣ್ತೆರೆದಾಗ ಅಚ್ಚರಿಯ ಮೇಲೆ ಅಚ್ಚರಿ. ಬಳಿಕ ಮುಖದಲ್ಲಿ ಮಂದಹಾಸವೂ ಕಾಣಿಸಿಕೊಂಡಿತು. ನಗುವುದು, ವೈದ್ಯರು ಹೆಸರು ಕೇಳಿದಾಗ ಪ್ರತಿಕ್ರಿಯಿಸುವುದನ್ನು ಬಾಲಕಿ ರೂಢಿ ಮಾಡಿಕೊಂಡಳು.

ಇಷ್ಟಕ್ಕೇ ಬಿಡದ ವೈದ್ಯರು ಆಕೆಯನ್ನು ಆಸ್ಪತ್ರೆಯ ಹೊರ ಪರಿಸರಕ್ಕೆ ಹೆತ್ತವರೊಂದಿಗೆ ಕೊಂಡೊಯ್ದು, ನರ ಪುನಶ್ಚೇತನ ಚಿಕಿತ್ಸೆಯನ್ನು ಕೊಡಿಸಿದರು. ಅನುಕರಣೆಯನ್ನು ಮಾಡುವ ಮೂಲಕ ಮಾನಸಿಕ ಪುಷ್ಠಿ ಚಿಕಿತ್ಸೆಯನ್ನೂ ನೀಡಿದರು. ಸತತ ಮಾತುಕತೆ ನಡೆಸುವ ಮೂಲಕ ನರಮಂಡಲವನ್ನು ಜಾಗೃತಗೊಳಿಸಿದರು.

ಪ್ರಸಕ್ತ ರಾಧಿಕಾ ಶೇ.80ರಷ್ಟು ಗುಣಮುಖಳಾಗಿದ್ದಾಳೆ. ಆದರೂ ವೈದ್ಯಕೀಯ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ. ಎರಡು ತಿಂಗಳ ನಂತರ ಈಗಷ್ಟೇ ಆಕೆ ಹೆಜ್ಜೆಯನ್ನಿಡುತ್ತಿದ್ದಾಳೆ.

ಈ ಬಗ್ಗೆ ಸಂತೋಷ ವ್ಯಕ್ತಪಡಿಸುವ ಡಾ. ಮೋಹನ್, ರಾಧಿಕಾ ತನ್ನ ಸ್ವಂತ ಬಲದಿಂದ ಎಲ್ಲಾ ಕಡೆ ಓಡಾಡಿಕೊಳ್ಳಲು ತೊಡಗಿದ ಮೇಲಷ್ಟೇ ಆಕೆಯನ್ನು ನಾನು ಆಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.

ಸಂಗೀತದ ಶಕ್ತಿಯನ್ನು ಅಳೆಯುವುದು ಕಷ್ಟ ಎಂಬುದು ಮತ್ತೊಮ್ಮೆ ಸಾಬೀತಾಗಿದೆ, ಅಲ್ಲವೇ?
ಸಂಬಂಧಿತ ಮಾಹಿತಿ ಹುಡುಕಿ