ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಸಿಗಾಗಿ ಓಟು; ಕಾಂಗ್ರೆಸ್, ಬಿಜೆಪಿ ಶಾಸಕರ ಪೈಪೋಟಿ! (Congress | Jharkhand | Rajya Sabha | BJP)
Bookmark and Share Feedback Print
 
ಜಾರ್ಖಂಡ್‌ನ ಕಾಂಗ್ರೆಸ್, ಬಿಜೆಪಿ ಮತ್ತು ಜೆಎಂಎಂ ಶಾಸಕರು ರಾಜ್ಯಸಭಾ ಅಭ್ಯರ್ಥಿಗೆ ಮತ ಹಾಕಲು ಕೋಟಿಗಟ್ಟಲೆ ಬೇಡಿಕೆ ಮುಂದಿಟ್ಟಿದ್ದನ್ನು ಸುದ್ದಿವಾಹಿನಿಯೊಂದು ಅಣಕು ಕಾರ್ಯಾಚರಣೆ ಮೂಲಕ ಚಿತ್ರೀಕರಿಸಿ ಬಹಿರಂಗಪಡಿಸಿದ್ದು, ರಾಜಕಾರಣಿಗಳೆಂದರೆ ಅಲ್ಲಿ ಪಕ್ಷಭೇದಗಳಿರುವುದಿಲ್ಲ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ.

ಕೋತಿ ತಾನು ಕೆಡುವುದಲ್ಲದೆ, ವನವನ್ನೆಲ್ಲ ಕೆಡಿಸಿತು ಎಂಬಂತೆ ತನಗೆ ಕೋಟಿಯಿರಲಿ, ನನ್ನ ಜತೆಗಿರುವವರಿಗೂ ಅಷ್ಟೇ ಇರಲಿ. ಅವರನ್ನೂ ಒಪ್ಪಿಸುತ್ತೇನೆ ಎಂದು ಬಹುತೇಕ ಶಾಸಕರು ಹೇಳಿಕೊಂಡಿರುವುದು. ತಾವು ಕೇಳುವಷ್ಟು ಹಣ ನೀಡುವುದಾದರೆ ಪಕ್ಷದ ಆದೇಶವನ್ನು ಧಿಕ್ಕರಿಸಲು ಸಿದ್ಧ ಎಂದೂ ಹೇಳಿಕೊಂಡಿದ್ದಾರೆ.

ಅಚ್ಚರಿಯ ವಿಚಾರವೆಂದರೆ ಈ ಭ್ರಷ್ಟ ಶಾಸಕರು ರಾಜ್ಯಸಭಾ ಅಭ್ಯರ್ಥಿ ಯಾರೆಂಬ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ ಇರುವುದು. ಜೂನ್ ತಿಂಗಳಲ್ಲಿ 'ಐಬಿನ್-ಕೋಬ್ರಾಪೋಸ್ಟ್' ಜಂಟಿಯಾಗಿ ನಡೆಸಿದ್ದ ಅಣಕು ಕಾರ್ಯಾಚರಣೆಯಲ್ಲಿ ವರದಿಗಾರರು ಮಧ್ಯವರ್ತಿಗಳ ರೂಪದಲ್ಲಿ ಶಾಸಕರ ಮುಂದೆ ಹಾಜರಾಗಿದ್ದರು. ಉದ್ಯಮಿಯೊಬ್ಬರು ರಾಜ್ಯಸಭೆಗೆ ಆಯ್ಕೆಯಾಗಲು ಬಯಸುತ್ತಿದ್ದಾರೆ, ಅವರು ಸಾಕಷ್ಟು ಹಣ ಸುರಿಯಲು ಸಿದ್ಧರಿದ್ದಾರೆ, ಅವರಿಗೆ ಬೇಕಾಗಿರುವುದು ರಾಜ್ಯಸಭಾ ಸೀಟ್ ಎಂದು ಮಧ್ಯವರ್ತಿ (ವರದಿಗಾರರು) ಹೇಳಿಕೊಂಡಿದ್ದ.

ಆ ಕಾರ್ಯಾಚರಣೆಯನ್ನು ಇದೀಗ ಐಬಿಎನ್ ಚಾನೆಲ್ ಪ್ರಸಾರ ಮಾಡುತ್ತಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಎಂಎಂಗಳು ಇದೀಗ ತೀವ್ರ ಇರುಸುಮುರುಸಿಗೊಳಗಾಗಿವೆ. ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿವೆ.

ಕಾಂಗ್ರೆಸ್ ಕರ್ಮಕಾಂಡ...
ರಾಜೇಶ್ ರಂಜನ್, ಸವನ್ ಲಕ್ಡಾ ಮತ್ತು ಯೋಗೇಂದ್ರ ಸಾವ್ -- ಇವರೇ ಅಣಕು ಕಾರ್ಯಾಚರಣೆಯಲ್ಲಿ ಹಣಕ್ಕಾಗಿ ಜೊಲ್ಲು ಸುರಿಸಿದ ಕಾಂಗ್ರೆಸ್‌ನ ಮೂವರು ಶಾಸಕರು.

ಈ ರಾಜೇಶ್ ರಂಜನ್ ಎಂಬಾತ ಮಹಾಗಾಮಾ ಕ್ಷೇತ್ರದಿಂದ ಜಾರ್ಖಂಡ್ ವಿಧಾನಸಭೆಗೆ ಆಯ್ಕೆಯಾಗಿದ್ದ ಮಹಾನುಭಾವ. ರಾಜ್ಯಸಭಾ ಅಭ್ಯರ್ಥಿ ಯಾರೆಂಬುದನ್ನೂ ತಿಳಿಯದೆ ನೇರವಾಗಿ ಡೀಲ್‌ಗೆ ಮುಂದಾಗಿರುವ ಆಸೆಬುರುಕ.

ನನಗೆ ಒಂದು ಕೋಟಿ ರೂಪಾಯಿಗಳನ್ನು ನೀಡಬೇಕು. ನಾನೇ ದಲ್ಲಾಳಿಯಂತೆ ವರ್ತಿಸಿ ಪಕ್ಷದ ಇತರ ಕೆಲವರನ್ನು ನಾನು ಒಪ್ಪಿಸುತ್ತೇನೆ. ಅವರಿಗೆ ತಲಾ ಐವತ್ತು ಲಕ್ಷ ರೂಪಾಯಿಗಳಂತೆ ನೀಡಬೇಕು. ಸುಮಾರು ಒಂಬತ್ತು ಶಾಸಕರನ್ನು ನಾನು ಒಪ್ಪಿಸುತ್ತೇನೆ ಎಂದು ರಂಜನ್ ಈ ಸಂದರ್ಭದಲ್ಲಿ ವರದಿಗಾರನಿಗೆ ತಿಳಿಸಿದ್ದಾನೆ.

ನಾವು ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ಕೇಶವ್ ರಾವ್ ಅವರ ವಿರುದ್ಧ ಮುಂದುವರಿಯಲೂ ಸಿದ್ಧರಿದ್ದೇವೆ. ಯಾಕೆಂದರೆ ನಾವು ಹತ್ತು ಮಂದಿ ಇದ್ದೇವೆ. ಒಂದು ವೇಳೆ ನಮ್ಮ ವಿರುದ್ಧ ಅವರು ಕ್ರಮ ಕೈಗೊಂಡರೆ ಕಾಂಗ್ರೆಸ್ ಅಭ್ಯರ್ಥಿ ರಾಜ್ಯಸಭೆಯಲ್ಲಿ ಸೋಲಬೇಕಾಗುತ್ತದೆ. ಹಾಗಾಗಿ ನಮ್ಮ ಎರಡನೇ ಪ್ರಾಶಸ್ತ್ಯದ ಓಟುಗಳನ್ನು ಹಾಕದಂತೆ ತಡೆಯುವುದು ಅವರಿಂದ ಸಾಧ್ಯವಿಲ್ಲ ಎಂದಿದ್ದಾನೆ.

ಅಲ್ಲದೆ ಜಾರ್ಖಂಡ್ ಪ್ರತಿಪಕ್ಷದ (ಕಾಂಗ್ರೆಸ್) ನಾಯಕ ರಾಜೇಂದ್ರ ಸಿಂಗ್ ಅವರನ್ನು ಕೂಡ ನಾನು ಖರೀದಿಸಬಲ್ಲೆ ಎಂದು ರಂಜನ್ ಹೇಳಿಕೊಂಡಿದ್ದಾನೆ. ನಾನು ನೀಡಿರುವ ಶಾಸಕರ ಪಟ್ಟಿಗೆ ರಾಜೇಂದ್ರ ಹೆಸರನ್ನೂ ಸೇರಿಸಿ. ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ. ಅವರ ಸಹಾಯವನ್ನೂ ನಾನು ಪಡೆದುಕೊಳ್ಳುತ್ತೇನೆ ಎಂದು ಪ್ರಭಾವಿಯಂತೆ ತನ್ನನ್ನು ತಾನು ಚಿತ್ರಿಸಿಕೊಂಡಿದ್ದಾನೆ.

ಮಾತುಕತೆಯಂತೆ ವರದಿಗಾರನಿಗೆ ಮತ್ತೆರಡು ಶಾಸಕರಾದ ಸಾವನ್ ಲಕ್ಡಾ ಮತ್ತು ಯೋಗೇಂದರ್ ಸಾಹು ಅವರನ್ನು ರಂಜನ್ ಭೇಟಿ ಮಾಡಿಸುತ್ತಾನೆ.

ನಾವು ರಂಜನ್ ಹೇಳಿದಂತೆ ಕೇಳುತ್ತೇವೆ. ಅವರು ಹೇಳಿದಂತೆ ನಾವು ನಮ್ಮ ಎರಡನೇ ಪ್ರಾಶಸ್ತ್ಯದ ಮತವನ್ನು ನೀವು ಸೂಚಿಸಿದ ಅಭ್ಯರ್ಥಿಗೆ ಹಾಕಲು ಸಿದ್ಧ. ನಮಗೆ ತಲಾ 50 ಲಕ್ಷ ರೂಪಾಯಿಗಳನ್ನು ನೀಡಿದರೆ ಸಾಕು ಎಂದು ಅವರಿಬ್ಬರೂ ಶಾಸಕರು ವರದಿಗಾರನಲ್ಲಿ ಹೇಳುತ್ತಾರೆ.

ಈ ಹೊತ್ತಿಗೆ ಇತರ ಶಾಸಕರ ಕುರಿತು ವರದಿಗಾರ ಪ್ರಶ್ನಿಸುತ್ತಾ ಹೋಗುತ್ತಾನೆ. ಗೋಪಾಲನಾಥ್ ಸಹದೇವ್, ಅನಂತ್ ಪ್ರತಾಪ್, ಸೌರಭ್ ನಾರಾಯಣ್, ಮನ್ನನ್ ಮಲಿಕ್, ಬನ್ನಾ ಗುಪ್ತಾ, ಗೀತಿ ಶ್ರೀ ಮತ್ತು ಸರ್ಫರಾಜ್ ಅಹ್ಮದ್ ಕೂಡ ಸಿದ್ಧ ಎಂದು ಈ ಸಂದರ್ಭದಲ್ಲಿ ರಂಜನ್ ಭರವಸೆ ನೀಡುತ್ತಾನೆ.

ಬಿಜೆಪಿ ಹಣೆಬರಹ...
ಜಾರ್ಖಂಡ್‌ನ ಬಾರ್ಹಿ ಕ್ಷೇತ್ರದ ಬಿಜೆಪಿ ಶಾಸಕ ಉಮಾ ಶಂಕರ್ ಅಕೇಲಾ ಎಂಬಾತನೇ ಟಿವಿ ಚಾನೆಲ್ ಅಣಕು ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದವನು. ತನಗೆ ಒಂದು ಕೋಟಿ ರೂಪಾಯಿ ಹಣ ಮತ್ತು ಒಂದು ಕಾರು ಉಡುಗೊರೆಯಾಗಿ ನೀಡಬೇಕು ಎಂದು ಮಧ್ಯವರ್ತಿಯಲ್ಲಿ ಬೇಡಿಕೆ ಮುಂದಿಡುತ್ತಾನೆ.

ಆದರೆ ಚೌಕಾಶಿ ನಡೆದ ನಂತರ 50 ಲಕ್ಷ ರೂಪಾಯಿಗೆ ಒಪ್ಪಿಕೊಳ್ಳುತ್ತಾನೆ. ಅಲ್ಲದೆ ಕಾರು ನೀಡುವುದು ಸಾಧ್ಯವಿಲ್ಲ ಎಂಬುದಕ್ಕೂ ಓಕೆ ಎಂದು ಹೇಳುತ್ತಾನೆ.

ನನ್ನ ಜತೆ 10ರಿಂದ 12 ಶಾಸಕರಿದ್ದಾರೆ. ಖಂಡಿತಾ ಅವರೆಲ್ಲರನ್ನೂ ಒಪ್ಪಿಸಲು ಯತ್ನಿಸುತ್ತೇನೆ. ಅವರಿಗೂ ತಲಾ 50 ಲಕ್ಷ ರೂಪಾಯಿಗಳಂತೆ ನೀಡಬೇಕು. ಅದು ಎರಡನೇ ಪ್ರಾಶಸ್ತ್ಯದ ಮತಕ್ಕಾಗಿ. ನೇರ ಮತವನ್ನು ಹಾಕಬೇಕಾದರೆ ಒಬ್ಬೊಬ್ಬರಿಗೆ ನೀವು ಒಂದು ಕೋಟಿ ರೂಪಾಯಿಗಳನ್ನು ನೀಡಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಅಕೇಲಾ ನಿಬಂಧನೆಯನ್ನೂ ಹಾಕುತ್ತಾನೆ.

ಜೆಎಂಎಂಗೆ ಇದು ಹೊಸತಲ್ಲ...
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪಕ್ಷದ ವರಿಷ್ಠ ಶಿಬು ಸೊರೆನ್ ಸ್ವತಃ ಹಣಕ್ಕಾಗಿ ಓಟು ಹಾಕಿದವರು. ಪಿ.ವಿ. ನರಸಿಂಹರಾವ್ ಸರಕಾರ ಕೇಂದ್ರದಲ್ಲಿದ್ದಾಗ ಲಂಚ ತೆಗೆದುಕೊಂಡು ಬೆಂಬಲಿಸಿದ್ದು ಜಗಜ್ಜಾಹೀರಾಗಿತ್ತು.

ಈಗ ಅವರ ಪಕ್ಷದ ಟೆಕ್ ಲಾಲ್ ಮಹ್ತೋ ಎಂಬ ಶಾಸಕ ಅದೇ ಹಾದಿ ಹಿಡಿದಿದ್ದಾನೆ. ತನಗೆ ಒಂದು ಕೋಟಿ ರೂಪಾಯಿ ನೀಡುವುದಾದರೆ ನೀವು ಸೂಚಿಸುವ ಅಭ್ಯರ್ಥಿಗೆ ಮತ ಹಾಕಲು ಸಿದ್ಧ. ಅಲ್ಲದೆ ಇನ್ನೂ ನಾಲ್ಕೈದು ಶಾಸಕರನ್ನು ನಾನು ಇದಕ್ಕೆ ಒಪ್ಪಿಸುತ್ತೇನೆ ಎಂದಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ