ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರದ್ದು ದಪ್ಪಚರ್ಮ, ಜನರ ಕಷ್ಟ ಗೊತ್ತಾಗುತ್ತಿಲ್ಲ: ಸುಷ್ಮಾ
(Price rise | Govt insensitive | Sushma Swaraj | petroleum products)
ಕೇಂದ್ರದ್ದು ದಪ್ಪಚರ್ಮ, ಜನರ ಕಷ್ಟ ಗೊತ್ತಾಗುತ್ತಿಲ್ಲ: ಸುಷ್ಮಾ
ನವದೆಹಲಿ, ಮಂಗಳವಾರ, 3 ಆಗಸ್ಟ್ 2010( 15:18 IST )
ಬೆಲೆಯೇರಿಕೆ ಕುರಿತ ಚರ್ಚೆಗೆ ಲೋಕಸಭೆಯಲ್ಲಿ ಚಾಲನೆ ನೀಡುತ್ತಾ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರತಿಪಕ್ಷ ಬಿಜೆಪಿ, ಕೇಂದ್ರಕ್ಕೆ ಜನಸಾಮಾನ್ಯರ ಸಮಸ್ಯೆಗಳ ಕುರಿತು ಅಸಂವೇದಿಯಾಗಿದೆ ಎಂದು ಆರೋಪಿಸಿದೆ.
ಯುಪಿಎ ಸರಕಾರದ ಜನವಿರೋಧಿ ನೀತಿಗಳಿಂದಾಗಿ ಜನಸಾಮಾನ್ಯರು ಭಾರೀ ಒತ್ತಡದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಜನಸಾಮಾನ್ಯರ ಕಳವಳಕ್ಕೆ ಕಾರಣವಾದ ಇಂತಹ ವಿಚಾರಗಳಲ್ಲಿ ಸರಕಾರವು ಸಂಪೂರ್ಣವಾಗಿ ಅಸಂವೇದನೆಯಿಂದ ವರ್ತಿಸುತ್ತಿದೆ ಎಂದು ಲೋಕಸಭೆಯಲ್ಲಿ ವಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ತರಾಟೆಗೆ ತೆಗೆದುಕೊಂಡರು.
ಬೆಲೆಯೇರಿಕೆ ಬದಲು ಹಣದುಬ್ಬರದ ಹೆಸರಿನಲ್ಲಿ ಚರ್ಚೆಗೆ ಚಾಲನೆ ನೀಡಿದ ಸುಷ್ಮಾ, ಈಗಾಗಲೇ ಆಹಾರ ಪದಾರ್ಥಗಳು ಮತ್ತು ಇತರ ದಿನಬಳಕೆಯ ವಸ್ತುಗಳ ಬೆಲೆಯೇರಿಕೆಯಿಂದ ತತ್ತರಿಸಿದ್ದ ಜನತೆಗೆ ಪೆಟ್ರೋಲಿಯಂ ಉತ್ಪನ್ನಗಳ ಅದರಲ್ಲೂ ಸೀಮೆಎಣ್ಣೆ ಮತ್ತು ಅಡುಗೆ ಅನಿಲಗಳ ದರ ಹೆಚ್ಚಳದಿಂದ ಮತ್ತಷ್ಟು ಹೊರೆಯಾಗಿದೆ. ಅವರ ಜೀವನ ದುಸ್ತರವಾಗಿದೆ ಎಂದರು.
ಈ ರೀತಿಯಾಗಿ ಸಾಮಾನ್ಯ ಜನತೆಗೆ ಸಂಕಷ್ಟಕ್ಕೆ ಈಡಾಗಿದ್ದರೂ ಸರಕಾರ ನಿದ್ರಿಸುತ್ತಿದೆ, ಅದು ದಪ್ಪಚರ್ಮದವರಂತೆ ವರ್ತಿಸುತ್ತಿದೆ ಎಂದು ಸರಕಾರದ ವಿರುದ್ಧ ತೀವ್ರವಾಗಿ ಟೀಕಿಸಿದರು.
ಗಾಢನಿದ್ರೆಯಲ್ಲಿರುವ ಸರಕಾರವು ಎಚ್ಚೆತ್ತುಕೊಂಡು ಜನಸಾಮಾನ್ಯರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಲೆಯೇರಿಕೆಯ ಕುರಿತು ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ವಿತ್ತ ಸಚಿವ ಪ್ರಣಬ್ ಮುಖರ್ಜಿಯವರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕಿ, ಸ್ವತಃ ಕಾಂಗ್ರೆಸ್ ಸದಸ್ಯರು ಮತ್ತು ಅದರ ಮಿತ್ರಪಕ್ಷಗಳು ಕೂಡ ಬೆಲೆಯೇರಿಕೆ ಕುರಿತು ಕಳವಳಗೊಂಡಿವೆ, ಆದರೂ ಅನಿವಾರ್ಯವಾಗಿ ಸುಮ್ಮನೆ ಕುಳಿತಿವೆ. ಈ ಸರಕಾರವು ಜನಪ್ರಿಯತೆ ಕಳೆದುಕೊಳ್ಳುತ್ತಿದ್ದು, ಅದರ ಲಾಭವನ್ನು ನಾವು ಪಡೆದುಕೊಳ್ಳುತ್ತೇವೆ. ಆದರೆ ಇದು ವ್ಯಾಪಾರಿಗಳ ಭಾಷೆ. ನಾವು ವ್ಯಾಪಾರಿಗಳಲ್ಲ, ಜನ ಹಿತಾಸಕ್ತಿಯ ರಕ್ಷಕರು ಎಂದು ನುಡಿದರು.
ತೈಲ ಬೆಲೆಯೇರಿಕೆಯನ್ನು ತಕ್ಷಣವೇ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದೂ ಅವರು ಒತ್ತಾಯಿಸಿದ್ದಾರೆ. ಐಒಸಿ, ಬಿಪಿ, ಎಚ್‌ಪಿ ಮುಂತಾದ ಸರಕಾರಿ ಕಂಪನಿಗಳು ಕಳೆದ ಆರ್ಥಿಕ ವರ್ಷದಲ್ಲಿ ಭಾರೀ ಲಾಭ ಗಳಿಸಿವೆ. ಇದನ್ನು ಸ್ವತಃ ಪೆಟ್ರೋಲಿಯಂ ಖಾತೆ ಸಚಿವರೇ ವಾರ್ಷಿಕ ವರದಿಯಲ್ಲಿ ಹೇಳಿದ್ದರು. ಆದರೂ ತೈಲ ಕಂಪನಿಗಳು ನಷ್ಟದಲ್ಲಿವೆ ಎಂದು ಸರಕಾರ ಹೇಳುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.