ಅಪರೂಪವಾಗಿ ಭಾರತದ ವಿದೇಶಾಂಗ ನೀತಿಯ ಕುರಿತು ಮಾತನಾಡಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಮುಂಬೈ ಭಯೋತ್ಪಾದನಾ ದಾಳಿಯ ಕುರಿತು ಗಂಭೀರವಾಗಿ ತನಿಖೆ ನಡೆಸುವಂತೆ ಪಾಕಿಸ್ತಾನಕ್ಕೆ ಸಲಹೆ ನೀಡಿದ್ದಾರೆ.
ಮುಂಬೈ ಭಯೋತ್ಪಾದನಾ ದಾಳಿಯ ಕುರಿತು ಪಾಕಿಸ್ತಾನವು ಗಂಭೀರವಾಗಿ ತನಿಖೆ ನಡೆಸಬೇಕು ಮತ್ತು ಕ್ರೂರ ಕೃತ್ಯದ ಹಿಂದಿನ ರೂವಾರಿಗಳನ್ನು ನ್ಯಾಯಾಂಗದ ಕಟಕಟೆಗೆ ತರಬೇಕು ಎಂದು ಹೇಳುವನ್ನು ನಾವು ಮುಂದುವರಿಸುತ್ತೇವೆ ಎಂದು ಪಕ್ಷದ ಮುಖವಾಣಿ 'ಕಾಂಗ್ರೆಸ್ ಸಂದೇಶ್'ನಲ್ಲಿ ಬರೆದಿದ್ದಾರೆ.
ಪಾಕಿಸ್ತಾನಕ್ಕೆ ಸಂಬಂಧ ಪಟ್ಟ ವಿಚಾರಗಳ ಕುರಿತ ಭಾರತದ ನಿಲುವಿನ ಕುರಿತು ರೂಪುರೇಷೆ ವ್ಯಕ್ತಪಡಿಸಿರುವ ಸೋನಿಯಾ, ನಾವು ಶಾಂತಿಗಾಗಿ ಬಯಸುತ್ತಿರುವ ಸಂದರ್ಭದಲ್ಲಿ ಭಯೋತ್ಪಾದನೆಯ ಕುರಿತು ಮೃದು ನೀತಿ ಅನುಸರಿಸಬಾರದು ಎಂದಿದ್ದಾರೆ.
ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಪಾಕಿಸ್ತಾನಕ್ಕೆ ಭೇಟಿ ನೀಡಿದ ನಂತರ ಇದೀಗ ಸೋನಿಯಾ ನೀಡಿರುವ ಹೇಳಿಕೆಯು ನೆರೆ ರಾಷ್ಟ್ರದ ಜತೆಗಿನ ಸಂಬಂಧದ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಕೃಷ್ಣ ಭೇಟಿ ಸಂದರ್ಭದಲ್ಲಿ ಪಾಕ್ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿಯವರ ಅನುಚಿತ ವರ್ತನೆಯ ಹಿನ್ನೆಲೆಯಲ್ಲಿ ಸೋನಿಯಾ ಹೇಳಿಕೆಯು ವಿದೇಶಾಂಗ ನೀತಿಯ ಮೇಲೆ ಹೆಚ್ಚಿನ ಬಲವನ್ನು ನೀಡಿದೆ ಎಂದು ವಿಶ್ಲೇಷಿಸಲಾಗಿದೆ.
ಉಭಯ ಸಚಿವರುಗಳ ನಡುವಿನ ಮಾತುಕತೆ ಕುರಿತು ಬರೆದುಕೊಂಡಿರುವ ಸೋನಿಯಾ, ಉಭಯ ರಾಷ್ಟ್ರಗಳ ನಡುವಿನ ಇತ್ಯರ್ಥವಾಗದೆ ಉಳಿದಿರುವ ವಿಷಯಗಳ ಕುರಿತು, ಅದರಲ್ಲೂ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಮಾತುಕತೆ ನಡೆಸುವುದು ಅವಶ್ಯಕ ಎಂದಿದ್ದಾರೆ.
ಎರಡು ದೇಶಗಳ ನಡುವಿನ ಅತ್ಯುತ್ತಮ ಸಂಬಂಧವನ್ನು ಮರು ಕ್ರೋಢೀಕರಿಸಲು ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಕೈಗೊಳ್ಳುವ ಪರಿಣಾಮಕಾರಿ ಕ್ರಮವೇ ಪ್ರಮುಖವಾಗಿರುತ್ತದೆ ಎನ್ನುವ ಭಾರತದ ನಿಲುವಿನಲ್ಲಿ ಯಾವುದೇ ಅಸ್ಪಷ್ಟತೆಯಿಲ್ಲ ಎಂದಿರುವ ಸೋನಿಯಾ, ಅದಕ್ಕೂ ಮೊದಲು ಗೃಹ ಸಚಿವ ಪಿ. ಚಿದಂಬರಂ ಭೇಟಿಯೂ ಸ್ವಾಗತಾರ್ಹ ಎಂದು ಬಣ್ಣಿಸಿದ್ದಾರೆ.