ಮಣ್ಣಿನಲ್ಲಿ ಮಾಡಿದ ಆಕೃತಿಗೆ ಜೀವ ಕೊಟ್ಟು ದ್ವಾರಪಾಲಕನನ್ನಾಗಿಸಿ ಸ್ನಾನಕ್ಕೆ ಹೋಗಿದ್ದ ಪಾರ್ವತಿಯ ನೋಡಲು ಬಂದ ಶಿವನನ್ನೇ ತಡೆದ ಬಾಲಕ ಗಜಮುಖನಾದ ಕಥೆ ನಿಮಗೆ ಗೊತ್ತೇ ಇದೆ. ಆತ ತನ್ನ ನಿಷ್ಠೆಯನ್ನು ಪ್ರದರ್ಶಿಸಿ ದೇವನಾದ, ಇಲ್ಲೊಬ್ಬ ಅಡ್ಡ ದಾರಿ ಹಿಡಿದುಶ್ರೀಮಂತನಾಗಿದ್ದಾನೆ.
ಗಜಮುಖನಿಗೂ, ಈ ವರದಿಯಲ್ಲಿರುವ ದ್ವಾರಪಾಲಕನಿಗೂ ತಮಗೆ ವಹಿಸಿದ್ದ ಕಾರ್ಯದ ಹೊರತು ಯಾವುದೇ ರೀತಿಯಲ್ಲೂ ಸಂಬಂಧವಿಲ್ಲ. ಈ ದುರುಳನ ಹೆಸರು ರಜನೀಕಾಂತ್ ಜೇನಾ. ಆದಾಯ ತಿಂಗಳಿಗೆ 3,500 ರೂಪಾಯಿ. ಮಾಡಿರುವ ಆಸ್ತಿ ಎರಡು ಕೋಟಿ ರೂಪಾಯಿ!
ಒರಿಸ್ಸಾದ ಸರಕಾರದ ನಾಲ್ಕನೇ ದರ್ಜೆ ನೌಕರನಾಗಿರುವ ರಜನೀಕಾಂತ್, ರಾಜ್ಯ ಸರಕಾರದ ಕಟಕ್ ವಿಭಾಗದಲ್ಲಿನ ಕೈಗಾರಿಕಾ ಅಭಿವೃದ್ಧಿ ನಿಗಮದಲ್ಲಿ (ಐಡಿಸಿಒ) ವಾಚ್‌ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಇಂತಿಪ್ಪ ದ್ವಾರಪಾಲಕನಲ್ಲಿ ಹತ್ತು ಹಲವು ಕಾರುಗಳಿವೆ. ರಾಜ್ಯ ರಾಜಧಾನಿಯಲ್ಲೇ ಮೂರು ಬಿಲ್ಡಿಂಗ್‌ಗಳಿವೆ. ಪುರಿಯಲ್ಲೊಂದು ಅತಿಥಿ ಗೃಹವಿದೆ. ಎಲ್‌ಐಸಿ, ಬ್ಯಾಂಕ್ ಬ್ಯಾಲೆನ್ಸ್‌ಗಳೂ ಭರ್ಜರಿಯಾಗಿವೆ. ಹಲವು ಫೈನಾನ್ಸ್ ಮತ್ತಿತರ ಆರ್ಥಿಕ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾನೆ. ಆದರೆ ಯಾವ ರೀತಿಯಲ್ಲಿ ಇಷ್ಟೊಂದು ಮೊತ್ತದ ಆಸ್ತಿ ಸಂಪಾದಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇಲ್ಲಿನ ಚಂದ್ರಶೇಖರಪುರದಲ್ಲಿನ ವಸತಿ ಮಂಡಳಿ ಕಾಲೊನಿಯಲ್ಲಿನ ವಾಚ್‌ಮನ್ ಮನೆಗೆ ವಿಚಕ್ಷಕ ದಳದ ಅಧಿಕಾರಿಗಳು ದಾಳಿ ಮಾಡಿದ ನಂತರ ಆದಾಯಕ್ಕಿಂತ ಭಾರೀ ಪ್ರಮಾಣದ ಆಸ್ತಿಯಿರುವುದು ಪತ್ತೆಯಾಗಿದೆ.
ದಾಳಿಯ ಸಂದರ್ಭದಲ್ಲಿ ದುಬಾರಿ ಹಾಗೂ ಐಷಾರಾಮಿ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಐಷಾರಾಮಿ ಕಾರುಗಳು ಕೂಡ ಕಂಡು ಬಂದಿವೆ. ಸುಮಾರು 205 ಗ್ರಾಮ್ ಚಿನ್ನಾಭರಣ ಸಿಕ್ಕಿದೆ. ವಿವಿಧ ಬ್ಯಾಂಕ್ ಮತ್ತು ಅಂಚೆ ಕಚೇರಿಯಲ್ಲಿ 29,96,290 ರೂಪಾಯಿ, ಎಲ್‌ಐಸಿಯಲ್ಲಿ 21,56,386 ರೂಪಾಯಿ ಜಮಾ ಮಾಡಲಾಗಿದೆ. 33,43,960 ರೂಪಾಯಿ ನಗದು ಸಿಕ್ಕಿದೆ ಎಂದು ಅಧಿಕಾರಿಗಳು ದಾಳಿಯ ಕುರಿತು ವಿವರಣೆ ನೀಡಿದ್ದಾರೆ.
ಪುರಿಯಲ್ಲಿನ ಬಾಲಿಯಾಪಂಡದಲ್ಲಿ ನಾಲ್ಕು ಮಹಡಿಗಳ ಒಂದು ಕಟ್ಟಡ, ಭುವನೇಶ್ವರದ ಚಂದ್ರಶೇಖರಪುರದ ವಸತಿ ಮಂಡಳಿ ಕಾಲೊನಿಯಲ್ಲಿ ಒಂದು ನಿವೇಶನ, ಅಲ್ಲೇ ಪಕ್ಕದಲ್ಲಿ ಮೂರು ಇತರ ಮನೆಗಳು ಕಾವಲುಗಾರನಿಗಿರುವುದು ಪತ್ತೆಯಾಗಿದೆ. ಇವುಗಳ ಒಟ್ಟು ಮೌಲ್ಯ 1,20,67,000 ರೂಪಾಯಿಗಳು.
ಒಟ್ಟಾರೆ ಕಟ್ಟಡಗಳು, ಚಿನ್ನಾಭರಣ, ಕಾರುಗಳು, ಬ್ಯಾಂಕ್ ಠೇವಣಿ ಸೇರಿದಂತೆ ರಜನೀಕಾಂತ್ ಆಸ್ತಿಯ ಮೌಲ್ಯ 2,05,63,636 ರೂಪಾಯಿಗಳು ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.