ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಾಂಪ್ರದಾಯಿಕ ಗಜಾಶೀರ್ವಾದಕ್ಕೆ ತಮಿಳುನಾಡು ನಿಷೇಧ?
(Tamil Nadu | elephant blessings | temples | Wildlife officials)
ತಲತಲಾಂತರದಿಂದ ಹಿಂದೂ ದೇವಳಗಳಲ್ಲಿ ನಡೆದುಕೊಂಡು ಬರುತ್ತಿರುವ ಪದ್ಧತಿಯೊಂದು ತಮಿಳುನಾಡಿನಲ್ಲಿ ನಿಷೇಧಕ್ಕೊಳಗಾಗುವ ಭೀತಿಯಲ್ಲಿದೆ. ಆನೆಗಳಿಂದ ಭಕ್ತರಿಗೆ ಆಶೀರ್ವಾದ ಮಾಡಿಸುವುದನ್ನು ನಿಲ್ಲಿಸಬೇಕು ಎಂಬ ಒತ್ತಾಯ ಕೇಳಿ ಬಂದಿರುವುದರಿಂದ ಕರುಣಾನಿಧಿ ಸರಕಾರ ಅಸ್ತು ಎನ್ನುವ ಸಾಧ್ಯತೆಗಳಿವೆ.
ದೇವಸ್ಥಾನಗಳಲ್ಲಿ ಭಕ್ತರಿಗೆ ಆನೆಗಳ ಮೂಲಕ ಬಲವಂತವಾಗಿ ಆಶೀರ್ವಾದ ಮಾಡಲಾಗುತ್ತಿದೆ. ಬಹುತೇಕ ಸಂದರ್ಭಗಳಲ್ಲಿ ಆನೆಗಳು ಮಾತು ಕೇಳದೇ ಇದ್ದ ಸಂದರ್ಭದಲ್ಲಿ ಅವುಗಳನ್ನು ಕಠಿಣವಾಗಿ ಶಿಕ್ಷಿಸಲಾಗುತ್ತಿದೆ. ಇದರಿಂದಾಗಿ ಆನೆಗಳು ಗಾಯಕ್ಕೊಳಗಾಗುತ್ತಿರುವ ಪ್ರಸಂಗಗಳೂ ಹೆಚ್ಚುತ್ತಿದ್ದು, ಗಜಾಶೀರ್ವಾದವನ್ನು ನಿಲ್ಲಿಸಬೇಕು ಎಂದು ದೇವಸ್ಥಾನಗಳಿಗೆ ವನ್ಯಜೀವಿ ಅಧಿಕಾರಿಗಳು ಸೂಚಿಸಿದ್ದಾರೆ.
PR
ಇವಿಷ್ಟೇ ಅಲ್ಲದೆ, ಮನುಷ್ಯರಂತೆ ಆನೆಗಳು ಕೂಡ ಅಸ್ತಮಾ ಮತ್ತು ಕ್ಷಯರೋಗದಿಂದ ಬಳಲುತ್ತಿವೆ. ಈ ರೀತಿಯಲ್ಲಿ ತಲೆಯನ್ನು ಸೊಂಡಿಲಿನಿಂದ ಮುಟ್ಟಿ ಆಶೀರ್ವಾದ ಮಾಡುವುದರಿಂದ ರೋಗಗಳು ಮನುಷ್ಯರಿಗೆ ಹರಡುವ ಸಾಧ್ಯತೆಗಳಿರುತ್ತವೆ ಎಂದು ಅಧಿಕಾರಿಗಳು ಭೀತಿಯನ್ನೂ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ದೇವಸ್ಥಾನಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಪತ್ರ ಬರೆದಿರುವ ವನ್ಯಜೀವಿ ಇಲಾಖೆ ಮುಖ್ಯಸ್ಥ ಆರ್. ಸುಂದರರಾಜು, ಉಲ್ಲೇಖಿತ ಪದ್ಧತಿಯನ್ನು ಕೈ ಬಿಡುವಂತೆ ಸೂಚಿಸಿದ್ದಾರೆ.
ಅದೇ ಹೊತ್ತಿಗೆ ಆನೆಗಳನ್ನು ಕಾಂಕ್ರೀಟ್ ನೆಲದಲ್ಲಿ ಆನೆಗಳನ್ನು ನಿಲ್ಲಿಸದಂತೆ ದೇವಳಗಳಿಗೆ ಸೂಚಿಸಿದೆ. ಇದರಿಂದ ಆನೆಗಳ ಪದತಳಗಳು ಹಾನಿಗೀಡಾಗಬಹುದು. ಕ್ರಮೇಣ ಆನೆಗಳು ನಡೆದಾಡಲು ಕಷ್ಟವೆನಿಸಬಹುದು ಎಂದು ಎಚ್ಚರಿಸಲಾಗಿದೆ.
ತೀವ್ರ ವಿರೋಧ ಸಾಧ್ಯತೆ... ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳು ಇದೀಗ ಗಜಾಶೀರ್ವಾದ ಪದ್ಧತಿಯ ಮೇಲೆ ನಿಷೇಧ ಹೇರುವ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ, ಅದರಿಂದ ಭಕ್ತರ ಭಾವನೆಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದಿದ್ದಾರೆ.
ಆದರೆ ವನ್ಯಜೀವಿ ಇಲಾಖೆಯ ಸೂಚನೆಗೆ ಈಗಾಗಲೇ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹಲವು ಹಿಂದೂ ಸಂಘಟನೆಗಳು ಇಲಾಖೆಯ ನಿರ್ಧಾರ ಸ್ವೀಕಾರ್ಹವಲ್ಲ. ಇದನ್ನು ಸರಕಾರ ಪರಿಗಣಿಸಬಾರದು ಎಂದು ಒತ್ತಾಯಿಸಿದ್ದಾರೆ.
ಆನೆಗಳಿಂದ ಆಶೀರ್ವಾದ ಪಡೆದುಕೊಳ್ಳುವುದೆಂದರೆ ಅದು ಹಿಂದೂಗಳಿಗೆ ಪವಿತ್ರವಾದದ್ದು. ಹಾಗಾಗಿ ಇದರ ಮೇಲೆ ಹೇರುವ ನಿಷೇಧ ಧಾರ್ಮಿಕ ಭಾವನೆಗಳಿಗೆ ಖಂಡಿತಾ ಧಕ್ಕೆಯನ್ನು ತರುತ್ತದೆ ಎಂದು ಹಿಂದೂ ಭಕ್ತ ಸಭಾ ಸಂಘಟನೆಯ ಕಾರ್ಯಕರ್ತ ಮುರುಗವೇಲ್ ಅಭಿಪ್ರಾಯಪಟ್ಟಿದ್ದಾರೆ.
ಒತ್ತಡ ನಿವಾರಣಾ ಶಿಬಿರ... ಗಜಾಶೀರ್ವಾದವನ್ನು ನಿಷೇಧಿಸುವುದರಿಂದ ಆನೆಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಒತ್ತಡ ನಿವಾರಣೆಗಾಗಿ ವನ್ಯಜೀವಿ ಇಲಾಖೆಯು ಪ್ರತಿ ವರ್ಷ ಒಂದು ತಿಂಗಳು ಆನೆಗಳಿಗಾಗಿ ವಿಶ್ರಾಂತಿ ಶಿಬಿರಗಳನ್ನು ನಡೆಸುತ್ತಾ ಬಂದಿದೆ ಎಂದು ಅಧಿಕಾರಿಯೊಬ್ಬರು ವಿವರಣೆ ನೀಡಿದ್ದಾರೆ.
ಇಲಾಖೆಯು ಆನೆಗಳ ತರಬೇತಿ ಕೇಂದ್ರವನ್ನು ಹೊಂದಿರುವ ನೀಲಗಿರೀಸ್ ಜಿಲ್ಲೆಯ ಮದುಮಲೈ ಅರಣ್ಯದ ಆನೆಗಳ ಆಶ್ರಯಧಾಮದಲ್ಲಿ ಈ ಶಿಬಿರಗಳನ್ನು ಪ್ರತಿವರ್ಷ ನಡೆಸುತ್ತಿದೆ.
ಕಳೆದ ಏಳು ವರ್ಷಗಳಿಂದ ಈ ಶಿಬಿರವನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಆನೆಗಳಿಗೆ ಕ್ಷಯರೋಗ ಹರಡದಂತೆ ವೈದ್ಯಕೀಯ ಚಿಕಿತ್ಸೆಯ ಜತೆ ಪೌಷ್ಠಿಕ ಆಹಾರವನ್ನೂ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.