ಇದು ಕಾರ್ಯಾಂಗದ ನಿರ್ವಹಣೆಗೆ ನ್ಯಾಯಾಂಗ ಅಸಮಾಧಾನ ವ್ಯಕ್ತಪಡಿಸಿರುವ ಪ್ರಕರಣ. ಕುಖ್ಯಾತ ರಾಜಕಾರಣಿಯೊಬ್ಬನನ್ನು ಬಂಧಿಸಬೇಕೆಂದು ನಾವು ಆದೇಶ ನೀಡಿದರೂ, ಅದನ್ನು ಪಾಲನೆ ಮಾಡಲಾಗುತ್ತಿಲ್ಲ. ನಾವೇನೂ ಪೊಲೀಸರಲ್ಲ, ಹಾಗಾಗಿ ನಮಗೇನೂ ಮಾಡಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.
ನಾವು ನೀಡಿದ ಆದೇಶಗಳನ್ನು ಪಾಲನೆ ಮಾಡದೇ ಇದ್ದರೆ, ನಾವೇನು ಮಾಡಬೇಕು? ನಾವೇನೂ ಪೊಲೀಸರಲ್ಲ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಮತ್ತು ಟಿ.ಎಸ್. ಠಾಕೂರ್ ಅವರನ್ನೊಳಗೊಂಡ ಪೀಠವು ಅಸಂತೃಪ್ತಿ ವ್ಯಕ್ತಪಡಿಸಿದೆ.
ಬಿಹಾರದ ಕ್ರಿಮಿನಲ್-ರಾಜಕಾರಣಿ, ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಮಾಜಿ ಸಂಸದ ರಾಜೇಶ್ ರಂಜನ್ ಆಲಿಯಾಸ್ ಪಪ್ಪು ಯಾದವ್‌ನನ್ನು ಬಂಧಿಸಬೇಕು ಎಂದು ಈ ಹಿಂದೆ ನ್ಯಾಯಾಲಯ ನೀಡಿದ್ದ ಆದೇಶವನ್ನು ಜಾರಿಗೆ ತರಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ಈ ರೀತಿ ಹೇಳಿದೆ.
ಪಪ್ಪು ಯಾದವ್ ಜಾಮೀನು ರದ್ದುಗೊಳಿಸಿದ್ದ ನ್ಯಾಯಾಲಯವು, ಆತನನ್ನು ತಕ್ಷಣವೇ ಕಸ್ಟಡಿಗೆ ತೆಗೆದುಕೊಳ್ಳಬೇಕೆಂದು ಆದೇಶ ನೀಡಿತ್ತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದನ್ನು ಪ್ರಶ್ನಿಸಿದ್ದ ರವೀಂದ್ರನಾಥ್ ಸಿಂಗ್ ಎಂಬವರು, ಆದೇಶ ಜಾರಿಗೆ ನಿರ್ದೇಶನ ನೀಡುವಂತೆ ಸುಪ್ರೀಂ ಮೊರೆ ಹೋಗಿದ್ದರು.
ಯಾದವ್‌ಗೆ ಪಾಟ್ನಾ ಹೈಕೋರ್ಟ್ ನೀಡಿದ್ದ ಜಾಮೀನನ್ನು ಅಪೆಕ್ಸ್ ಕೋರ್ಟ್ ಮೇ 3ರಂದು ರದ್ದು ಮಾಡಿತ್ತು.
ಪಪ್ಪು ಯಾದವ್‌ನನ್ನು ತಕ್ಷಣವೇ ಬಂಧಿಸಬೇಕೆಂದು ಆದೇಶ ನೀಡಿ ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅಮರೇಂದ್ರ ಸರಣ್ ಮನವಿ ಮಾಡಿಕೊಂಡರು. ಆತ ತಲೆ ಮರೆಸಿಕೊಂಡಿದ್ದು, ತಕ್ಷಣವೇ ಬಂಧಿಸುವಂತೆ ನ್ಯಾಯಾಲಯ ಆದೇಶ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ನಾವು ಯಾವುದೇ ರೀತಿಯ ಮಂತ್ರದಂಡ ಹೊಂದಿಲ್ಲ; ನಾವು ನೀಡಿದ ನಿರ್ದೇಶನಗಳು ಜಾರಿಯಾಗುವಂತೆ ಎಲ್ಲವನ್ನೂ ನಾವೇ ಮಾಡಬೇಕೆಂದು ನಿರೀಕ್ಷಿಸಲಾಗದು ಎಂದರು.
ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಅರ್ಜಿದಾರರು ಹೈಕೋರ್ಟ್‌ಗೂ ಹೋಗಬಹುದಾಗಿದೆ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ಸಲಹೆ ನೀಡಿದರು.