ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶದ ಅರ್ಧಕ್ಕಿಂತಲೂ ಹೆಚ್ಚು ಮಂದಿಗೆ ಟಾಯ್ಲೆಟ್ಟೇ ಇಲ್ಲ! (Toilet | India | Karnataka | United Nations)
Bookmark and Share Feedback Print
 
ಕರ್ನಾಟಕದ ಸವಣೂರಿನಲ್ಲಿ ಮಲ ಹೊರುವ ಪದ್ಧತಿ ವಿಚಿತ್ರ ಪ್ರತಿಭಟನೆಯ ಮೂಲಕ ಗಮನ ಸೆಳೆದಿರುವುದು ಕನಿಷ್ಠ ಶೌಚಾಲಯ ಹೊಂದಿರುವವರ ಕಥೆಯಾಯಿತು. ಆದರೆ ಈ ದೇಶದಲ್ಲಿ ಶೌಚಾಲಯವೇ ಇಲ್ಲದೆ ನೈಸರ್ಗಿಕ ಕರೆಗಾಗಿ ಪರಿಸರವನ್ನೇ ಬಳಸಿಕೊಳ್ಳುವವರ ಸಂಖ್ಯೆ ದೇಶದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿದೆ ಎಂದರೆ ನಂಬಬಹುದೇ?

ನಂಬಲೇಬೇಕು. ಯಾಕೆಂದರೆ ಇಂತಹ ಒಂದು ವರದಿಯನ್ನು ನೀಡಿರುವುದು ಸ್ವತಃ ವಿಶ್ವಸಂಸ್ಥೆ. ಭಾರತದಲ್ಲಿ ಟಾಯ್ಲೆಟ್‌ಗಳನ್ನು ಬಳಸುವವರಿಗಿಂತ ಮೊಬೈಲ್ ಬಳಸುವವರೇ ಹೆಚ್ಚಾಗಿದ್ದಾರೆ ಎಂದು ಇತ್ತೀಚೆಗಷ್ಟೇ ಒಂದು ವರದಿ ಹೇಳಿದೆ.
PR

ಅಂದಾಜುಗಳ ಪ್ರಕಾರ ಭಾರತದ ಸುಮಾರು ಶೇ.55 ಅಂದರೆ 60 ಕೋಟಿ ಮಂದಿ ಇನ್ನೂ ಶೌಚಾಲಯಗಳನ್ನು ಬಳಸುತ್ತಿಲ್ಲ. ಅವರ ಜೀವನ ಆರಂಭವಾಗುವುದೇ ಪರಿಸರದ ಅಡ್ಡೆಗಳನ್ನು ಹುಡುಕುವ ಮೂಲಕ. ಆ ಮೂಲಕ ಪರಿಸರ ಮಾಲಿನ್ಯದೊಂದಿಗೆ, ನಾಗರಿಕತೆಗೂ ದೊಡ್ಡ ಹೊಡೆತ ಬೀಳುತ್ತಿದೆ.

ಸರಕಾರಗಳೇನೋ ಪ್ರತಿ ವರ್ಷ ಕೋಟಿಗಟ್ಟಲೆ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಾ, ಮನೆಗೊಂದು ಶೌಚಾಲಯ ಎಂದು ಬೀಗುತ್ತಾ ಬಂದಿದೆ. ಆದರೆ ಇದು ಎಷ್ಟು ಫಲ ಕೊಟ್ಟಿದೆ, ನಿಜವಾಗಿಯೂ ಲಾಭ ಪಡೆದುಕೊಂಡವರು ಎಷ್ಟು ಮಂದಿ ಎಂದು ಯಾವ ಸರಕಾರವೂ ಗಮನಿಸುವ ಗೋಜಿಗೆ ಹೋಗಿಲ್ಲ.

ಬಿಹಾರದ ಒಂದು ವರದಿಯನ್ನೇ ಗಮನಿಸಿ. ಇಲ್ಲಿನ 10 ಕೋಟಿ ಜನಸಂಖ್ಯೆಯಲ್ಲಿ ಟಾಯ್ಲೆಟ್ಟನ್ನು ಬಳಸದೇ ಇರುವ ಮನೆಗಳ ಸಂಖ್ಯೆ ಸುಮಾರು ಒಂದು ಕೋಟಿ. ಅಂದರೆ ಸರಿಸುಮಾರು ಐದು ಕೋಟಿಗೂ ಹೆಚ್ಚು ಮಂದಿ ಇನ್ನೂ ಶೌಚಾಲಯ ಬಳಸುತ್ತಿಲ್ಲ.

ಇತರ ರಾಜ್ಯಗಳ ಕತೆಯೂ ಇದಕ್ಕಿಂತ ಬೇರೆಯಲ್ಲ. ನಗರಗಳಲ್ಲಿ ಶೌಚಾಲಯಗಳು ಅನಿವಾರ್ಯ (ರೈಲು ಹಳಿಗಳನ್ನು ಬಿಟ್ಟು) ಎಂದಾಗಿದೆಯಾದರೂ, ಗ್ರಾಮೀಣ ಪ್ರದೇಶಗಳಲ್ಲಿ ಅಂತಹ ಪರಿಸ್ಥಿತಿ ಇನ್ನೂ ಅನಿವಾರ್ಯ ಎಂಬ ಸ್ಥಿತಿಗೆ ಸಂಪೂರ್ಣವಾಗಿ ತಲುಪಿಲ್ಲ.

ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ಬಹುತೇಕ ಮಂದಿ ತಮ್ಮ ನೈಸರ್ಗಿಕ ಕರೆಗಳನ್ನು ಪೂರೈಸಿಕೊಳ್ಳುವುದು ಗದ್ದೆ ಅಥವಾ ಗುಡ್ಡೆಗಳಲ್ಲಿ. ಮಳೆಗಾಲದಲ್ಲಿ ತೊರೆ-ನದಿಗಳ ಮೊರೆ ಹೋಗುವುದೂ ಇದೆ. ಅದರಲ್ಲೂ ಸಮುದ್ರ ತಟಗಳಲ್ಲಿ ಮನೆಗಳನ್ನು ಹೊಂದಿರುವ ಮಂಗಳೂರು ಮುಂತಾದೆಡೆ ಶೌಚಾಲಯ ಇದ್ದರೂ ಬಳಸಿಕೊಳ್ಳದೇ ಇರುವುದನ್ನು ಸಾಮಾನ್ಯವಾಗಿ ಕಾಣಬಹುದಾಗಿದೆ.

ಬಿಹಾರದ ರಾಣಿಪುರ ಎಂಬ ಗ್ರಾಮದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಲ್ಲಿನ ಪಾರ್ವತಿ ದೇವಿ ಮತ್ತು ಆಕೆಯ ಹದಿಹರೆಯದ ಹೆಣ್ಮಕ್ಕಳು ಬೆಳಗಾಗುವ ಮೊದಲು ತಮ್ಮ ನಿತ್ಯಕರ್ಮಗಳನ್ನು ಪೂರೈಸಿಕೊಳ್ಳಲು ಗದ್ದೆಗಳಿಗೆ ಓಡುತ್ತಾರೆ. ನಂತರ ಮತ್ತೆ ಈ ಅವಕಾಶ ಸಿಗುವುದು ಸೂರ್ಯ ಮುಳುಗಿದ ನಂತರ.

ಈ ಬಗ್ಗೆ ವಿವರಣೆ ನೀಡಿರುವ ರಾಜ್ ದೇವ್ ಪಾಸ್ವಾನ್ ಎಂಬವರು, ನಿಮಗೆ ಇದರ ನೈಜ ದರ್ಶನವಾಗಬೇಕಾದರೆ ಗದ್ದೆ ಬದಿಗಳಲ್ಲಿ ಮುಂಜಾನೆ ಅಥವಾ ರಾತ್ರಿ ಹೊತ್ತಿನಲ್ಲಿ ನೋಡಿ. ಬಯಲು ಗದ್ದೆಗಳಲ್ಲಿ ಶೌಚಕ್ಕೆ ಹೋಗುವುದು ನಮ್ಮಲ್ಲಿ ದೊಡ್ಡ ವಿಚಾರವೇ ಅಲ್ಲ. ಮಹಿಳೆಯರು ಹೋಗುವುದಾದರೆ ಅವರು ಗುಂಪಿನಲ್ಲಿ ಹೋಗುತ್ತಾರೆ ಎಂದು ವಿವರಣೆ ನೀಡಿದರು.

ಈ ರೀತಿ ಶೌಚಾಲಯ ಬಳಸದೆ ಬಯಲು ಗದ್ದೆಗಳಲ್ಲಿ ಅಥವಾ ನಿಸರ್ಗದ ಮಡಿಲಲ್ಲಿ ದೇಹಕರ್ಮಗಳನ್ನು ಪೂರೈಸುವುದರಿಂದ ಅನೇಕ ಸಾಂಕ್ರಾಮಿಕ ರೋಗಳು ಹರಡುತ್ತವೆ. ಪರಿಸರ ಮಾಲಿನ್ಯ ಹೆಚ್ಚುತ್ತದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸುತ್ತಾ ಬಂದಿದೆ. ಕೇಳುವವರು ಯಾರು?
ಸಂಬಂಧಿತ ಮಾಹಿತಿ ಹುಡುಕಿ