ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಜನಸಂಖ್ಯೆ ನಿಯಂತ್ರಣವಾಗದಿದ್ದರೆ ಅಭಿವೃದ್ಧಿ ಹೇಗೆ?'
(population growth | Ghulam Nabi Azad | Total Fertility Rate | Karnataka)
ಕೆಲವು ರಾಜ್ಯಗಳಲ್ಲಿನ ಜನಸಂಖ್ಯಾ ಹೆಚ್ಚಳ ತೀವ್ರ ಕಳವಳಕಾರಿಯಾಗಿದೆ ಎಂದಿರುವ ಕೇಂದ್ರ ಸರಕಾರವು, ಇದರ ನಿಯಂತ್ರಣವಾಗದ ಹೊರತು ನಾವು ಅಗತ್ಯ ವಸ್ತುಗಳು, ಹಣದುಬ್ಬರ ಮುಂತಾದ ವಿಚಾರಗಳಲ್ಲಿ ನೇರ ಫಲಿತಾಂಶಗಳನ್ನು ಕಾಣುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದೆ.
ಪ್ರಮುಖವಾಗಿ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಗಳಲ್ಲಿನ ಜನಸಂಖ್ಯಾ ಸ್ಫೋಟ ಆತಂಕಕಾರಿಯಾಗಿದೆ. ಇದು ರಾಷ್ಟ್ರದ ಲಭ್ಯ ಸಂಪನ್ಮೂಲಗಳ ಮೇಲೆ ಅಡ್ಡ ಪರಿಣಾಮಗಳನ್ನು ಬೀರುವ ಅಪಾಯಗಳಿವೆ ಎಂದು ಕ್ರಮವಾಗಿ ಶೇಕಡಾ 92 ಹಿಂದೂಗಳು, ಶೇ.7 ಮುಸ್ಲಿಂ ಮತ್ತು ಶೇ.1ರಷ್ಟು ಇತರರು ಹಾಗೂ ಶೇಕಡಾ 80 ಹಿಂದೂಗಳು, ಶೇ.18 ಮುಸ್ಲಿಂ ಮತ್ತು ಶೇ.2ರಷ್ಟು ಇತರ ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳನ್ನು ಉಲ್ಲೇಖಿಸಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬೀ ಆಜಾದ್ ತಿಳಿಸಿದ್ದಾರೆ.
ಜನಸಂಖ್ಯಾ ಸ್ಥಿರೀಕರಣ ಕುರಿತ ಗೊತ್ತುವಳಿಯನ್ನು ಲೋಕಸಭೆಯಲ್ಲಿ ಮಂಡಿಸಿದ ಆಜಾದ್, ಭಾರತದ ಕೇಂದ್ರೀಯ ರಾಜ್ಯಗಳಾದ ರಾಜಸ್ತಾನ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ಗಳಲ್ಲೂ ಒಟ್ಟು ಫಲವತ್ತತೆ ಪ್ರಮಾಣವು (ಟಿಎಫ್ಆರ್) ನಿರೀಕ್ಷಿತ ಅಂದಾಜಿಗಿಂತ ದುಪ್ಪಟ್ಟಾಗಿದೆ ಎಂದರು.
ದಂಪತಿಗಳು ತಮ್ಮ ಜೀವಿತಾವಧಿಯಲ್ಲಿ ಪಡೆಯುವ ಒಟ್ಟು ಮಕ್ಕಳ ಸರಾಸರಿಯೇ ಒಟ್ಟು ಫಲವತ್ತತೆ ಪ್ರಮಾಣ ಅಥವಾ Total Fertility Rate.
ಮೇಲೆ ಹೇಳಿರುವ ರಾಜ್ಯಗಳ ಸರಾಸರಿ ಟಿಎಫ್ಆರ್ ಶೇ.3.8. ಅಂದರೆ 2.1ರ ಟಿಎಫ್ಆರ್ ಸಾಧಿಸುವ ಗುರಿಯಿಟ್ಟುಕೊಂಡಿದ್ದ ಭಾರತಕ್ಕೆ ಇದು ತೀರಾ ಅಹಿತಕಾರಿ ಸುದ್ದಿ. ಇದನ್ನು ಸರಿಪಡಿಸಲು ತ್ವರಿತ ಕ್ರಮ ಕೈಗೊಳ್ಳಬೇಕೆಂದು ಸಚಿವರು ಕರೆ ನೀಡಿದ್ದಾರೆ.
ನಾವು ಅಗತ್ಯ ವಸ್ತುಗಳು, ಹಣದುಬ್ಬರ ಏರಿಕೆಯತ್ತ ಸಾಗುತ್ತಿದೆ ಎಂದು ಮಾತಿಗಿಳಿಯುತ್ತೇವೆ. ಆದರೆ ಇವೆಲ್ಲವೂ ಜನಸಂಖ್ಯಾ ಏರಿಕೆಯ ನೇರ ಪರಿಣಾಮಗಳು. ದೇಶದಲ್ಲಿ ಲಭ್ಯವಿರುವ ಸೀಮಿತ ಸಂಪನ್ಮೂಲಗಳು ಜನಸಂಖ್ಯಾ ಹೆಚ್ಚಳದಿಂದಾಗಿ ಸರಿಯಾಗಿ ಹಂಚಿಕೆಯಾಗುತ್ತಿಲ್ಲ ಎಂದರು.
ಅದೇ ಹೊತ್ತಿಗೆ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಲ, ಹಿಮಾಚಲ ಪ್ರದೇಶ, ನವದೆಹಲಿ, ಸಿಕ್ಕಿಂ, ಚಂಡೀಗಢ, ಪಾಂಡಿಚೇರಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನಿರೀಕ್ಷಿತ ಟಿಎಫ್ಆರ್ ಹೊಂದುವಲ್ಲಿ ಯಶಸ್ವಿಯಾಗಿವೆ.
ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿದ್ದಾಗ 2000ದಲ್ಲಿ ಜನಸಂಖ್ಯಾ ಸ್ಥಿರೀಕರಣ ನೀತಿಯನ್ನು ಪರಿಚಯಿಸಲಾಗಿತ್ತು. ಅದರ ಪ್ರಕಾರ ದೇಶವು 2010ರೊಳಗೆ 2.1 ಟಿಎಫ್ಆರ್ ಸಾಧಿಸಬೇಕಿತ್ತು. ಹೀಗಾಗುತ್ತಿದ್ದರೆ 2045ರ ಹೊತ್ತಿಗೆ ಭಾರತವು ಜನಸಂಖ್ಯಾ ಸ್ಥಿರೀಕರಣವನ್ನು ಕಾಣಬಹುದು ಎಂದು ಅಂದಾಜು ಮಾಡಲಾಗಿತ್ತು.
ಮಣಿಪುರ, ಮಿಜೋರಾಂ ಹಾಗೂ ಜಮ್ಮು-ಕಾಶ್ಮೀರ ರಾಜ್ಯಗಳು 2.8ರಿಂದ 3ರ ನಡುವಿನ ಟಿಎಫ್ಆರ್ ಹೊಂದಿವೆ. ಆದರೂ ನಮ್ಮ ಕಳವಳಕ್ಕೆ ಕಾರಣವಾಗಿರುವುದು ಕೇಂದ್ರೀಯ ಭಾರತ. ಇಲ್ಲಿನ ಜನಸಂಖ್ಯಾ ಏರಿಕೆಯನ್ನು ನಿಯಂತ್ರಿಸಬೇಕಾಗಿದೆ. ಇಲ್ಲಿನ ಟಿಎಫ್ಆರ್‌ನಲ್ಲಿ ಯಾವುದೇ ಬದಲಾವಣೆಗಳು ಕಂಡು ಬರದೇ ಇರುವುದು ದುರದೃಷ್ಟಕರ ಎಂದು ಆಜಾಜ್ ತಿಳಿಸಿದ್ದಾರೆ.