ಸಂಯುಕ್ತ ಜನತಾದಳ ಅಧ್ಯಕ್ಷ ಶರದ್ ಯಾದವ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಆಕಾಶ ಮಧ್ಯದಲ್ಲಿ ತಾಂತ್ರಿಕ ದೋಷಕ್ಕೀಡಾದ ಕಾರಣ ತಕ್ಷಣವೇ ಗದ್ದೆಯೊಂದರಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಗಿದ್ದು, ಸಂಭಾವ್ಯ ಹೆಲಿಕಾಪ್ಟರ್ ಅಪಘಾತವೊಂದರಿಂದ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಯಾದವ್ ಜತೆ ಇತರ ಮೂವರು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳು ಹೆಲಿಕಾಪ್ಟರಿನಲ್ಲಿದ್ದರು. ಮೂಲಗಳ ಪ್ರಕಾರ ಹೆಲಿಕಾಪ್ಟರ್ ಬಾಲದ ರೊಟೇಟರ್ ಬ್ಲೇಡ್ ಆಕಾಶ ಮಧ್ಯದಲ್ಲೇ ಮುರಿದ ಕಾರಣ ಅಪಾಯಕ್ಕೆ ಸಿಲುಕಿತ್ತು.
ಆತಂಕದಿಂದ ಪಾರಾದ ನಂತರ ಪ್ರತಿಕ್ರಿಯೆ ನೀಡಿರುವ ಯಾದವ್, ನಾವು ಬೆಳಿಗ್ಗೆ 8.30ರ ಹೊತ್ತಿಗೆ ಪಾಟ್ನಾದಿಂದ ಹೊರಟಿದ್ದೆವು. ಹೆಲಿಕಾಪ್ಟರ್ ಮೇಲೇರಿದ ಐದಾರು ನಿಮಿಷಗಳಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಸಿತು. ಬಳಿಕ ಆಕಾಶದಲ್ಲೇ 15 ಮೀಟರುಗಳಷ್ಟು ತಕ್ಷಣ ಕುಸಿಯಿತು. ಇದಾಗ ನಿಮಿಷದೊಳಗೆ ನಮ್ಮ ಹೆಲಿಕಾಪ್ಟರ್ ಭೂಸ್ಪರ್ಶ ಮಾಡಿತ್ತು. ಅಪಾಯಕಾರಿ ಪರಿಸ್ಥಿತಿಯನ್ನು ಪೈಲಟ್ ಸಮರ್ಪಕವಾಗಿ ನಿಭಾಯಿಸಿದ್ದಾರೆ ಎಂದರು.
ಹೆಲಿಕಾಪ್ಟರಿನ ಬಾಲದಲ್ಲಿರುವ ಎರಡು ಬ್ಲೇಡುಗಳಲ್ಲಿ ಒಂದು ಕೆಲವು ಸೆಂಟಿಮೀಟರುಗಳಷ್ಟು ಮುರಿದು ಹೋಗಿದೆ ಎಂದು ಪೈಲಟ್ ನನಗೆ ಮಾಹಿತಿ ನೀಡಿದ. ಹೆಲಿಕಾಪ್ಟರ್ ಭಾರೀ ಎತ್ತರದಲ್ಲಿದ್ದುದರಿಂದ ಹಾನಿಗೊಳಗಾದ ಬ್ಲೇಟ್ ಸಂಪೂರ್ಣವಾಗಿ ಮುರಿದು ಬೀಳುವ ಸಾಧ್ಯತೆಯಿತ್ತು. ಹೀಗಾಗಿದ್ದಿದ್ದಲ್ಲಿ ಅದು ಭಾರೀ ಅಪಾಯಕ್ಕೆ ಹತ್ತಿರವಾಗುತ್ತಿತ್ತು ಎಂದು ಯಾದವ್ ನಿಟ್ಟುಸಿರು ಬಿಟ್ಟಿದ್ದಾರೆ.
ಅಪಾಯದಿಂದ ಪಾರಾದ ಹೆಲಿಕಾಪ್ಟರಿನಲ್ಲಿದ್ದ ರಾಜ್ಯ ರಸ್ತೆ ಕಾಮಗಾರಿ ಸಚಿವ ಪ್ರೇಮ್ ಕುಮಾರ್ ಅವರನ್ನು ಈ ಸಂಬಂಧ ಸಂಪರ್ಕಿಸಿದಾಗ, ಹೆಲಿಕಾಪ್ಟರ್ ಓಲಾಡಲಾರಂಭಿಸಿದಾಗ ನಾವು ಬಾಲದ ಕಡೆಯಿಂದ ಭಾರೀ ಶಬ್ದವನ್ನು ಆಲಿಸಿದೆವು. ತಕ್ಷಣವೇ ತುರ್ತು ಭೂಸ್ಪರ್ಶ ಮಾಡಲು ಪೈಲಟ್‌ಗಳು ನಿರ್ಧರಿಸಿದರು ಎಂದರು.
ಅಪಾಯ ಎದುರಾಗುತ್ತಿದ್ದಂತೆ ಪಾಟ್ನಾದ ವಾಯು ಸಂಚಾರ ನಿಯಂತ್ರಣ ಕಚೇರಿಗೆ ಮಾಹಿತಿ ನೀಡಿದ್ದ ಪೈಲಟ್, ಇಲ್ಲಿನ ಜಕ್ಕಂಪುರ್ ಸಮೀಪದ ಗದ್ದೆಯಲ್ಲಿ ಹೆಲಿಕಾಪ್ಟರನ್ನು ಇಳಿಸಿದ್ದಾನೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಂದ ಉದ್ಘಾಟನೆಯಾಗಲಿದ್ದ ರಸ್ತೆ ಕಾರ್ಯಕ್ರಮವೊಂದಕ್ಕಾಗಿ ಶರದ್ ಯಾದವ್ ತೆರಳುತ್ತಿದ್ದರು ಎಂದು ವರದಿಗಳು ಹೇಳಿವೆ.