ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನಕ್ಕೆ ಕಸಬ್ ಹೇಳಿಕೆ ಪುನರುಚ್ಛರಿಸಲಿರುವ ಭಾರತ (India | Mumbai terror attacks | Pakistani court | Ajmal Amir Kasab)
2008ರ ಮುಂಬೈ ಭಯೋತ್ಪಾದನಾ ದಾಳಿಯ ತನಿಖೆ ನಡೆಸಿರುವ ಭಾರತೀಯ ಅಧಿಕಾರಿಗಳು ಪಾಕಿಸ್ತಾನದ ನ್ಯಾಯಾಲಯಕ್ಕೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಲು ನವದೆಹಲಿ ಗುರುವಾರ ಒಪ್ಪಿಗೆ ಸೂಚಿಸಿದೆ.
ಮುಂಬೈ ದಾಳಿಯಲ್ಲಿ ಜೀವಂತವಾಗಿ ಸೆರೆಸಿಕ್ಕ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಮೀರ್ ಅಜ್ಮಲ್ ಕಸಬ್ ವಿಚಾರಣೆ ನಡೆಸಿದ್ದ ಭಾರತೀಯ ಅಧಿಕಾರಿಗಳು ಪಾಕಿಸ್ತಾನದ ನ್ಯಾಯಾಲಯಕ್ಕೆ ಹೇಳಿಕೆ ನೀಡಬೇಕು ಎಂದು ಪಾಕ್ ಮನವಿ ಮಾಡಿಕೊಂಡಿತ್ತು. ಅದರಂತೆ ಭಾರತೀಯ ಅಧಿಕಾರಿಗಳು ಹೇಳಿಕೆ ನೀಡಲು ಕಾನೂನು ಸಚಿವಾಲಯವು ಒಪ್ಪಿಗೆ ನೀಡಿದೆ.
ಜತೆಗೆ ಕಸಬ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದ ನ್ಯಾಯಾಂಗದ ಅಧಿಕಾರಿ ಪಾಕಿಸ್ತಾನ ನ್ಯಾಯಾಲಯದ ಮುಂದೆ ಹೇಳಿಕೆ ನೀಡಲು ಸಾಧ್ಯವೇ ಎಂದು ಬಾಂಬೆ ಹೈಕೋರ್ಟ್ ಎದುರು ಸರಕಾರವು ಕೇಳಿಕೊಳ್ಳಲಿದೆ.
ಲಷ್ಕರ್ ಇ ತೋಯ್ಬಾ ಕಾರ್ಯಾಚರಣೆ ಕಮಾಂಡರ್ ಝಾಕೀರ್ ರೆಹಮಾನ್ ಲಖ್ವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್.ವಿ. ಸಾವಂತ್ ವಾಘಲೆ ಮತ್ತು ತನಿಖಾಧಿಕಾರಿ ರಮೇಶ್ ಮಹಾಲೆಯವರು ಹೇಳಿಕೆ ನೀಡಬೇಕೆಂದು ಪಾಕಿಸ್ತಾನ ನಿರ್ದಿಷ್ಟವಾಗಿ ಮನವಿ ಮಾಡಿತ್ತು.
ಪಾಕಿಸ್ತಾನದ ಪ್ರಕಾರ ಭಾರತೀಯ ಅಧಿಕಾರಿಗಳ ಹೇಳಿಕೆಯು ಪ್ರಕರಣದಲ್ಲಿ ಮಹತ್ವ ಪಡೆದುಕೊಳ್ಳುತ್ತದೆ. ಲಖ್ವಿ ಮತ್ತು ಇತರ ಆರೋಪಿಗಳ ವಿರುದ್ಧ ಪಾಕ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಾದರೆ ಅದಕ್ಕೆ ಪ್ರಮುಖ ಆಧಾರವಿರುವುದು ಭಾರತದಲ್ಲಿ ತಪ್ಪೊಪ್ಪಿಗೆ ನೀಡಿರುವ ಕಸಬ್. ಹಾಗಾಗಿ ಅವನು ನೀಡಿರುವ ಹೇಳಿಕೆಗಳನ್ನು ಪಾಕ್ ನ್ಯಾಯಾಲಯಕ್ಕೆ ಖಚಿತಪಡಿಸುವ ಅಗತ್ಯವಿದೆ.
ವಾಘಲೆಯವರು ದಾಖಲಿಸಿಕೊಂಡಿದ್ದ ಕಸಬ್ ಹೇಳಿಕೆಗಳ ಹಿಂದಿ ಮತ್ತು ಮರಾಠಿ ಪ್ರತಿಗಳನ್ನು ಭಾರತವು ಈ ಹಿಂದೆ ಪಾಕಿಸ್ತಾನಕ್ಕೆ ಒದಗಿಸಿತ್ತು. ಇದನ್ನು ಇಂಗ್ಲೀಷಿಗೆ ಭಾಷಾಂತರಿಸಲು ನಸೀಮಾ ಖಾತೂನ್ ಎಂಬವನ್ನು ನೇಮಕ ಮಾಡಿಕೊಂಡಿದ್ದ ಪಾಕಿಸ್ತಾನ, ಅದರಲ್ಲಿನ ಪ್ರಮುಖ ಅಂಶಗಳನ್ನು ಆರೋಪಪಟ್ಟಿಯಲ್ಲಿ ಸೇರಿಸಿತ್ತು.
ಮುಂಬೈ ದಾಳಿಗಾಗಿ ನನಗೆ ಮತ್ತು ನನ್ನ ಜತೆಗಿದ್ದ ಇತರ ಒಂಬತ್ತು ಭಯೋತ್ಪಾದಕರಿಗೆ ಲಷ್ಕರ್ ಇ ತೋಯ್ಬಾದ ಲಖ್ವಿ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ಝರಾರ್ ಶಾಹ್ ಮೊಬೈಲ್ ಫೋನ್‌ಗಳನ್ನು ಒದಗಿಸಿದ್ದಲ್ಲದೆ, ಇತರ ಸಹಕಾರಗಳನ್ನೂ ನೀಡಿದ್ದರು ಎಂದು ಕಸಬ್ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳಿದ್ದ.