ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ರಾಜ್ಯದ ಸಂಸದರು ಕಡಿದು ಹಾಕಿದ್ದೇನು ಗೊತ್ತಾ? (Parliament members | MPLADS | Karnataka | HD Deve Gowda)
Bookmark and Share Feedback Print
 
ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತೆ ನಮ್ಮ ಕರ್ನಾಟಕದಿಂದ ಆಯ್ಕೆಯಾಗಿರುವ 28 ಸಂಸದರಲ್ಲಿ ಬಹುತೇಕ ಮಂದಿ ತಮಗೆಂದು ಸರಕಾರ ಮೀಸಲಾಗಿಟ್ಟಿರುವ ನಿಧಿಯನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎನ್ನುವ ವಿಚಾರ ಬಹಿರಂಗವಾಗಿದೆ.

ಕೇಂದ್ರ ಸರಕಾರವು ಪ್ರತಿ ಸಂಸದನಿಗೂ ವರ್ಷಕ್ಕೆ ಎರಡು ಕೋಟಿ ರೂಪಾಯಿಯಂತೆ ಸಂಸದರ ಅನುದಾನವನ್ನು ನೀಡುತ್ತಾ ಬಂದಿದೆ. ಅದರಂತೆ ಇದೀಗ ಎರಡನೇ ವರ್ಷದಲ್ಲಿರುವ ಸಂಸದರು (15ನೇ ಲೋಕಸಭೆ) ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಬೇಕಾಗಿದ್ದ ಹಣವನ್ನು ಬಳಸಿಕೊಂಡಿಲ್ಲ. ಇನ್ನೂ ಮೊದಲ ವರ್ಷದ ನಿಧಿಯೇ ಕೊಳೆಯುತ್ತಾ ಬಿದ್ದಿದೆ.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯನ್ನು (ಎಂಪಿಎಲ್ಎಡಿಎಸ್) ಪಿ.ವಿ. ನರಸಿಂಹ ರಾವ್ ಅವರ ಸರಕಾರ 1993ರಲ್ಲಿ ಜಾರಿಗೆ ತಂದಿತ್ತು. ಆರಂಭದಲ್ಲಿ ಸಂಸದರಿಗೆ ವಾರ್ಷಿಕವಾಗಿ 50 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು. ಅದನ್ನು ತಮ್ಮ ಕ್ಷೇತ್ರದ ತುರ್ತು ಅವಶ್ಯಕತೆಗಳು ಮತ್ತು ಇತರ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಲು ಅವಕಾಶವಿದೆ. ಈ ಸಂಸದರ ನಿಧಿಯನ್ನು 1998ರಲ್ಲಿ ಎರಡು ಕೋಟಿ ರೂಪಾಯಿಗಳಿಗೆ ಏರಿಸಲಾಗಿತ್ತು.

ದೇಶದ 545 ಸಂಸದರಿಗೆ ಸಂಸದರ ನಿಧಿ ಸೌಲಭ್ಯವಿದೆ. ಅಂದರೆ ಅವರು ಪ್ರತಿ ವರ್ಷ ಎರಡು ಕೋಟಿ ರೂಪಾಯಿಗಳಂತೆ ಅನುದಾನವನ್ನು ಪಡೆಯುತ್ತಾರೆ. ವಿಚಿತ್ರವೆಂದರೆ ಕಳೆದ ವರ್ಷದ ನಿಧಿಯನ್ನೇ 130 ಸಂಸದರು ಬಳಸದೇ ಇರುವುದು. ಇಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್, ವಿತ್ತ ಸಚಿವ ಪ್ರಣಬ್ ಮುಖರ್ಜಿ ಮುಂತಾದ ಘಟಾನುಘಟಿಗಳೂ ಸೇರಿದ್ದಾರೆ.

ನಮ್ಮ ಕರ್ನಾಟಕ ಸಂಸದರಿವರು...
ಕರ್ನಾಟಕದ ಸಂಸದರನ್ನು ಗಮನಕ್ಕೆ ತೆಗೆದುಕೊಂಡರೆ ಬಲುಸೋಮಾರಿಗಳೆಂದು ಕಂಡು ಬಂದಿರುವುದು ದಕ್ಷಿಣ ಕನ್ನಡದ ನಳಿನ್ ಕುಮಾರ್ ಕಟೀಲ್, ಬೆಂಗಳೂರು ಗ್ರಾಮಾಂತರದ ಎಚ್.ಡಿ. ಕುಮಾರಸ್ವಾಮಿ, ರಾಯಚೂರಿನ ಎಸ್. ಫಕೀರಪ್ಪ ಮತ್ತು ಬೆಂಗಳೂರು ಸೆಂಟ್ರಲ್‌ನ ಪಿ.ಸಿ. ಮೋಹನ್. ನಯಾ ಪೈಸೆಯನ್ನೂ ಇವರು ಇದುವರೆಗೆ ತಮ್ಮ ನಿಧಿಯಿಂದ ಖರ್ಚು ಮಾಡಿಲ್ಲ.

15ನೇ ಲೋಕಸಭೆಯನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ 2009-10ರ ವರ್ಷದ ಮೊದಲ ಕಂತಿನಲ್ಲಿ ಎಲ್ಲಾ 28 ಸಂಸದರಿಗೂ ಒಂದು ಕೋಟಿ ರೂಪಾಯಿಗಳಂತೆ ಬಿಡುಗಡೆ ಮಾಡಲಾಗಿತ್ತು. ಆದರೆ ನಂತರದ ಕಂತಿನಲ್ಲಿ 20 ಸಂಸದರಿಗೆ ಮಾತ್ರ ತಲಾ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.

2010-11ರ ಸಾಲಿನಲ್ಲಿ ಮೊದಲ ಕಂತು 17 ಸಂಸದರಿಗೆ ತಲಾ ಒಂದು ಕೋಟಿ ರೂಪಾಯಿಗಳಂತೆ ಬಿಡುಗಡೆಯಾಗಿದೆ. ಎರಡನೇ ಕಂತು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ ಹೆಚ್ಚಿನ ಸಂಸದರು ತಮ್ಮ ಮೊದಲ ವರ್ಷದ ನಿಧಿಯನ್ನೇ ಬಳಸಿಕೊಳ್ಳದಿರುವುದು ಅಚ್ಚರಿ ಹುಟ್ಟಿಸಿದೆ.

ನಮ್ಮ ರಾಜ್ಯದ 28 ಸಂಸದರು ಎಷ್ಟೆಷ್ಟು ಹಣವನ್ನು ಬಳಸಿಕೊಂಡಿದ್ದಾರೆ ಎಂಬ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಮಲ್ಲಿಕಾರ್ಜುನ ಖರ್ಗೆ, ಗುಲ್ಬರ್ಗಾ
ನಾಲ್ಕು ಕೋಟಿ ರೂಪಾಯಿಗಳಲ್ಲಿ ಮೂರು ಕೋಟಿ ರೂಪಾಯಿಗಳು ಬಿಡುಗಡೆಯಾಗಿವೆ. ಕೇಂದ್ರ ಕಾರ್ಮಿಕ ಸಚಿವರೂ ಆಗಿರುವ ಇವರು ಬಳಸಿರುವುದು ಕೇವಲ 38 ಲಕ್ಷ ರೂಪಾಯಿಗಳನ್ನು ಮಾತ್ರ. ಅಂದರೆ 2.62 ಕೋಟಿ ರೂಪಾಯಿಗಳ ಬಳಕೆಗೆ ಖರ್ಗೆಯವರಿಗೆ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ.

ಎಚ್.ಡಿ. ದೇವೇಗೌಡ, ಹಾಸನ
ನಾಲ್ಕು ಕೋಟಿಯಲ್ಲಿ ಬಿಡುಗಡೆಯಾಗಿರುವುದು ಎರಡು ಕೋಟಿ. ಬಳಸಿರುವುದು 96 ಲಕ್ಷ. ಮಾಜಿ ಪ್ರಧಾನಿಗಳ ಖಾತೆಯಲ್ಲಿ ಇನ್ನೂ 1.04 ಕೋಟಿ ರೂಪಾಯಿಗಳು ಬಾಕಿ ಉಳಿದಿವೆ.

ಎಚ್.ಡಿ. ಕುಮಾರಸ್ವಾಮಿ, ಬೆಂಗಳೂರು ಗ್ರಾಮಾಂತರ
ಇವರ ಅನುದಾನ ನಾಲ್ಕು ಕೋಟಿ ರೂಪಾಯಿಗಳಲ್ಲಿ ಒಂದು ಕೋಟಿ ಮಾತ್ರ ಬಿಡುಗಡೆಯಾಗಿದೆ. ಪಾಪ, ಮಾಜಿ ಮುಖ್ಯಮಂತ್ರಿಗಳಿಗೆ ಅದನ್ನು ಬಳಸಬೇಕೆಂದು ಇನ್ನೂ ಗೊತ್ತಾದಂತಿಲ್ಲ. ಒಂದು ಕೋಟಿ ರೂಪಾಯಿಯನ್ನು ಹಾಗೇ ಬಿಟ್ಟಿದ್ದಾರೆ.

ಎಚ್. ವಿಶ್ವನಾಥ್, ಮೈಸೂರು
ನಾಲ್ಕು ಕೋಟಿಯಲ್ಲಿ 3.01 ಕೋಟಿ ರೂಪಾಯಿ ಲಭ್ಯವಿದೆ. 60 ಲಕ್ಷ ರೂಪಾಯಿಯನ್ನು ಬಳಸಿದ್ದಾರೆ. 2.41 ಕೋಟಿ ರೂಪಾಯಿಗಳನ್ನು ವಿಶ್ವನಾಥ್ ಇನ್ನಷ್ಟೇ ಬಳಸಬೇಕಾಗಿದೆ.

ಬಿ.ವೈ. ರಾಘವೇಂದ್ರ, ಶಿವಮೊಗ್ಗ
ನಾಲ್ಕು ಕೋಟಿಯಲ್ಲಿ 3.01 ಕೋಟಿ ರೂಪಾಯಿಗಳು ಲಭ್ಯವಿದೆ. 30 ಲಕ್ಷ ರೂಪಾಯಿಗಳನ್ನು ವಿವಿಧ ಕಾರ್ಯಗಳಿಗೆ ಬಳಸಿದ್ದಾರೆ. ಇನ್ನೂ 2.71 ಕೋಟಿ ರೂಪಾಯಿ ಮುಖ್ಯಮಂತ್ರಿಗಳ ಪುತ್ರನ ಅಣತಿಗಾಗಿ ಕಾಯುತ್ತಿದೆ.

ಧರಂ ಸಿಂಗ್, ಬೀದರ್
ನಾಲ್ಕು ಕೋಟಿಯಲ್ಲಿ ಬಿಡುಗಡೆಯಾಗಿರುವುದು ಕೇವಲ ಒಂದು ಕೋಟಿ ರೂಪಾಯಿ ಮಾತ್ರ. ಆದರೆ ಅದನ್ನೇ ಅವರು ಬಳಸಿಕೊಂಡಿಲ್ಲ. ನಯಾಪೈಸೆ ಬಳಕೆಯಾಗದ ಕಾರಣ ಇರುವ ಒಂದು ಕೋಟಿಯೂ ಬಳಕೆಗಾಗಿ ದಾರಿ ಕಾಯುತ್ತಿದೆ.

ಕೆ.ಎಚ್. ಮುನಿಯಪ್ಪ, ಕೋಲಾರ
ಇವರ ನಾಲ್ಕು ಕೋಟಿಯಲ್ಲಿ ಮೂರು ಕೋಟಿ ರೂಪಾಯಿಗಳು ಬಿಡುಗಡೆಯಾಗಿದೆ. 65 ಲಕ್ಷ ರೂಪಾಯಿಗಳು ಬಳಕೆಯಾಗಿದ್ದರೆ, 2.35 ಕೋಟಿ ರೂಪಾಯಿಗಳು ಬಳಕೆಯಾಗಿಲ್ಲ. ರೈಲ್ವೇ ಸಚಿವರೇ, ನೀವೇ ಹೀಗೆ ಮಾಡಿದರೆ ಉಳಿದ ಸಂಸದರ ಕತೆಯೇನು?

ಡಿ.ಬಿ. ಚಂದ್ರೇಗೌಡ, ಬೆಂಗಳೂರು ಉತ್ತರ
ಇವರಿಗೂ ನಾಲ್ಕು ಕೋಟಿ ರೂಪಾಯಿ ಅನುದಾನವಿದೆ. ಮೂರು ಕೋಟಿ ಬಿಡುಗಡೆಯಾಗಿದೆ, ಖಾತೆಯಲ್ಲಿ 3.01 ಕೋಟಿ ರೂಪಾಯಿಗಳಿವೆ. ಬಳಸಿದ್ದು ಎರಡು ಕೋಟಿ ರೂಪಾಯಿ. ಅಂದರೆ ಮೊದಲ ವರ್ಷದ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿದ್ದಾರೆ. ಖಾತೆಯಲ್ಲಿ ಈ ವರ್ಷದ 1.01 ಕೋಟಿ ರೂಪಾಯಿಗಳಿವೆ.

ಅನಂತ್ ಕುಮಾರ್, ಬೆಂಗಳೂರು ದಕ್ಷಿಣ
ನಾಲ್ಕು ಕೋಟಿ ರೂಪಾಯಿ ಅನುದಾನದಲ್ಲಿ ಮೂರು ಕೋಟಿ ಬಿಡುಗಡೆಯಾಗಿದ್ದು, ಕೇವಲ 57 ಲಕ್ಷ ರೂಪಾಯಿಗಳನ್ನು ಮಾತ್ರ ಬಳಸಿದ್ದಾರೆ. ಖಾತೆಯಲ್ಲಿನ್ನೂ 2.43 ಕೋಟಿ ರೂಪಾಯಿಗಳಿವೆ. ಇನ್ನೂ ಬಳಕೆಯ ಯಾವುದೇ ಯೋಚನೆಯನ್ನು ಅವರು ಮಾಡಿದಂತಿಲ್ಲ.

ಪಿ.ಸಿ. ಗದ್ದಿಗೌಡರ್, ಬಾಗಲಕೋಟೆ
ಇವರ ಪಾಲಿನ ಅನುದಾನ ನಾಲ್ಕು ಕೋಟಿ ರೂಪಾಯಿ. ಇದುವರೆಗೆ ಮೂರು ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಬಡ್ಡಿ ಸೇರಿ 3.21 ಕೋಟಿ ರೂಪಾಯಿ ಲಭ್ಯವಿದೆ. ಅದರಲ್ಲಿ ಅವರು ಬಳಸಿಕೊಂಡಿರುವುದು 95 ಲಕ್ಷ ರೂಪಾಯಿ ಮಾತ್ರ. ಅಂದರೆ ಇನ್ನೂ 2.26 ಕೋಟಿ ರೂಪಾಯಿ ಕೊಳೆಯುತ್ತಾ ಬಿದ್ದಿದೆ.

ಸುರೇಶ್ ಅಂಗಡಿ, ಬೆಳಗಾವಿ
ನಾಲ್ಕು ಕೋಟಿ ಅನುದಾನದಲ್ಲಿ 3.03 ಕೋಟಿ ರೂಪಾಯಿ ಲಭ್ಯವಿದೆ. ಬಳಸಿದ್ದು 95 ಲಕ್ಷ. ಇವರ ಪಾಲಿನಲ್ಲಿ ಈಗಲೂ 2.08 ಕೋಟಿ ರೂಪಾಯಿಗಳು ಲಭ್ಯವಿದೆ. ಗಡಿನಾಡಿನಲ್ಲಿ ಅಭಿವೃದ್ಧಿ ಕಾರ್ಯಗಳು ಇವರ ಕಣ್ಣಿಗೆ ಬಿದ್ದಿಲ್ಲ ಎಂದು ತಿಳಿದು ಕೊಂಡರೆ ತಪ್ಪಾದೀತೋ ಏನೋ?

ಜೆ. ಶಾಂತಾ, ಬಳ್ಳಾರಿ
ಇವರ ಅನುದಾನ ನಾಲ್ಕು ಕೋಟಿ ರೂಪಾಯಿಗಳಲ್ಲಿ 3.02 ಕೋಟಿ ಲಭ್ಯವಿದೆ. ಅದರಲ್ಲಿ ಬಳಸಿಕೊಂಡಿರುವುದು ಕೇವಲ 41 ಲಕ್ಷ ರೂಪಾಯಿ. ಅಂದರೆ ಇನ್ನೂ 2.61 ಲಕ್ಷ ರೂಪಾಯಿಗಳು ಕಾಯುತ್ತಿವೆ. ಗಣಿದಣಿಗಳ ನಾಡಿನಲ್ಲಿ ಅಭಿವೃದ್ಧಿ ಕಾರ್ಯಗಳು ಮುಗಿದಿವೆ ಎಂದುಕೊಳ್ಳೋಣವೇ?

ರಮೇಶ್ ಜಿಗಜಿಣಗಿ, ಬಿಜಾಪುರ
ನಾಲ್ಕು ಕೋಟಿಯಲ್ಲಿ ಮೂರು ಕೋಟಿ ಬಿಡುಗಡೆಯಾಗಿದ್ದು, 3.01 ಕೋಟಿ ಲಭ್ಯವಿದೆ. ಬಳಸಿದ್ದು 21 ಲಕ್ಷ ರೂಪಾಯಿ ಮಾತ್ರ. ಇನ್ನೂ 2.80 ಕೋಟಿ ರೂಪಾಯಿಗಳು ಬಾಕಿ ಇವೆ. ಯಾವಾಗ ಮತ್ತು ಯಾಕಾಗಿ ಬಳಸುತ್ತಾರೆ ಎಂಬುದನ್ನು ಕ್ಷೇತ್ರದ ಜನತೆ ಅವರಲ್ಲೇ ಪ್ರಶ್ನಿಸಬೇಕಿದೆ.

ಆರ್. ಧ್ರುವನಾರಾಯಣ, ಚಾಮರಾಜನಗರ
ನಾಲ್ಕು ಕೋಟಿಯಲ್ಲಿ 3.01 ಕೋಟಿ ಬಿಡುಗಗೆಯಾಗಿದೆ. 87 ಲಕ್ಷವನ್ನು ಬಳಸಿಕೊಂಡಿದ್ದಾರೆ. 2.14 ಕೋಟಿ ಬಾಕಿಯಿದೆ. ಹೇಳಿಕೇಳಿ ಇದು ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರ. ಆದರೂ ನಮ್ಮ ಸಂಸದರಿಗೆ ಬಳಕೆಯ ದಾರಿ ತಿಳಿದಿಲ್ಲ.

ಎಂ. ವೀರಪ್ಪ ಮೊಯ್ಲಿ, ಚಿಕ್ಕಬಳ್ಳಾಪುರ
ನಾಲ್ಕು ಕೋಟಿಯಲ್ಲಿ ಮೂರು ಕೋಟಿ ಲಭ್ಯವಿದೆ. ಸರಿಯಾಗಿ ಒಂದು ಕೋಟಿ ಬಳಸಿದ್ದರೆ, ಇನ್ನೂ ಎರಡು ಕೋಟಿ ರೂಪಾಯಿಗಳು ಬಾಕಿ ಉಳಿದಿವೆ. ಕೇಂದ್ರ ಕಾನೂನು ಸಚಿವರೂ ಆಗಿರುವ ಅವರಿಗೆ ಸಮಯದ ಅಭಾವವೇ ಸಂಸದರ ನಿಧಿ ಬಳಕೆಗೆ ತೊಡಕಾಗಿರಬಹುದೇನೋ?

ರಮೇಶ್ ಕತ್ತಿ, ಚಿಕ್ಕೋಡಿ
ನಾಲ್ಕು ಕೋಟಿಯಲ್ಲಿ 3.02 ಕೋಟಿ ಲಭ್ಯವಿದೆ. ಬಳಸಿರುವುದು 56 ಲಕ್ಷ ರೂಪಾಯಿ. ಇನ್ನೂ 2.46 ಕೋಟಿ ಬಾಕಿಯಿದೆ. ಅಂದರೆ ಶೇ.19ರಷ್ಟು ಮಾತ್ರ ಬಳಸಿದ್ದಾರೆ. ಇಲ್ಲಿ ಮೂಲಭೂತ ಸಮಸ್ಯೆಗಳು ಅತಿ ಹೆಚ್ಚಿವೆ ಎಂಬುದು ಸಂಸದರಿಗೆ ಮನವರಿಕೆಯಾಗಿಲ್ಲವೇ ಎಂದು ಯಾರಾದರೂ ಪ್ರಶ್ನೆ ಕೇಳಬೇಕಾಗಿದೆ.

ಡಿ.ವಿ. ಸದಾನಂದ ಗೌಡ, ಉಡುಪಿ-ಚಿಕ್ಕಮಗಳೂರು
ನಾಲ್ಕು ಕೋಟಿಯಲ್ಲಿ 3.01 ಕೋಟಿ ರೂಪಾಯಿಗಳು ಲಭ್ಯವಿದೆ. ದಕ್ಷಿಣ ಕನ್ನಡದಿಂದ ಉಡುಪಿಗೆ ಹಾರಿರುವ ಇವರು ಈ ಬಾರಿ ಬಳಸಿರುವುದು 57 ಲಕ್ಷ ರೂಪಾಯಿ ಮಾತ್ರ. ಇನ್ನೂ 2.44 ಕೋಟಿ ರೂಪಾಯಿಗಳು ಸದಾ ಸಭೆ-ಸಮಾರಂಭಗಳಲ್ಲಿ ಬ್ಯುಸಿಯಾಗಿರುವ ಗೌಡರಿಗಾಗಿ ಕಾಯುತ್ತಿದೆ.

ಜನಾರ್ದನ ಸ್ವಾಮಿ, ಚಿತ್ರದುರ್ಗ
ನಾಲ್ಕು ಕೋಟಿ ರೂಪಾಯಿಗಳಲ್ಲಿ ಬಿಡುಗಡೆಯಾಗಿರುವುದು ಒಂದು ಕೋಟಿ ಮಾತ್ರ. ಅದರಲ್ಲಿ 32 ಲಕ್ಷ ರೂಪಾಯಿಗಳನ್ನು ವಿವಿಧ ಕಾರ್ಯಗಳಿಗಾಗಿ ಬಳಸಿದ್ದಾರೆ. ಇನ್ನೂ 68 ಲಕ್ಷ ರೂಪಾಯಿ ಬಾಕಿಯಿದೆ.

ಜಿ.ಎಂ. ಸಿದ್ಧೇಶ್ವರ, ದಾವಣಗೆರೆ
ಇವರದ್ದೂ ನಾಲ್ಕು ಕೋಟಿಯಲ್ಲಿ ಕೇವಲ ಒಂದು ಕೋಟಿಯಷ್ಟೇ ಬಿಡುಗಡೆಯಾಗಿದೆ. ಬಡ್ಡಿ ಸೇರಿ 1.01 ಕೋಟಿ ರೂಪಾಯಿಗಳನ್ನು ಬಳಸಬಹುದಾಗಿದೆ. ಆದರೆ ಅವರು ಬಳಸಿರುವುದು ಕೇವಲ ಏಳು ಲಕ್ಷ ರೂಪಾಯಿಗಳನ್ನು ಮಾತ್ರ. 94 ಲಕ್ಷ ರೂಪಾಯಿಗಳು ಸಿದ್ಧೇಶ್ವರರ ಅನುಮತಿಗಾಗಿ ಕಾಯುತ್ತಿದೆ.

ಪ್ರಹ್ಲಾದ್ ಜೋಷಿ, ಧಾರವಾಡ
ನಾಲ್ಕು ಕೋಟಿಯಲ್ಲಿ ಎರಡು ಕೋಟಿ ಬಿಡುಗಡೆಯಾಗಿದೆ. ಕೇವಲ 12 ಲಕ್ಷ ರೂಪಾಯಿಗಳನ್ನು ಬಳಸಿಕೊಂಡಿದ್ದಾರೆ. ಅಂದರೆ 1.88 ಕೋಟಿ ರೂಪಾಯಿಗಳು ಇನ್ನೂ ಬಳಕೆಯಾಗದೆ ಅಲ್ಲೇ ಬಿದ್ದಿದೆ. ಇವರಿಗೆ ಮತ ಹಾಕಿದವರು ಇದನ್ನು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದಾರಲ್ಲವೇ?

ಶಿವಕುಮಾರ ಉದಾಸಿ, ಹಾವೇರಿ
ನಾಲ್ಕು ಕೋಟಿ ರೂಪಾಯಿಗಳಲ್ಲಿ 3.01 ಕೋಟಿ ಲಭ್ಯವಿದೆ. ಬಳಸಿರುವುದು 89 ಲಕ್ಷ ರೂಪಾಯಿಗಳು. ಇನ್ನೂ 2.12 ಕೋಟಿ ರೂಪಾಯಿಗಳು ಬಾಕಿ ಉಳಿದಿವೆ.

ಅನಂತ ಕುಮಾರ್ ಹೆಗ್ಡೆ, ಉತ್ತರ ಕನ್ನಡ
ನಾಲ್ಕು ಕೋಟಿಯಲ್ಲಿ ಮೂರು ಕೋಟಿ ಬಿಡುಗಡೆಯಾಗಿದೆ. ಜನಪ್ರಿಯ ಮತ್ತು ಸುಂದರ ಸಂಸದ ಎಂದು ಹೆಸರು ಮಾಡಿದ್ದ ಇವರು ಬಳಸಿರುವ ಮೊತ್ತ ಕೇವಲ ಮೂರು ಲಕ್ಷ ರೂಪಾಯಿ ಮಾತ್ರ. ಇನ್ನೂ 2.97 ಕೋಟಿ ರೂಪಾಯಿಗಳು ಬಾಕಿ ಉಳಿದಿವೆ. ಯಾವುದೇ ಸಮಸ್ಯೆಗಳು ಇವರ ಕಣ್ಣಿಗೆ ಬಿದ್ದಿಲ್ಲ ಎಂದುಕೊಳ್ಳಬಹುದೇ?

ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ
ನಾಲ್ಕು ಕೋಟಿಯಲ್ಲಿ ಬಿಡುಗಡೆಯಾಗಿರುವುದು ಒಂದು ಕೋಟಿ ಮಾತ್ರ. ಅದನ್ನೇ ಬಳಸಿಕೊಂಡಿಲ್ಲ. ಬಿಡುಗಡೆಯಾಗಿರುವ ಹಣ ಇವರ ಖಾತೆಯಲ್ಲಿ ಕೊಳೆಯುತ್ತಿದೆ. ಕನಿಷ್ಠ ಕುಲಗೆಟ್ಟು ಹೋದ ರಸ್ತೆಗಳೂ ಇವರ ಕಣ್ಣಿಗೆ ಬಿದ್ದಿಲ್ಲವೇ ಎಂದು ಪ್ರಶ್ನಿಸಿದರೆ ತಪ್ಪಾಗಬಹುದೇ?

ಶಿವರಾಮೇಗೌಡ, ಕೊಪ್ಪಳ
ಬಿಡುಗಡೆಯಾಗಿರುವ ಎರಡು ಕೋಟಿಯಲ್ಲಿ ಕೇವಲ ಮೂರು ಲಕ್ಷ ರೂಪಾಯಿಗಳನ್ನು ಮಾತ್ರ ಬಳಸಿ ಜಾಣತನ ಮೆರೆದಿದ್ದಾರೆ. 1.97 ಕೋಟಿ ರೂಪಾಯಿ ಬೇಕೆಂದು ಶಿವರಾಮಗೌಡರಿಗೆ ಇನ್ನೂ ಅನಿಸಿದಂತಿಲ್ಲ.

ಎನ್. ಚೆಲುವರಾಯ ಸ್ವಾಮಿ, ಮಂಡ್ಯ
ಲಭ್ಯವಿರುವ 1.01 ಕೋಟಿ ರೂಪಾಯಿಯಲ್ಲಿ 19 ಲಕ್ಷ ರೂಪಾಯಿಯನ್ನಷ್ಟೇ ಬಳಸಿದ್ದಾರೆ. ಇನ್ನೂ 82 ಲಕ್ಷ ರೂಪಾಯಿಗಳು ಜೆಡಿಎಸ್ ನಾಯಕನಾಗಿರುವ ಇವರ ದಾರಿಯನ್ನು ಕಾಯುತ್ತಿವೆ.

ಎಸ್. ಫಕೀರಪ್ಪ, ರಾಯಚೂರು
ನಾಲ್ಕು ಕೋಟಿಯಲ್ಲಿ ಒಂದು ಕೋಟಿಯಷ್ಟೇ ಬಿಡುಗಡೆಯಾಗಿದೆ. ನಯಾಪೈಸೆ ಬಳಸದೆ ಹಾಗೇ ಉಳಿಸಿದ್ದಾರೆ. ಬಹುಶಃ ರಾಯಚೂರಿನಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳು ಮುಗಿದು ಹೋಗಿವೆ ಎಂದುಕೊಳ್ಳೋಣ.

ಜಿ.ಎಸ್. ಬಸವರಾಜ್, ತುಮಕೂರು
ನಾಲ್ಕು ಕೋಟಿಯಲ್ಲಿ ಮೂರು ಕೋಟಿ ಬಿಡುಗಡೆಯಾಗಿದೆ. 66 ಲಕ್ಷ ಬಳಕೆ ಮಾಡಿದ್ದಾರೆ. 2.35 ಕೋಟಿ ರೂಪಾಯಿಗಳು ಇನ್ನೂ ಬಳಕೆಯಾಗಿಲ್ಲ. ಯಾಕೋ?

ಪಿ.ಸಿ. ಮೋಹನ್, ಬೆಂಗಳೂರು ಸೆಂಟ್ರಲ್
ನಾಲ್ಕರಲ್ಲಿ ಒಂದು ಕೋಟಿ ರೂಪಾಯಿಯಷ್ಟೇ ಬಿಡುಗಡೆಯಾಗಿದೆ. ಒಂದೇ ಒಂದು ರೂಪಾಯಿಯನ್ನೂ ಅವರು ಬಳಸಿಲ್ಲ. ಪೂರ್ತಿ ಒಂದು ಕೋಟಿ ರೂಪಾಯಿ ಖಾತೆಯಲ್ಲೇ ಉಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ