ಮಹತ್ವದ ರೈಲು ಸುರಕ್ಷತಾ ವೈಫಲ್ಯ ಪ್ರಸಂಗವೊಂದು ಇಂದು ಮುಂಜಾನೆ ಬಿಹಾರದಲ್ಲಿ ನಡೆದಿದೆ. ಸುಮಾರು 50ಕ್ಕೂ ಹೆಚ್ಚು ಶಸ್ತ್ರಸಜ್ಜಿತ ದರೋಡೆಕೋರರು ದೆಹಲಿಗೆ ಬರುತ್ತಿದ್ದ ರೈಲೊಂದರ ಮೇಲೆ ದಾಳಿ ಮಾಡಿ, ಪ್ರಯಾಣಿಕರನ್ನು ಒತ್ತೆಯಾಳಾಗಿಟ್ಟುಕೊಂಡು ಲೂಟಿ ಮಾಡಿದ್ದಾರೆ.
ಹೌರಾ-ದೆಹಲಿ ಮಾರ್ಗದ ಲಾಲ್ ಕ್ವೈಲಾ ಎಕ್ಸ್‌ಪ್ರೆಸ್ ರೈಲು ದೆಹಲಿಗೆ ಬರುತ್ತಿದ್ದ ಸಂದರ್ಭದಲ್ಲಿ ಬಿಹಾರದ ಲಖಿಸರಾಯ್ ಜಿಲ್ಲೆಯ ಬಾನ್ಸಿಪುರ್ ಮತ್ತು ಬಾಲುವಿ ರೈಲು ನಿಲ್ದಾಣಗಳ ನಡುವೆ ದರೋಡೆ ಘಟನೆ ನಡೆದಿದೆ.
ಕೃತ್ಯವನ್ನು ಪ್ರತಿಭಟಿಸಿದ ಪ್ರಯಾಣಿಕರಿಗೆ ದರೋಡೆಕೋರರು ಥಳಿಸಿದ್ದಾರೆ. ಇದರಿಂದಾಗಿ ಕನಿಷ್ಟ 25 ಪ್ರಯಾಣಿಕರು ಗಾಯಗೊಂಡಿದ್ದಾರೆ. ಓರ್ವ ಪ್ರಯಾಣಿಕನ ಮೇಲೆ ಗುಂಡು ಕೂಡ ಹಾರಿಸಲಾಗಿದೆ. ರೈಲ್ವೇ ರಕ್ಷಣಾ ದಳದ (ಆರ್‌ಪಿಎಫ್) ಓರ್ವ ಸಿಬ್ಬಂದಿಯ ಮೇಲೂ ಲೂಟಿಕೋರರು ಗುಂಡು ಹಾರಿಸಿದ್ದಾರೆ.
ರೈಲಿಗೆ ದಾಳಿ ನಡೆಸಿದ ದರೋಡೆಕೋರರು, ಕಿಟಕಿ ಗಾಜುಗಳನ್ನು ಧ್ವಂಸಗೊಳಿಸಿದರು. ಬಳಿಕ ನಮಗೆ ಮನಬಂದಂತೆ ಥಳಿಸಿ ಅಮೂಲ್ಯ ವಸ್ತುಗಳನ್ನು ದೋಚಿದರು ಎಂದು ಪ್ರಯಾಣಿಕರಲ್ಲೊಬ್ಬರು ಹೇಳಿಕೊಂಡಿದ್ದಾರೆ.
ರೈಲು ಕಿಯೂಲ್ ನಿಲ್ದಾಣ ತಲುಪುತ್ತಿದ್ದಂತೆ ಆಕ್ರೋಶಿತ ಪ್ರಯಾಣಿಕರು ಅಲ್ಲಿನ ಸ್ಟೇಷನ್ ಮಾಸ್ಟರ್ ಕಚೇರಿಗೆ ತೆರಳಿ ದಾಂಧಲೆ ಎಬ್ಬಿಸಿದರು. ರೈಲನ್ನು ರಕ್ಷಿಸಲು ರೈಲಿನಲ್ಲಿ ರೈಲ್ವೇ ಪೊಲೀಸ್ ಆಗಲೀ ಅಥವಾ ರೈಲ್ವೇ ರಕ್ಷಣಾ ದಳದ ಯಾವುದೇ ಸಿಬ್ಬಂದಿಗಳಾಗಲೀ ಇರಲಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
ಆದರೆ ಪ್ರಯಾಣಿಕರು ಮಾಡಿರುವ ಆರೋಪವನ್ನು ಬಿಹಾರ ಪೊಲೀಸರು ತಳ್ಳಿ ಹಾಕಿದ್ದಾರೆ. ಬಿಹಾರ ಪೊಲೀಸ್ ಇಲಾಖೆಯ ಒಂದು ರಕ್ಷಣಾ ಪಡೆಯು ರೈಲಿನಲ್ಲಿತ್ತು. ಆದರೆ ಅವರು ಶಸ್ತ್ರರಹಿತರಾಗಿದ್ದರು ಎಂದು ಸ್ಪಷ್ಟನೆ ನೀಡಲಾಗಿದೆ.
ದರೋಡೆ ಬಗ್ಗೆ ಪೊಲೀಸರು ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದಾರೆ. ಅವರ ಪ್ರಕಾರ ದಾಳಿ ಮಾಡಿದ್ದು ಕೇವಲ ನಾಲ್ಕು ಮಂದಿ ಮಾತ್ರ.
ನಾಲ್ಕು ದರೋಡೆಕೋರರು ರೈಲಿನೊಳಗೆ ದಾಳಿ ಮಾಡಿದ್ದರು. ಆದರೆ ಪ್ರಯಾಣಿಕರು ಮತ್ತು ಸಿಬ್ಬಂದಿಗಳು ದರೋಡೆಕೋರರೆದುರು ಮೇಲುಗೈ ಸಾಧಿಸಿದ್ದರು. ನಾಲ್ವರಲ್ಲಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಇಬ್ಬರು ಪರಾರಿಯಾದರು. ಪರಾರಿಯಾದ ಲೂಟಿಕೋರರು ತಮ್ಮ ಜತೆಗಾರರಿಗೆ ಎಚ್ಚರಿಕೆ ನೀಡಿದ ನಂತರ ಮುಂದಿನ ನಿಲ್ದಾಣದಲ್ಲಿ ಲೂಟಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.