ಕುಂಭದ್ರೋಣ ಮಳೆಯಿಂದಾಗಿ ಕಾಣಿಸಿಕೊಂಡ ದಿಢೀರ್ ಪ್ರವಾಹದಿಂದಾಗಿ ಲಡಾಖ್ ಪ್ರಾಂತ್ಯದ ಲೇಹ್ ತತ್ತರಗೊಂಡಿದೆ. ಪರಿಣಾಮ 65ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ ಎಂದು ವರದಿಗಳು ಹೇಳಿವೆ.
ನಿನ್ನೆ ಅಪರಾಹ್ನ ಇದ್ದಕ್ಕಿದ್ದಂತೆ ಸುರಿಯಲಾರಂಭಿಸಿದ ಬಿರುಗಾಳಿ ಸಹಿತ ಭಾರೀ ಆಲಿಕಲ್ಲು ಮಳೆಯಿಂದ ಉಂಟಾದ ಹಠಾತ್ ಪ್ರವಾಹವು ಇಲ್ಲಿನ ಸುಮಾರು ಐದು ಗ್ರಾಮಗಳ ಮೇಲೆ ಪ್ರತಾಪ ತೋರಿಸಿದೆ. ಚೊಗ್ಲುಮ್ಸಾರ್, ಹಳೆ ಲೇಹ್ ನಗರ ಮತ್ತು ಶಾಪೂಗಳಲ್ಲೂ ಭಾರೀ ಹಾನಿಯಾಗಿದೆ. ಇಲ್ಲಿನ ಪ್ರಮುಖ ಬಸ್ ನಿಲ್ದಾಣವೂ ಧ್ವಂಸವಾಗಿದೆ.
ರಸ್ತೆ ಮತ್ತು ರೈಲು ಸಂಪರ್ಕಗಳು ಸೇರಿದಂತೆ ಇತರೆಲ್ಲಾ ಮೂಲಭೂತ ಸೌಲಭ್ಯಗಳು ಈ ಪ್ರದೇಶದಲ್ಲಿ ಸಂಪೂರ್ಣ ಸ್ಥಗಿತಗೊಂಡಿವೆ. ಆತಂಕಕ್ಕೀಡಾದ ಜನತೆ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ. ಮನೆಗಳಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ.
ನೆರೆ ಪೀಡಿತ ಪ್ರದೇಶಗಳಿಂದ 59 ಕಳೇಬರಗಳನ್ನು ಹೊರತೆಗೆಯಲಾಗಿದೆ ಎಂದು ಜಮ್ಮು-ಕಾಶ್ಮೀರ ಪೊಲೀಸ್ ಮಹಾ ನಿರ್ದೇಶಕ ಕುಲ್ದೀಪ್ ಖೋಡಾ ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಮೂವರು ಮಿಲಿಟರಿ ಸಿಬ್ಬಂದಿಗಳೂ ಸೇರಿದ್ದಾರೆ.
ಹಠಾತ್ ನೆರೆ ಕಾಣಿಸಿಕೊಂಡ ಲೇಹ್ ನಗರದಲ್ಲಿ ಮಿಲಿಟರಿ, ಅರೆ ಮಿಲಿಟರಿ ಮತ್ತು ರಾಜ್ಯ ಪೊಲೀಸರ ತುಕುಡಿಗಳು ವ್ಯಾಪಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಸುಮಾರು 50ರಷ್ಟು ಕೇಂದ್ರೀಯ ಮೀಸಲು ಪೊಲೀಸ್ ಸಿಬ್ಬಂದಿಗಳನ್ನು ಕೂಡ ಪ್ರವಾಹದಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ಈ ಪ್ರಾಂತ್ಯದ ಎಲ್ಲಾ ಸೇವೆಗಳೂ ರದ್ದುಗೊಂಡಿವೆ. ಬಿಎಸ್ಎನ್ಎಲ್ ನೆಟ್‌ವರ್ಕ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, ಲೇಹ್ ವಿಮಾನ ನಿಲ್ದಾಣದ ರನ್‌ವೇಗೂ ಧಕ್ಕೆಯಾಗಿದೆ. ಹಾಗಾಗಿ ದೇಶದ ಇತರೆಡೆಗಳಿಂದ ಬರುವ ಎಲ್ಲಾ ವಿಮಾನಗಳನ್ನೂ ರದ್ದುಪಡಿಸಲಾಗಿದೆ.
ಜಿಲ್ಲಾ ಆಸ್ಪತ್ರೆ, ಕೇಂದ್ರ ಗೃಹಸಚಿವಾಲಯಕ್ಕೆ ಸೇರಿದ ಎರಡು ವಸತಿ ಕಚೇರಿಗಳ ಕಟ್ಟಡಗಳಿಗೂ ಹಾನಿಯಾಗಿದೆ.
ಶ್ರೀನಗರದಿಂದ 424 ಕಿಲೋ ಮೀಟರ್ ದೂರದಲ್ಲಿರುವ ಲೇಹ್ ಸಮುದ್ರ ಮಟ್ಟದಿಂದ 11,500 ಅಡಿ ಎತ್ತರದಲ್ಲಿದೆ.