ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೋಕಸಭೆಯಲ್ಲಿ ಮೂತ್ರದ ಪ್ರಶ್ನೆಯೆತ್ತಿದ ಲಾಲೂ ಪ್ರಸಾದ್! (Urine research | RJD | Lalu Prasad | Lok Sabha)
Bookmark and Share Feedback Print
 
ಸದಾ ಚರ್ಚೆ-ಕೋಲಾಹಲಗಳಿಂದ ಬಿಸಿಯೇರಿದ ವಾತಾವರಣದಲ್ಲಿರುವ ಜನಪ್ರತಿನಿಧಿಗಳಿಗೆ ತನ್ನ ಮಾತಿನ ವಿಶಿಷ್ಟ ಶೈಲಿ ಮತ್ತು ಹಾಸ್ಯ ಚಟಾಕಿಗಳ ಮೂಲಕ ಲಾಲೂ ಪ್ರಸಾದ್ ಯಾದವ್ ಉಲ್ಲಾಸ ಮೂಡಿಸುತ್ತಿರುವುದು ಹೊಸತೇನಲ್ಲ. ಅದರಂತೆ ಇಂದು ಕೂಡ ಅವರು ಮೂತ್ರದ ಕುರಿತು ಸಂಶೋಧನೆ ನಡೆಯುತ್ತಿದೆಯೇ ಎಂದು ಹಾಸ್ಯಪ್ರಜ್ಞೆಯ 'ಗಂಭೀರ' ಪ್ರಶ್ನೆಯನ್ನು ಕೇಳಿ ಸದನವನ್ನು ನಗೆಗಡಲಿನಲ್ಲಿ ತೇಲಿಸಿದರು.

ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆ ಲಾಲೂ ತನ್ನ ಪ್ರಶ್ನೆಯನ್ನು ಮುಂದಿಟ್ಟರು.
PTI

ತನ್ನದೇ ವಿನೋದದ ಶೈಲಿಯಲ್ಲಿ ಮಾತು ಆರಂಭಿಸಿದ ಮಾಜಿ ರೈಲ್ವೇ ಸಚಿವರು, ಹಲವು ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿರುವ ಮಾನವನ ಮೂತ್ರ ಮತ್ತು ಗೋಮೂತ್ರದ ಕುರಿತು ಸರಕಾರ ಯಾವುದಾದರೂ ಸಂಶೋಧನೆಯನ್ನು ನಡೆಸುತ್ತಿದೆಯೇ? ಇದರಿಂದಾಗುವ ಲಾಭಗಳ ಕುರಿತು ಅಧ್ಯಯನ ನಡೆಸಲು ಆಸಕ್ತಿಯಿದೆಯೇ? ಇದ್ದರೆ ಈ ಕುರಿತು ಪೇಟೆಂಟ್ ಪಡೆಯಲು ಸರಕಾರ ಯತ್ನಿಸಿದೆಯೇ ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಜನತಾದಳದ ಮುಖಂಡನ ಅಪರೂಪದ ಪ್ರಶ್ನೆಯಿಂದ ಸದಸ್ಯರೆಲ್ಲ ಬಾಯಿತುಂಬಾ ನಕ್ಕರು. ಆಗ ಉತ್ತರಿಸಿದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಶ್ರೀಕಾಂತ್ ಜೇನಾ, ಲಾಲೂ ಪ್ರಸಾದ್ ಅವರು ಎತ್ತಿರುವ ಪ್ರಶ್ನೆ ಸಮಂಜಸವಾದದ್ದು. ಈ ಕುರಿತು ಪರಿಶೀಲನೆ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಲಾಲೂ, ಮೂತ್ರದ ಕುರಿತು ಅಮೆರಿಕಾದಲ್ಲೇ ಭಾರೀ ಚರ್ಚೆಗಳು ನಡೆಯುತ್ತಿವೆ. ಸ್ವಮೂತ್ರ ಸೇವನೆಯಿಂದ ದೈಹಿಕ ಅನಾರೋಗ್ಯದ ಸಾಧ್ಯತೆ ಕಡಿಮೆ ಎಂದೂ ಹೇಳಲಾಗುತ್ತಿದೆ. ಈ ಕುರಿತು ಹೊರದೇಶಗಳಲ್ಲಿ ಚರ್ಚೆಗಳು, ಸಂಶೋಧನೆಗಳು ನಡೆಯುತ್ತಿವೆ ಎಂದರು.

ಹಾಗಾಗಿ ಸ್ವಮೂತ್ರ ಅಥವಾ ಗೋಮೂತ್ರವನ್ನು ಔಷಧಿಯೆಂದು ಪರಿಗಣಿಸಿ ಸೇವಿಸುವ ಕುರಿತು ಯಾವುದಾದರೂ ಸಂಶೋಧನೆ ನಡೆದಿದೆಯೇ ಎಂದು ನಾನು ಪ್ರಶ್ನಿಸುತ್ತಿದ್ದೇನೆ. ಅಲ್ಲದೆ ಇದಕ್ಕೆ ಪೇಟೆಂಟ್ ಕೂಡ ಪಡೆಯುವ ಅಗತ್ಯವಿದೆ. ಈ ಕುರಿತು ಸರಕಾರ ಗಮನ ಹರಿಸಿದೆಯೇ ಎಂಬುದನ್ನು ನಾನು ತಿಳಿದುಕೊಳ್ಳಲು ಬಯಸುತ್ತಿದ್ದೇನೆ ಎಂದು ಲಾಲೂ ಕೇಳಿದರು.

ಈ ಕುರಿತು ಸಂಶೋಧನೆಗಳು ನಡೆಯುವ ಅಗತ್ಯವಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಮೂತ್ರದ ಬಳಕೆಯ ಕುರಿತು ಚಿಂತನೆ ನಡೆಸಬೇಕಾಗಿದೆ ಎಂದು ಸದನದಲ್ಲಿ ಚರ್ಚೆಗಳು ನಡೆಯುತ್ತಿದ್ದಾಗ ಮತ್ತೆ ಪ್ರತಿಕ್ರಿಯಿಸಿದ ಲಾಲೂ, ಚಿಕಿತ್ಸೆಯ ಭಾಗವಾಗಿ ಸಾಕಷ್ಟು ಮಂದಿ ತಮ್ಮದೇ ಮೂತ್ರವನ್ನು ದಿನಾ ಕುಡಿಯುತ್ತಾರೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ