ಬಿಜೆಪಿಯ ಒಂದು ಕಾಲದ 'ಬೆಂಕಿಯ ಚೆಂಡು' ಉಮಾ ಭಾರತಿ ತವರಿಗೆ ಮರಳುತ್ತಾರೆ ಎಂಬ ಸುದ್ದಿಗಳು ಹಲವು ಸಮಯದಿಂದ ಹರಿದಾಡುತ್ತಿವೆ. ಆದರೆ ಇನ್ನೂ ಈ ಕುರಿತು ಪಕ್ಷದ ಕೇಂದ್ರೀಯ ನಾಯಕರು ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಇದರ ಹಿಂದಿರುವ ಕಾರಣ ಪಕ್ಷದೊಳಗಿನ ವಿರೋಧ. ಸ್ವತಃ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡ ಉಮಾ ಮರುಸೇರ್ಪಡೆಯನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಹೇಳಲಾಗಿದೆ.
ಕೆಲವರು ಈಗಾಗಲೇ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ. ಇದರಿಂದ ಮುಜುಗರಕ್ಕೊಳಗಾಗಿರುವ ಬಿಜೆಪಿ ನಾಯಕರು, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯ ಪುನರಾಗಮನದ ಕುರಿತು ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ಕೆಳ ಹಂತದ ಮುಖಂಡರಿಗೆ ಸೂಚನೆ ನೀಡಿದ್ದಾರೆ.
ಉಮಾ ಭಾರತಿಯವರನ್ನು ಪಕ್ಷಕ್ಕೆ ಮರಳಿ ಸೇರಿಸಿಕೊಳ್ಳುವ ನಿರ್ಧಾರ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಹಿರಿಯ ನಾಯಕರಿಗೆ ಬಿಟ್ಟದ್ದು. ಇದರಲ್ಲಿ ನನ್ನ ಪಾತ್ರ ಏನಿಲ್ಲ ಎಂದು ಈ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಮಧ್ಯಪ್ರದೇಶದ ಮತ್ತೊಬ್ಬ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಹಾಗೂ ಉಮಾ ಭಾರತಿ ಆಪ್ತ ಕೈಲಾಸ್ ಜೋಷಿ ಹೇಳಿದ್ದಾರೆ.
ಉಮಾ ಭಾರತಿ ಪಕ್ಷಕ್ಕೆ ಮರಳಬೇಕೆಂದು ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಹಿರಿಯ ಸಚಿವರಾದ ಬಾಬುಲಾಲ್ ಗೌರ್ ಮತ್ತು ಕೈಲಾಸ್ ವಿಜಯವರ್ಗಿಯಾ ಅವರನ್ನು ಬಿಜೆಪಿ ಹಿರಿಯ ನಾಯಕರು ತರಾಟೆಗೆ ತೆಗೆದುಕೊಂಡ ನಂತರ ಇದೀಗ ರಾಜ್ಯದ ಯಾವುದೇ ಮುಖಂಡರು ಈ ಬಗ್ಗೆ ಮಾತನಾಡಲು ಮುಂದೆ ಬರುತ್ತಿಲ್ಲ.
ಈ ಬಗ್ಗೆ ಸ್ವತಃ ಉಮಾ ಭಾರತಿಯವರನ್ನೇ ಪ್ರಶ್ನಿಸಲು ಮುಂದಾದಾಗ, ತನ್ನ ಆಪ್ತ ಸಂಬಂಧಿಯೊಬ್ಬರ ಶ್ರದ್ಧಾಂಜಲಿ ಕಾರ್ಯಕ್ರಮ ಮುಂದಿನ ತಿಂಗಳು ನಡೆಯಲಿದೆ. ಬಳಿಕವಷ್ಟೇ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.
ಅವರ ಆಪ್ತರ ಪ್ರಕಾರ ಬಿಜೆಪಿಗೆ ಮರಳುವುದು ಬಹುತೇಕ ಖಚಿತ. ಈ ಬಗ್ಗೆ ಯಾವುದೇ ಸಂಶಯಗಳಿಲ್ಲ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ಒಂದಷ್ಟು ಸಮಯ ಬೇಕಾಗಬಹುದು ಮತ್ತು ಇದು ಆರೆಸ್ಸೆಸ್ ನಿರ್ಧರಿಸಿದಂತೆ ನಡೆಯುತ್ತದೆ.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೆಸ್ಸೆಸ್ ಮಧ್ಯಭಾರತ ಪ್ರಾಂತ್ಯದ ಮುಖ್ಯಸ್ಥ ಶಶಿಬಾಯ್ ಸೇಠ್ ಮತ್ತು ಮಾಲ್ವಾ ಪ್ರಾಂತ್ಯದ ಮುಖ್ಯಸ್ಥ ಕೃಷ್ಣ ಕುಮಾರ್ ಆಸ್ಥಾನ್, ಇದು ಉನ್ನತ ಮಟ್ಟದ ವಿಚಾರವಾಗಿದ್ದು, ಉಮಾ ಭಾರತಿ ಬಿಜೆಪಿಗೆ ಮರಳುವಿಕೆ ವಿಚಾರದಲ್ಲಿ ನಮ್ಮ ಪಾತ್ರವೇನಿಲ್ಲ ಎಂದಿದ್ದಾರೆ.
ಮೂಲಗಳ ಪ್ರಕಾರ ಮಧ್ಯಪ್ರದೇಶದ ಬಿಜೆಪಿ ನಾಯಕರು ಮತ್ತು ಸಚಿವರು ಸೇರಿದಂತೆ ಹೆಚ್ಚಿನವರು ಉಮಾ ಭಾರತಿ ಪುನರ್ ಸೇರ್ಪಡೆ ಪರವಾಗಿದ್ದಾರೆ. ಆದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತು ಸಂಸದ-ಬಿಜೆಪಿ ರಾಜ್ಯಾಧ್ಯಕ್ಷ ಪ್ರಭಾತ್ ಝಾ ಸೇರಿದಂತೆ ಕೆಲವು ನಾಯಕರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ.
ಹಾಗಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಉಮಾ ಭಾರತಿಯವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಕೇಸರಿ ಪಕ್ಷದ ಮೂಲಗಳು ಹೇಳಿವೆ.