ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ಗಾಂಧಿಯನ್ನು 'ಮಾಟಗಾತಿ'ಯೆಂದಿದೆ ಬಿಜೆಪಿ (BJP | Congress | Sonia Gandhi | Deep Kamal)
Bookmark and Share Feedback Print
 
ಬೆಲೆಯೇರಿಕೆ ಕುರಿತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನೇ ಹೋಲುವ ವ್ಯಂಗ್ಯಚಿತ್ರವನ್ನು ತನ್ನ ಮಾಸಿಕ 'ದೀಪ್ ಕಮಲ್'ನಲ್ಲಿ ಪ್ರಕಟಿಸಿರುವ ಬಿಜೆಪಿ ಮತ್ತೊಮ್ಮೆ ವಿವಾದಕ್ಕೆ ಆಹಾರವಾಗಿದೆ. ಇದನ್ನು ತಳ್ಳಿ ಹಾಕಿರುವ ಕೇಸರಿ ಪಕ್ಷ, ಕಾರ್ಟೂನ್‌ನಲ್ಲಿರುವುದು ಸೋನಿಯಾ ಅಲ್ಲ ಎಂದು ಸ್ಪಷ್ಟಪಡಿಸಿದೆ.

ಮಾಸಿಕದ ಮುಖಪುಟದಲ್ಲಿ ಬೆಲೆಯೇರಿಕೆ ಕುರಿತು ಪ್ರಕಟಿಸಲಾಗಿರುವ ಈ ವ್ಯಂಗ್ಯಚಿತ್ರದ ಹಿನ್ನೆಲೆಯಲ್ಲಿ ಸೋನಿಯಾ ಗಾಂಧಿಯನ್ನು ಹೋಲುವ 'ಮಾಟಗಾತಿ'ಯ ಚಿತ್ರವಿದೆ. ಸೋನಿಯಾ ಎಂದು ಹೇಳಲಾಗಿರುವ ಕಾರ್ಟೂನಿನ ಹಣೆಯ ಮೇಲೆ ಕಾಂಗ್ರೆಸ್ ಚಿಹ್ನೆಯನ್ನು ಚಿತ್ರಿಸಲಾಗಿದೆ.
PR

ಜತೆಗೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಹೋಲುವ ಚಿತ್ರವೂ ಇದೆ. 'ನಾನು ನಿಮ್ಮ ಗುಲಾಮ. ನಿಮ್ಮ ನೆಚ್ಚಿನ ಆಹಾರವಾದ ಬಡಪಾಯಿಯ ದೇಹವನ್ನು ಹಿಂಡಿದ ಎಣ್ಣೆಯನ್ನು ನೀಡುತ್ತಿದ್ದೇನೆ..' ಎಂದು ಸಿಂಗ್ ಹೇಳುವಂತೆ ಇಲ್ಲಿ ಚಿತ್ರಿಸಲಾಗಿದೆ.

'ನಾವು ಸಾಕಿದ ಕೆಲವು ಮಾಧ್ಯಮಗಳು ನಮ್ಮ ಎದುರಾಳಿಗಳನ್ನು ತುಳಿಯುತ್ತಾ, ನಮ್ಮನ್ನು ಮತ್ತೆ ರಕ್ಷಿಸಲಿವೆ..' ಎಂದು ಎನ್‌ಸಿಪಿ ನಾಯಕ ಹಾಗೂ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಹೇಳುತ್ತಿರುವ ವ್ಯಂಗ್ಯಚಿತ್ರವನ್ನೂ ಬಿಡಿಸಲಾಗಿದೆ.

ಪೂರ್ಣಪುಟದ ಕಲರ್ ಕಾರ್ಟೂನ್‌ನಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಮತ್ತು ಜನತೆಯನ್ನು ಕೂಡ ಬಿಂಬಿಸಲಾಗಿದೆ. ಛತ್ತೀಸ್‌ಗಢದ ಈ ಪತ್ರಿಕೆ ಮಾರುಕಟ್ಟೆಗೆ ಬರುತ್ತಿದ್ದಂತೆ ಭಾರೀ ಪ್ರಶಂಸೆ-ಟೀಕೆಗಳು ವ್ಯಕ್ತವಾಗುತ್ತಿವೆ.

ಮಾಜಿ ಪತ್ರಕರ್ತ ಹಾಗೂ ಛತ್ತೀಸ್‌ಗಢ ವಸತಿ ಮಂಡಳಿಯ ಅಧ್ಯಕ್ಷರಾಗಿರುವ ಸುಭಾಷ್ ರಾವ್ 'ದೀಪ್ ಕಮಲ್' ಮಾಸಿಕದ ಸಂಪಾದಕ. ಇನ್ನೇನು ಬಿಡುಗಡೆಯಾಗಲಿರುವ ಅಮೀರ್ ಖಾನ್ ಅವರ 'ಪೀಪ್ಲಿ ಲೈವ್' ಚಿತ್ರದ ಹಾಡೊಂದರ ಸಾಹಿತ್ಯವನ್ನು ಬಳಸಿ ಸಂಪಾದಕೀಯದಲ್ಲಿ 'ಮಾಟಗಾತಿ'ಯನ್ನು ಬಣ್ಣಿಸಿರುವ ಅವರು, ಆಕೆ ತನ್ನ ಮಕ್ಕಳನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ವಿವರಣೆ ನೀಡಿದ್ದಾರೆ.

ಕಾಂಗ್ರೆಸ್ ತೀವ್ರ ವಾಗ್ದಾಳಿ...
ಮಾಸಿಕದಲ್ಲಿ ಸೋನಿಯಾ ಗಾಂಧಿ ಹೋಲುವ ವ್ಯಂಗ್ಯಚಿತ್ರ ಪ್ರಕಟ ಮಾಡಿರುವುದಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಪಕ್ಷವು ತನ್ನ ಸಭ್ಯತನದ ಮಿತಿಯನ್ನು ಮೀರಿದೆ ಎಂದು ಹೇಳಿದೆ.

ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಸಭ್ಯತೆಯ ಮಿತಿಯನ್ನು ದಾಟುತ್ತಿವೆ ಎಂದು ನಾವು ಯಾವತ್ತೂ ಹೇಳುತ್ತಾ ಬಂದಿದ್ದೇವೆ. ಬೆಲೆಯೇರಿಕೆ ಕುರಿತು ಸರಕಾರವನ್ನು ಟೀಕಿಸುವುದಿದ್ದರೆ, ನಿಮಗೆ ಸ್ವಾಗತವಿದೆ. ಆದರೆ ವೈಯಕ್ತಿಕವಾಗಿ ದೂಷಿಸುವುದು ಅಪಮಾನಕಾರಿ. ಬೆಲೆಯೇರಿಕೆಗಿಂತಲೂ ಹೆಚ್ಚಾಗಿ ರಾಜಕೀಯ ಮಾಡುವುದರಲ್ಲೇ ಅವರಿಗೆ ಹೆಚ್ಚು ಆಸಕ್ತಿಯಿದೆ ಎಂಬುದನ್ನು ಇದು ತೋರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಟೀಕಿಸಿದ್ದಾರೆ.

ಸೋನಿಯಾರನ್ನು ಮಾಟಗಾತಿಯಂತೆ ಚಿತ್ರಿಸಿರುವುದು ಹೌದಾದರೆ, ಸರಿಯಲ್ಲ. ಆಕೆ ಕೇವಲ ಒಬ್ಬ ರಾಜಕೀಯ ನಾಯಕಿ ಮಾತ್ರವಲ್ಲ, ಓರ್ವ ಮಹಿಳೆ ಕೂಡ. ಹಾಗಾಗಿ ಈ ರೀತಿಯಲ್ಲಿ ಅವರನ್ನು ಬಿಂಬಿಸುವುದು ನೈತಿಕವಾಗಿ ಸರಿಯಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಮೋಹನ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ವ್ಯಂಗ್ಯಚಿತ್ರವನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ತೀವ್ರ ಅಪಮಾನಕಾರಿ ನಡೆಯಾಗಿದ್ದು, ಕಾನೂನು ಕ್ರಮ ಕೈಗೊಳ್ಳುವ ಕುರಿತು ಪಕ್ಷ ಯೋಚಿಸುತ್ತಿದೆ ಎಂದಿದ್ದಾರೆ.

ಅದು ಸೋನಿಯಾ ಗಾಂಧಿ ಅಲ್ಲ...
ಹೀಗೆಂದು ಪ್ರತಿಕ್ರಿಯೆ ನೀಡಿರುವುದು ಬಿಜೆಪಿ. ಪತ್ರಿಕೆಯ ಮುಖಪುಟದಲ್ಲಿ ಚಿತ್ರಿಸಲಾಗಿರುವುದು ಸೋನಿಯಾ ಗಾಂಧಿಯನ್ನಲ್ಲ, ಹಾಗೆಂದು ನೀವೆಲ್ಲ ತಿಳಿದುಕೊಂಡರೆ ಅದು ನಮ್ಮ ತಪ್ಪಲ್ಲ ಎಂದು ಕೇಸರಿ ಪಕ್ಷ ಸ್ಪಷ್ಟನೆ ನೀಡಿದೆ.

ಎಲ್ಲಾ ಕಡೆ ಸೋನಿಯಾ ಗಾಂಧಿಯನ್ನೇ ಕಾಣುತ್ತಿರುವುದು ಕಾಂಗ್ರೆಸ್ ಸಮಸ್ಯೆ. ನಿಯತಕಾಲಿಕದಲ್ಲಿ ಸೋನಿಯಾ ಗಾಂಧಿಯವರನ್ನು ಮಾಟಗಾತಿಯಂತೆ ಬಿಂಬಿಸಲು ನಾವು ಯತ್ನಿಸಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ.

ನಾವು ಬೆಲೆಯೇರಿಕೆ ಕುರಿತು ಮಾತನಾಡಿದರೆ, ಅದನ್ನು ಕಾಂಗ್ರೆಸ್ಸಿಗರು ಸೋನಿಯಾ ವಿರುದ್ಧದ ದಾಳಿ ಎಂದು ಪರಿಗಣಿಸುತ್ತಾರೆ. ನಾವು ಭಯೋತ್ಪಾದನೆ ವಿರುದ್ಧ ಮಾತನಾಡಿದರೆ, ಅದನ್ನು ರಾಹುಲ್ ಗಾಂಧಿ ವಿರುದ್ಧ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತದೆ. ನಾವು ನಕ್ಸಲ್‌ವಾದವನ್ನು ವಿರೋಧಿಸಿದರೆ, ಅದು ಕಾಂಗ್ರೆಸ್ ವಿರುದ್ಧದ ದಾಳಿ ಎಂದು ಹೇಳಲಾಗುತ್ತದೆ. ಈ ಮನೋಭಾವದಿಂದ ಹೊರ ಬರಲು ಅದಕ್ಕೆ ಇನ್ನೂ ಸಾಧ್ಯವಾಗಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ