ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ನಾಟಕದಲ್ಲೂ ಪಾದ್ರಿಗಳಿಂದ ಮಕ್ಕಳಿಗೆ ಲೈಂಗಿಕ ಕಿರುಕುಳ (Pastors trafficking | church | Karnataka | NCPCR)
Bookmark and Share Feedback Print
 
ಚರ್ಚುಗಳು ಮತ್ತು ವಿದೇಶಗಳಿಂದ ಹಣ ಪಡೆದುಕೊಳ್ಳುವ ಸಲುವಾಗಿ ಈಶಾನ್ಯ ರಾಜ್ಯಗಳಿಂದ ಮಕ್ಕಳನ್ನು ಕರ್ನಾಟಕ ಮತ್ತು ತಮಿಳುನಾಡಿಗೆ ವಿದ್ಯಾಭ್ಯಾಸದ ಭರವಸೆ ನೀಡಿ ಕರೆ ತರುವ ಪಾದ್ರಿಗಳು ಲೈಂಗಿಕ ಕಿರುಕುಳವನ್ನೂ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ಮಣಿಪುರದ ತಾಮ್ನಾಗ್ಲಾಂಗ್, ಸೇನಾಪತಿ, ಚಾಂಡೇಲ್, ಬಿಷ್ಣುಪುರ, ಚುರಾಚಾಂದಪುರ ಮತ್ತು ಇಂಪಾಲ, ಅಸ್ಸಾಂನ ಉತ್ತರ ಕಾಚಾರ್ ಬೆಟ್ಟ ಹಾಗೂ ಮೇಘಾಲಯಗಳಿಂದ ಸೂಕ್ತ ವಿದ್ಯಾಭ್ಯಾಸ ಕೊಡಿಸುವುದಾಗಿ ಹೇಳಿ ನೂರಾರು ಮಕ್ಕಳನ್ನು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳಗಳಿಗೆ ಪಾದ್ರಿಗಳು ಕಳ್ಳ ಸಾಗಾಟ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹೀಗೆ ಕುಟಿಲ ತಂತ್ರದ ಮೂಲಕ ಲಿಂಗ ಭೇದವಿಲ್ಲದೆ ಮಕ್ಕಳನ್ನು ಕರೆಸಿಕೊಂಡ ಕ್ರೈಸ್ತ ವಸತಿ ಕೇಂದ್ರಗಳ ನಿರ್ದೇಶಕರು, ಅವರಲ್ಲಿನ ಮಕ್ಕಳಿಂದ ಮಸಾಜ್ ಮಾಡಿಸಿಕೊಳ್ಳುವುದು ಮತ್ತು ಲೈಂಗಿಕ ಕಿರುಕುಳಗಳನ್ನು ನೀಡುತ್ತಿರುವುದು ಆಯೋಗದ ವಿಚಾರಣೆಯಿಂದ ತಿಳಿದು ಬಂದಿದೆ.

ಈಶಾನ್ಯ ರಾಜ್ಯಗಳಲ್ಲಿ ಗುಣಮಟ್ಟದ ಶಿಕ್ಷಣ ತಮ್ಮ ಮಕ್ಕಳಿಗೆ ದೊರಕುತ್ತಿಲ್ಲ ಎಂಬ ನಿಟ್ಟಿನಲ್ಲಿ ಭಾರೀ ನಿರೀಕ್ಷೆಗಳನ್ನಿಟ್ಟುಕೊಂಡ ಬಡ ಹೆತ್ತವರು ತಮ್ಮ ಮಕ್ಕಳನ್ನು ದಕ್ಷಿಣದ ರಾಜ್ಯಗಳಿಗೆ ಪಾದ್ರಿಗಳ ಜತೆ ಕಳುಹಿಸಿಕೊಡಲು ಒಪ್ಪುತ್ತಾರೆ. ಅಂತವರನ್ನು ಈ ಪಾದ್ರಿಗಳು ಸುಲಭವಾಗಿ ಗುರುತಿಸಿ ಕರೆದೊಯ್ಯುತ್ತಿದ್ದಾರೆ. ಅವರ ಮೂಲ ಉದ್ದೇಶ ಚರ್ಚುಗಳು ಮತ್ತು ವಿದೇಶಿ ಮೂಲಗಳಿಂದ ನಿಧಿಗಳನ್ನು ಆಕರ್ಷಿಸುವುದು ಎಂದು ಆಯೋಗ ಸುಪ್ರೀಂ ಕೋರ್ಟಿಗೆ ತಿಳಿಸಿದೆ.

ಈಶಾನ್ಯ ರಾಜ್ಯಗಳಲ್ಲಿ ಶಿಕ್ಷಣದ ಮಹತ್ವ ಕಡಿಮೆಯಾಗಿದೆ. ತಮ್ಮ ಮನೆಗಳ ಪಕ್ಕ ಶಾಲೆಗಳಿಲ್ಲ. ಇದ್ದರೂ ಸರಿಯಾಗಿ ಪಾಠಗಳನ್ನು ಹೇಳಿಕೊಡಲಾಗುತ್ತಿಲ್ಲ. ರಸ್ತೆ ಅವ್ಯವಸ್ತೆ ಸೇರಿದಂತೆ ಮೂಲಭೂತ ವ್ಯವಸ್ಥೆಗಳ ಕೊರತೆಯಿದೆ. ಆಸ್ಪತ್ರೆಗಳು, ವಿದ್ಯುತ್ ಸಮಸ್ಯೆಗಳು ಕೂಡ ವಿಪರೀತವಾಗಿವೆ. ಇದಕ್ಕಿಂತಲೂ ಆತಂಕಕಾರಿಯಾಗಿರುವ ವಿಚಾರ ಬಂಡುಕೋರರು. ಶಾಲೆಗಳಿಗೆ ಹೋಗುವ ಸಂದರ್ಭದಲ್ಲಿ ರಕ್ಷಣಾ ಪಡೆಗಳಿಂದ ಸಹಕಾರ ಸಿಗದೇ ಇರುವುದರಿಂದ ಹೆತ್ತವರು ಸಹಜವಾಗಿ ಭೀತಿಯಿಂದಿದ್ದಾರೆ. ವಸತಿ ಶಾಲೆಗಳಿಗೆ ಸೇರಿಸುವಷ್ಟು ಶ್ರೀಮಂತರಲ್ಲದ ಹೆತ್ತವರಿಗೆ ಆಗ ಸುಲಭವಾಗಿ ಕಾಣಸಿಗುವುದು ಪಾದ್ರಿಗಳ ಮೂಲಕ ದೊರೆಯುವ ಶಿಕ್ಷಣ.

ಆ ಮೂಲಕ ಮಧ್ಯವರ್ತಿಗಳಿಗೆ ಪರಿಸ್ಥಿತಿಯ ಸಂಪೂರ್ಣ ಲಾಭವನ್ನು ಪಡೆಯುವ ಅವಕಾಶ ದೊರಕುತ್ತದೆ. ಪಾದ್ರಿಗಳೂ ಈ ಅವಕಾಶವನ್ನು 'ಸದುಪಯೋಗ'ಪಡಿಸಿಕೊಳ್ಳುತ್ತಾರೆ. ಆದರೆ ಮಕ್ಕಳ ಸ್ಥಿತಿ ಮಾತ್ರ ಅತ್ತ ದರಿ, ಇತ್ತ ಪುಲಿ ಎಂಬಂತಾಗುತ್ತದೆ ಎಂದು ಮನೆ ಮತ್ತು ದಕ್ಷಿಣ ಭಾರತಗಳ 'ಕ್ರೈಸ್ತ ವಸತಿ ಕೇಂದ್ರ'ಗಳನ್ನು ಉಲ್ಲೇಖಿಸಿ ಆಯೋಗ ತಿಳಿಸಿದೆ.

ಈಶಾನ್ಯ ರಾಜ್ಯಗಳಿಂದ ಕರೆ ತರುವ ಮಕ್ಕಳನ್ನು ಹೆಚ್ಚಾಗಿ ತಮಿಳುನಾಡು ಮತ್ತು ಕರ್ನಾಟಕಗಳಲ್ಲಿನ ತಮಿಳು ಮತ್ತು ಕನ್ನಡ ಮಾಧ್ಯಮಗಳ ಶಾಲೆಗಳಿಗೆ ಸೇರಿಸಲಾಗುತ್ತದೆ. ತಮ್ಮ ರಾಜ್ಯಗಳಲ್ಲಿ ಮಾತನಾಡದೇ ಇರುವ ಭಾಷೆಗಳಲ್ಲಿ ಆ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುವುದು ಅಷ್ಟೊಂದು ಸುಲಭವಲ್ಲ.

ಹಾಗಾಗಿ ಈಶಾನ್ಯ ಭಾರತಗಳಲ್ಲಿನ ರಾಜ್ಯಗಳ ಪರಿಸ್ಥಿತಿ ಸುಧಾರಿಸಬೇಕು. ಅಲ್ಲಿನ ಶಾಲೆಗಳು ಮತ್ತು ಹಾಸ್ಟೆಲುಗಳಲ್ಲಿ ತಂಗಿರುವ ಅರೆ ಮಿಲಿಟರಿ ಪಡೆಗಳು ತಕ್ಷಣವೇ ಬೇರೆ ಆಸರೆ ಕಂಡುಕೊಳ್ಳಬೇಕು. ಬಂಡುಕೋರರ ಸಮಸ್ಯೆಗಳಿರುವ ಪ್ರದೇಶಗಳಲ್ಲಿ ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು ಮತ್ತು ಮಾದರಿ ಶಾಲೆಗಳನ್ನು ತೆರೆಯಬೇಕು ಎಂದು ಆಯೋಗವು ಕೇಂದ್ರ ಗೃಹ ಸಚಿವಾಲಯ ಹಾಗೂ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಸೂಚನೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ