ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಲೇಹ್ ಬಿರುಮಳೆಗೆ 115 ಬಲಿ; ಕನ್ನಡಿಗರೂ ಅಪಾಯದಲ್ಲಿ (Flash floods | Leh | Ladakh region | Jammu and Kashmir)
Bookmark and Share Feedback Print
 
ಪಾಕಿಸ್ತಾನ ಪ್ರಚೋದಿತ ಹಿಂಸಾಚಾರದಿಂದ ತತ್ತರಿಸಿದ್ದ ಕಣಿವೆ ರಾಜ್ಯದ ಮೇಲೆ ವರುಣನೂ ಮುನಿಸಿಕೊಂಡಿದ್ದಾನೆ. ಶುಕ್ರವಾರ ನಡೆದ ಮೇಘಸ್ಫೋಟದಿಂದಾಗಿ ಕಾಣಿಸಿಕೊಂಡ ಭಾರೀ ಪ್ರವಾಹದಿಂದ ಇದುವರೆಗೆ ಕನಿಷ್ಠ 115 ಮಂದಿ ಸಾವನ್ನಪ್ಪಿದ್ದಾರೆ. 500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇವರಲ್ಲಿ 13 ಕನ್ನಡಿಗರೂ ಸೇರಿದ್ದಾರೆ ಎಂದು ವರದಿಗಳು ಹೇಳಿವೆ.

ಇದುವರೆಗೆ 115 ಶವಗಳನ್ನು ಹೊರತೆಗೆಯಲಾಗಿದೆ. ನೂರಾರು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 25 ಸೇನಾ ಯೋಧರೂ ಸೇರಿದಂತೆ 100 ಮಂದಿ ಅನಿರೀಕ್ಷಿತ ಪ್ರವಾಹದ ನಂತರ ಕಾಣೆಯಾಗಿದ್ದಾರೆ. ಆಪತ್ತಿನಲ್ಲಿ ಸಿಕ್ಕಿ ಹಾಕಿಕೊಂಡವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಆದರೂ ಕೆಲವು ಕಡೆ ಭಾರೀ ಮಳೆಯಿಂದಾಗಿ ತೊಂದರೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
PTI

ಲಡಾಖ್ ಪ್ರಾಂತ್ಯದಲ್ಲಿನ ಲೇಹ್ ನಗರದ ಸುತ್ತಮುತ್ತಲ ಹಲವು ಗ್ರಾಮಗಳು ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹಕ್ಕೆ ಆಹಾರವಾಗಿವೆ. ಇದರಿಂದಾಗಿ ನೂರಾರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಶಾಲೆಗಳು ಮತ್ತು ಇತರ ಕಟ್ಟಡಗಳು ಕೂಡ ನೆಲಸಮಗೊಂಡಿದ್ದು, ಇಲ್ಲಿನ ದೃಶ್ಯಗಳು ಕೆಲವು ವರ್ಷಗಳ ಹಿಂದಿನ ಸುನಾಮಿ ಪರಿಸ್ಥಿತಿಯನ್ನು ನೆನಪಿಸುತ್ತಿವೆ.

ದೂರಸಂಪರ್ಕ, ರಸ್ತೆಗಳು, ರೈಲು ಸೇವೆ ಮತ್ತು ವೈಮಾನಿಕ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ವಿದೇಶಿ ಪ್ರವಾಸಿಗರೂ ಸೇರಿದಂತೆ ಸುಮಾರು 10,000 ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

ಈಗಾಗಲೇ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಸಂತ್ರಸ್ತರಿಗೆ ಪರಿಹಾರವನ್ನೂ ಘೋಷಿಸಿದ್ದಾರೆ. ಮಿಲಿಟರಿ ಮತ್ತು ಇತರ ರಕ್ಷಣಾ ಪಡೆಗಳು ಜನತೆಗೆ ನಿರಾಳತೆಯನ್ನು ಒದಗಿಸಲಿವೆ, ರಕ್ಷಣಾ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ 13 ಮಂದಿ...
ಪ್ರವಾಸಕ್ಕೆಂದು ತೆರಳಿದ್ದ ಕರ್ನಾಟಕದ 13 ಮಂದಿ ಲೇಹ್‌ನಲ್ಲಿನ ಕಾರದುಂಗಲ್ ಪ್ರದೇಶದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ, ಅವರಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ ಎಂದೂ ಕೆಲ ವರದಿಗಳು ಹೇಳಿವೆ.

ಲಡಾಖ್ ಜತೆಗಿನ ಎಲ್ಲಾ ರೀತಿಯ ಸಂಪರ್ಕಗಳೂ ಕಡಿದುಕೊಂಡಿವೆ. ಆದರೂ ರಾಯಚೂರಿನ ದೇವೇಂದ್ರ ಗೌಡ ಮತ್ತು ರಾಘವೇಂದ್ರ ಎಂಬವರು ತಾವು ಸುರಕ್ಷಿತವಾಗಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ 'ಟಾರ್ಗೆಟ್ ಇಂಡಿಯಾ' ಸಾಫ್ಟ್‌ವೇರ್ ಕಂಪನಿಯ 13 ಕನ್ನಡಿಗ ಉದ್ಯೋಗಿಗಳು ಲೇಹ್ ಪ್ರವಾಸಕ್ಕೆಂದು ಕೆಲ ದಿನಗಳ ಹಿಂದೆ ಹೊರಟಿದ್ದರು. ಆದರೆ ಕೆಲವು ವರದಿಗಳ ಪ್ರಕಾರ 11 ಮಂದಿ ಎಂದು ಹೇಳಲಾಗಿದೆ.

ಅವರಲ್ಲಿ ರಾಘವೇಂದ್ರ, ದೇವೇಂದ್ರ ಗೌಡ, ಪ್ರಣಬ್ ಮತ್ತು ಪ್ರತಾಪ್ ಎಂಬವರು ತಾವು ಸಿಕ್ಕಿ ಹಾಕಿಕೊಂಡಿದ್ದೇವೆ. ಆದರೂ ಸುರಕ್ಷಿತವಾಗಿದ್ದೇವೆ. ಪ್ರವಾಹ ಇಳಿಮುಖವಾಗದ ಹೊರತು ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ ಎಂದು ವರದಿಗಳು ಹೇಳಿವೆ.

ದಿಢೀರ್ ಪ್ರವಾಹದ ಸಂದರ್ಭದಲ್ಲಿ ಅವರು ಲೇಹರ್ ಎಂಬಲ್ಲಿನ ಸ್ನೋ ಲಯನ್ ಅತಿಥಿ ಗೃಹದಲ್ಲಿ ತಂಗಿದ್ದರು.

ಕರ್ನಾಟಕದವರು ಪ್ರವಾಹ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ಕುರಿತು ಅವರ ಮನೆಯವರು ಮತ್ತು ಜಿಲ್ಲಾಡಳಿತವು ಮುಖ್ಯಮಂತ್ರಿ ಮತ್ತು ಗೃಹಸಚಿವಾಲಯಕ್ಕೆ ಮಾಹಿತಿ ನೀಡಿದೆ. ಕಂಪನಿಯ ಜತೆಗೂ ಚರ್ಚೆ ನಡೆಸಲಾಗಿದೆ. ಅವರ ರಕ್ಷಣೆಗೆ ಖಾಸಗಿ ಹೆಲಿಕಾಪ್ಟರ್ ಕಳುಹಿಸಿಕೊಡುವ ಭರವಸೆಯನ್ನು ಕಂಪನಿ ನೀಡಿದೆ ಎಂದು ಹೇಳಲಾಗಿದೆ.

ಇದುವರೆಗೂ ಕನ್ನಡಿಗರನ್ನು ರಕ್ಷಿಸಿದ ಕುರಿತು ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ