ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಿಬಿಐ ವಶಕ್ಕೆ 'ಆರೋಪಿ' ಅಮಿತ್ ಶಾ; ವಿಚಾರಣೆ ಆರಂಭ (Sohrabuddin Sheikh | Amit Shah | CBI | Narendra Modi)
Bookmark and Share Feedback Print
 
ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಹತ್ಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಅಮಿತ್ ಶಾ ಅವರನ್ನು ವಶಕ್ಕೆ ನೀಡಬೇಕೆಂದು ಕೇಂದ್ರೀಯ ತನಿಖಾ ದಳ ಮಾಡಿದ್ದ ಮನವಿಯನ್ನು ಗುಜರಾತ್ ಹೈಕೋರ್ಟ್ ಪುರಸ್ಕರಿಸಿದ್ದು, ಸಿಬಿಐ 'ಆರೋಪಿ'ಯ ವಿಚಾರಣೆ ಆರಂಭಿಸಿದೆ.

ಅಹಮದಾಬಾದ್ ಹೈಕೋರ್ಟ್ ಆದೇಶದಂತೆ ಇಂದು ಮುಂಜಾನೆ ವೈದ್ಯರೊಂದಿಗೆ ಸಾಬರಮತಿ ಜೈಲಿಗೆ ತಲುಪಿದ ಸಿಬಿಐ, ವೈದ್ಯಕೀಯ ತಪಾಸಣೆ ನಂತರ ಶಾ ಅವರನ್ನು ವಶಕ್ಕೆ ತೆಗೆದುಕೊಂಡಿತು. ನಾಳೆಯವರೆಗೆ ಅವರನ್ನು ಸಿಬಿಐ ವಿಚಾರಣೆ ನಡೆಸಲಿದೆ.

ಮಾಜಿ ಸಚಿವರನ್ನು ತನ್ನ ವಶಕ್ಕೆ ನೀಡಬೇಕೆಂಬ ಸಿಬಿಐ ಮನವಿಯನ್ನು ತಿರಸ್ಕರಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ತಳ್ಳಿ ಹಾಕಿರುವ ಹೈಕೋರ್ಟ್, ಶನಿವಾರದಿಂದ ಅನ್ವಯವಾಗುವಂತೆ ಎರಡು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಆದರೆ ಸಿಬಿಐ ಮನವಿಯಂತೆ ವಿಚಾರಣೆಯ ವೀಡಿಯೋ ಚಿತ್ರೀಕರಣ ಬೇಡಿಕೆಗೆ ಹೈಕೋರ್ಟ್ ನಕಾರ ಸೂಚಿಸಿದೆ.

ಪ್ರಕರಣವು ತನಿಖೆಯ ಹಂತದಲ್ಲಿರುವುದರಿಂದ ಈ ಕುರಿತು ಹೆಚ್ಚಿನ ವಿವರಣೆಯನ್ನು ನೀಡುವುದು ಅಥವಾ ವಿಸ್ತೃತ ಗಮನವನ್ನು ನೀಡುವುದು ಸೂಕ್ತವಾಗದು ಎಂದು ಶಾ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸುವ ಮೊದಲು ನ್ಯಾಯಮೂರ್ತಿ ಅಖಿಲ್ ಖುರೇಷಿ ಅಭಿಪ್ರಾಯಪಟ್ಟರು.

ಕೋರ್ಟ್ ಆದೇಶವನ್ನು ಓದಿ ಹೇಳುತ್ತಿದ್ದಂತೆ, 46ರ ಹರೆಯದ ಬಿಜೆಪಿ ನಾಯಕನ ವಿಚಾರಣೆಯನ್ನು ವೀಡಿಯೋ ಚಿತ್ರೀಕರಣ ನಡೆಸಬೇಕು ಎಂದು ಶಾ ಅವರ ವಕೀಲರಲ್ಲೊಬ್ಬರಾದ ಮಹೇಶ್ ಜೇಠ್ಮಲಾನಿಯವರು ಮನವಿ ಮಾಡಿಕೊಂಡರು. ಆದರೆ ಇದನ್ನು ಸಿಬಿಐ ವಕೀಲ ಕೆ.ಟಿ.ಎಸ್. ತುಳಸಿ ತೀವ್ರವಾಗಿ ಆಕ್ಷೇಪಿಸಿದರು. ಇದರಿಂದ ಮತ್ತಷ್ಟು ಸಮಯ ವ್ಯರ್ಥವಾಗುತ್ತದೆ ಎಂದರು.

ಅಲ್ಲದೆ ಮೇಲಿನ ನ್ಯಾಯಾಲಯದಲ್ಲಿ ಆದೇಶವನ್ನು ಪ್ರಶ್ನಿಸಬೇಕೆಂಬ ಹಿನ್ನೆಲೆಯಲ್ಲಿ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಬೇಕೆಂಬ ಶಾ ವಕೀಲರ ಬೇಡಿಕೆ ಸೇರಿದಂತೆ ಎರಡೂ ಮನವಿಗಳನ್ನೂ ಹೈಕೋರ್ಟ್ ತಿರಸ್ಕರಿಸಿತು.
ಸಂಬಂಧಿತ ಮಾಹಿತಿ ಹುಡುಕಿ