ಸುನಂದಾ ಪುಷ್ಕರ್ ತನ್ನ ಭಾವೀ ಪತ್ನಿಯೆಂದು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಕೊನೆಗೂ ಒಪ್ಪಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಸುನಂದಾ ಅವರನ್ನು ನಿರೂಪಕರು ತರೂರ್ ಅವರ ಭಾವೀ ಪತ್ನಿ ಎಂದೇ ಸಂಬೋಧಿಸಿದರೂ ಕಾಂಗ್ರೆಸ್ ಸಂಸದ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ವರದಿಗಳು ಹೇಳಿವೆ.
ಮುಂಬೈಯಲ್ಲಿ ಶುಕ್ರವಾರ ನಡೆದ ಲಲಿತ್ ದೋಷಿ ಸ್ಮರಣಾರ್ಥ 16ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ತರೂರ್ ಜತೆ ಸುನಂದಾ ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಂಘಟಕರು ಸುನಂದಾ ಅವರನ್ನು ತರೂರ್ ಅವರ ಭಾವೀ ಪತ್ನಿಯೆಂದೇ ಪರಿಚಯಿಸಿದರು.
PTI
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ತರೂರ್, 'ನನ್ನ ಒತ್ತಾಸೆಯಾಗಿರುವ ವ್ಯಕ್ತಿಯನ್ನು ಕರೆದುಕೊಂಡು ಬರುತ್ತೀರಾ ಎಂದು ಅವರು ನನ್ನಲ್ಲಿ ಕೇಳಿದ್ದರು. ಅದರಂತೆ ಕರೆದುಕೊಂಡು ಬಂದಿದ್ದೇನೆ' ಎಂದು ಆದಿ ಗೋದ್ರೆಜ್ ಮತ್ತು ಕೇಶೂಬ್ ಮಹೀಂದ್ರಾ ಮುಂತಾದ ಉದ್ಯಮಿಗಳ ಸಾಲಿನಲ್ಲಿ ಕುಳಿತಿದ್ದ ಸುನಂದಾ ಅವರನ್ನು ನೋಡುತ್ತಾ ಹೇಳಿದರು.
ಇತ್ತೀಚೆಗಷ್ಟೇ ತರೂರ್ ಮತ್ತು ಸುನಂದಾ ಜತೆಯಾಗಿ ಮಹಾರಾಷ್ಟ್ರದ ಹಲವು ದೇವಸ್ಥಾನಗಳಿಗೆ ಯಾತ್ರೆ ಕೈಗೊಂಡು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದ್ದರು.
ಕಾರ್ಯಕ್ರಮದಲ್ಲಿ ಭಾಷಣದ ಅವಧಿ ಮುಗಿದ ನಂತರ ಸಭಿಕರೊಂದಿಗೆ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ತರೂರ್ ಅವರತ್ತ ಹಲವು ಪ್ರಶ್ನೆಗಳು ತೂರಿ ಬಂದವು. ಕಳೆದ 50 ವರ್ಷಗಳಲ್ಲಿ ನಿಮ್ಮಿಂದ ಯಾವೆಲ್ಲ ತಪ್ಪುಗಳು ನಡೆದಿವೆ ಎಂದು ಪ್ರಶ್ನಿಸಲಾಯಿತು.
ನಾನು ಕಷ್ಟದಲ್ಲಿ ಸಿಕ್ಕಿ ಹಾಕಿಕೊಳ್ಳಬೇಕೆಂದು ನೀವು ಬಯಸುತ್ತಿದ್ದೀರಾ? ನಾವು ಕಳೆದ 50 ವರ್ಷಗಳಲ್ಲಿ ಯಾವುದೇ ತಪ್ಪುಗಳನ್ನು ಮಾಡಿಲ್ಲ. ತಪ್ಪುಗಳನ್ನು ಮಾಡಿರುವುದು ನಾನೊಬ್ಬನೇ ಎಂದು ಜಾಣತನದ ಉತ್ತರ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ನಡೆದ ವಂದನಾರ್ಪಣೆಯಲ್ಲೂ ತರೂರ್-ಸುನಂದಾ ಹೆಸರು ಮತ್ತೆ ಗಮನ ಸೆಳೆಯಿತು. ಇಬ್ಬರ ಭವಿಷ್ಯವೂ ಚೆನ್ನಾಗಿರಲಿ ಎಂದು ಮಹಾರಾಷ್ಟ್ರ ಮಾಜಿ ಮುಖ್ಯ ಕಾರ್ಯದರ್ಶಿ ಪ್ರೇಮ್ ಕುಮಾರ್ ಹಾರೈಸುವ ಮೂಲಕ ಹಲವರ ಮುಖದಲ್ಲಿ ಮತ್ತೊಮ್ಮೆ ಮುಗುಳ್ನಗು ತರಿಸಿದರು.
ತರೂರ್ ಮತ್ತು ಸುನಂದಾ ಅವರು ಇದೇ ತಿಂಗಳ 17ರಂದು ಮಂಗಳವಾರ ವಿವಾಹವಾಗಲಿದ್ದಾರೆ ಎಂದು ವರದಿಗಳು ಹೇಳಿವೆ.