ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರಕಾರದ ಆಹಾರ ನಿರ್ವಹಣಾ ನೀತಿಗಳನ್ನು ಕಟುವಾಗಿ ವಿರೋಧಿಸಿರುವ ಸಿಪಿಎ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಕೋಟ್ಯಂತರ ಟನ್ ಆಹಾರ ಧಾನ್ಯಗಳು ಜನರಿಗೆ ತಲುಪದೆ, ಗೋಡೌನ್‌ಗಳಲ್ಲಿ ಕೊಳೆಯುತ್ತಿದ್ದು, ಯುಪಿಎ ನೀತಿಯು ಇಲಿಗಳಿಗೆ ಆಹಾರ ಭದ್ರತೆಯೊದಗಿಸುತ್ತಿದೆ ಎಂದು ಟೀಕಿಸಿದ್ದಾರೆ.
ಭಾರತೀಯ ಆಹಾರ ನಿಗಮ (ಎಫ್‌ಸಿಐ) ಗೋದಾಮುಗಳಲ್ಲಿ ಆಹಾರ ಸಂಗ್ರಹಣೆಯು ಮಿತಿ ಮೀರುತ್ತಿದೆ. ಜನಸಾಮಾನ್ಯರಿಗೆ ಆಹಾರ ಭದ್ರತೆಯಿಲ್ಲ. ಈ ಗೋದಾಮುಗಳಲ್ಲಿ ಇಲಿಗಳಿಗೆ ಆಹಾರ ಭದ್ರತೆ ಒದಗಿಸುವಲ್ಲಿ ಪಣತೊಟ್ಟಂತಿದ್ದಾರೆ ಎಂದು ಕರಾಟ್ ಹೇಳಿದರು.
ದೀರ್ಘ ಕಾಲದಿಂದಲೂ ಬಡವರಿಗೆ ಆಹಾರ ಭದ್ರತೆ ನೀಡಬೇಕೆಂದು ಎಡಪಕ್ಷಗಳು ಆಗ್ರಹಿಸುತ್ತಲೇ ಬಂದಿವೆ. ಆದರೆ ಸರಕಾರ ಇದಕ್ಕೆ ಸೊಪ್ಪು ಹಾಕುತ್ತಿಲ್ಲ ಎಂದ ಅವರು, ಸಮಗ್ರ ಅಭಿವೃದ್ಧಿ ಕುರಿತು ಕಾಂಗ್ರೆಸ್ ನಾಯಕತ್ವ ಹಾಗೂ ಸರಕಾರವು ಉನ್ಮಾದ ಸ್ಥಿತಿಯಲ್ಲಿ ಮಾತನಾಡುತ್ತಿದೆ. ಆದರೆ ಅವರು ರೂಪಿಸುತ್ತಿರುವ ಅಭಿವೃದ್ಧಿ ನೀತಿಗಳು ಬಹುತೇಕ ಜನರಿಗೆ ಆಹಾರ, ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆ ಕೈಗೆಟುಕದಂತೆ ಮಾಡುತ್ತಿವೆ ಎಂದರು.
ಭಾರತವು ವಿಶ್ವದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಸಿವಿನಿಂದ ನರಳುತ್ತಿರುವವರು ಮತ್ತು ಅಪೌಷ್ಟಿಕ ಆಹಾರ ಪೀಡಿತರ ನಾಚಿಕೆಗೇಡಿನ ನಿದರ್ಶನವಾಗುತ್ತಿದೆ ಎಂದ ಕಾರಟ್, ಪದೇ ಪದೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸುತ್ತಿರುವುದು ಉಳಿದೆಲ್ಲಾ ಆಹಾರ ವಸ್ತುಗಳ ಬೆಲೆ ಏರಿಕೆಯ ಪ್ರಧಾನ ಕಾರಣಗಳಲ್ಲೊಂದು ಎಂದರು.
ಕಾಂಗ್ರೆಸ್ ನೇತೃತ್ವದ ಸರಕಾರದ ನೀತಿಯು ಜನರ ಹಿತಾಸಕ್ತಿಗೆ ಎಷ್ಟೊಂದು ಮಾರಕವಾಗಿದೆ ಎಂಬುದಕ್ಕೆ ಆಹಾರ ಮತ್ತು ಬದುಕಲು ಅತ್ಯಂತ ಅಗತ್ಯವಿರುವ ವಸ್ತುಗಳ ಲಂಗುಲಗಾಮಿಲ್ಲದ ಬೆಲೆ ಏರಿಕೆಯೇ ಕಾರಣ ಎಂದ ಅವರು, ಜನರು ಇಷ್ಟೆಲ್ಲಾ ಒದ್ದಾಡುತ್ತಿದ್ದರೂ ಸರಕಾರವು ಇದರ ಹೊಣೆ ಹೊರಲು ಸಿದ್ಧವೇ ಇಲ್ಲ ಎಂದು ಹೇಳಿದರು.