ಜಮ್ಮು ಕಾಶ್ಮೀರದ ಲೇಹ್ ಪಟ್ಟಣದಲ್ಲಿ ಶುಕ್ರವಾರ ಸಂಭವಿಸಿದ್ದ ಮೇಘಸ್ಫೋಟದಿಂದಾಗಿ ಕಾಣಿಸಿಕೊಂಡ ಭಾರೀ ಪ್ರವಾಹದಿಂದಾಗಿ 500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಇದುವರೆಗೆ 140 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ವ್ಯತಿರಿಕ್ತ ಹವಾಮಾನವು ರಕ್ಷಣಾ ಕಾರ್ಯಾಚರಣೆಗೆ ವಿಳಂಬವನ್ನುಂಟು ಮಾಡುತ್ತಿದೆ.
ಪ್ರಕೃತಿ ಸುಂದರ ತಾಣದಲ್ಲಿ ಇದೀಗ ಎಲ್ಲೆಡೆ ಸ್ಮಶಾನ ಮೌನ ಆವರಿಸಿದೆ. ಪ್ರವಾಹಕ್ಕೊಳಗಾದವರ ಪಾಡು ತೀರಾ ಶೋಚನೀಯವಾಗಿದೆ.
ಪರಿಹಾರ ಕಾರ್ಯಚರಣೆಗೆ ವಾಯುಸೇನೆಯ ನೆರವನ್ನು ಪಡೆಯಲಾಗುತ್ತಿದೆ. ಕೆಟ್ಟು ಹೋಗಿರುವ ದೂರವಾಣಿ ವ್ಯವಸ್ಥೆಯನ್ನು ಯಥಾ ಸ್ಥಿತಿಗೆ ತರುವ ಪ್ರಯತ್ನ ಮುಂದುವರಿದಿದೆ. ಅದೇ ರೀತಿ ಪ್ರವಾಸಿಗರನ್ನು ಸುರಕ್ಷಿತ ತಾಣಕ್ಕೆ ಕರೆತರಲಾಗುತ್ತಿದೆ.
ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಸ್ಥಳಕ್ಕೆ ಧಾವಿಸಿದ್ದು, ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದ್ದಾರೆ.