ಸಮಾಜ ಬದಲಾಗುತ್ತಿಲ್ಲ, ನಮ್ಮ ಭಾವನೆಗಳನ್ನು ಗುರುತಿಸುತ್ತಿಲ್ಲ. ನಮ್ಮನ್ನು ತುಚ್ಛವಾಗಿ ಕಾಣಲಾಗುತ್ತಿದೆ. ನಾವೇನು ತಪ್ಪು ಮಾಡಿದ್ದೇವೆ. ದೇಶದ ಕಾನೂನು ಕೂಡ ಸಲಿಂಗಕಾಮ ಅಪರಾಧವಲ್ಲ ಎಂದು ಹೇಳಿದರೂ ನಮಗೆ ಮುಕ್ತಿ ದೊರಕಿಲ್ಲ. ಸಮಾಜದ ಎದುರು ನಾನು ಸಲಿಂಗಕಾಮಿ ಎಂದು ಹೇಳುವುದಕ್ಕಿಂತ ಏಡ್ಸ್ ರೋಗಿ ಎಂದು ಹೇಳುವುದು ಸುಲಭದ ಕೆಲಸ -- ಹೀಗೆಂದು ಸಲಿಂಗಿಗಳು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಆತನ ಹೆಸರು ವಿವೇಕ್. ಹತ್ತಾರು ವರ್ಷಗಳ ಹಿಂದೆ ಮುಂಬೈಗೆ ಹೋಗಿದ್ದ. ಅಲ್ಲಿ ಮಾಡಿದ ರಾತ್ರಿ ಕೆಲಸ ಗಂಡು ವೇಶ್ಯೆ ಮತ್ತು ಹಗಲು ಹೊತ್ತು ಸ್ವಾಗತಕಾರನಾಗಿ ಕಂಪನಿಯೊಂದರಲ್ಲಿ ಸೇರಿಕೊಂಡಿದ್ದ. ತಾನು ಪುರುಷರತ್ತ ಆಕರ್ಷಿತನಾಗುತ್ತಿದ್ದೇನೆ ಎಂಬುದರ ಕುರಿತು ಆತನಲ್ಲಿ ಖಚಿತವಾಗುತ್ತಾ ಹೋಗಿತ್ತು.
ಆದರೂ ಕುಟುಂಬ ಮತ್ತು ಸಮಾಜವನ್ನು ಸಲಿಂಗಕಾಮಿಯಾಗಿ ಎದುರಿಸುವ ಶಕ್ತಿ ವಿವೇಕ್‌ಗೆ ಇರಲಿಲ್ಲ. ಅನಿವಾರ್ಯವಾಗಿ ಸಂಬಂಧಿ ಯುವತಿಯೊಬ್ಬಳನ್ನು ಮದುವೆಯಾಗಬೇಕಾಯಿತು. ಈಗ 12 ವರ್ಷದ ಮಗಳೂ ಇದ್ದಾಳೆ.
ಅದಕ್ಕಿಂತಲೂ ಆಘಾತಕಾರಿ ವಿಚಾರವೆಂದರೆ ವಿವೇಕ್‌ನ ದೇಹಕ್ಕೆ ಎಚ್ಐವಿ ಸೋಂಕು ಅಂಟಿಕೊಂಡಿರುವುದು. 2003ರಲ್ಲೇ ಎಚ್‌ಐವಿ ಪಾಸಿಟಿವ್ ಎಂಬುದು ತಿಳಿದುಬಂದಿತ್ತು. ಇದು ಆತನ ಪತ್ನಿಗೂ ತಿಳಿದಿದೆ. ತನಗೆ ಎಚ್ಐವಿ ಇದೆ ಎಂದು ಪತ್ನಿ ಮತ್ತು ಮನೆಯವರಲ್ಲಿ ಹೇಳುವುದು ವಿವೇಕ್‌ಗೆ ಅಷ್ಟೊಂದು ಕಷ್ಟವಾಗಿಲ್ಲ.
ಕಷ್ಟವಾಗಿರುವುದು ತಾನು ಸಲಿಂಗಕಾಮಿ ಎಂದು ಹೇಳುವುದು ಮತ್ತು ಅವರಿಗೆ ಮನವರಿಕೆ ಮಾಡುವುದು. ಭಾರತದಲ್ಲಿ ಈಗಲೂ ಇದನ್ನು ಅಪರಾಧವೆಂದೇ ಪರಿಗಣಿಸಲಾಗುತ್ತದೆ, ಸಾಮಾಜಿಕ ಪಿಡುಗು ಎಂದು ಹೇಳಲಾಗುತ್ತಿದೆ ಎಂದು ಆತ್ಮವಂಚನೆ ಮಾಡಿಕೊಳ್ಳುತ್ತಿರುವ ವಿವೇಕ್ ಬೇಸರದಿಂದಲೇ ನುಡಿಯುತ್ತಾನೆ.
ಆತನ ಪ್ರಕಾರ ತಾನೊಬ್ಬ ಎಚ್ಐವಿ ಪಾಸಿಟಿವ್ ಎಂದು ಸಮಾಜಕ್ಕೆ ಹೇಳಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ತಾನೊಬ್ಬ ಸಲಿಂಗಕಾಮಿ ಎಂದು ಮತ್ತೊಬ್ಬರಿಗೆ ಮನವರಿಕೆ ಮಾಡುವುದು ಸಾಧ್ಯವೇ ಇಲ್ಲದ ಮಾತು.
ಸಮಾಜವು ಸಾಮಾನ್ಯವಾಗಿ ಹಿಜಿಡಾಗಳೆಂದು ಕರೆಯುವ ಉಭಯಲಿಂಗಿಗಳು, ಸಲಿಂಗಕಾಮಿಗಳು ಮತ್ತು ಲಿಂಗಾಂತರಿಗಳಿಗಾಗಿನ ಸಂಘಟನೆಯೊಂದು ಹೈದರಾಬಾದ್‌ನಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಕೇಳಿಬಂದ ಭಾವನೆಗಳಿವು. ಅಂದಾಜಿನ ಪ್ರಕಾರ ಆಂಧ್ರಪ್ರದೇಶದಲ್ಲಿ ಸುಮಾರು 60,000 ಸಲಿಂಗಕಾಮಿಗಳಿದ್ದಾರೆ. ಅವರ ನಡುವೆ ಎಚ್ಐವಿ ಪ್ರಮಾಣವೂ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂಬ ಆತಂಕವೂ ಸಭೆಯಲ್ಲಿ ಕೇಳಿ ಬಂದಿದೆ.
ಮತ್ತೊಬ್ಬನ ಕಥೆ ಕೇಳಿ. ಆತನ ಹೆಸರು ನಯೀಮ್. 30ರ ಯುವಕ. ತಂದೆಯೊಂದಿಗೆ ಜಗಳ ಮಾಡಿ 10 ವರ್ಷಗಳ ಹಿಂದೆಯೇ ಮನೆ ಬಿಟ್ಟಾತ. ತನ್ನ ಆರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ ನಂತರ ನಯೀಮ್‌ಗೂ ಮದುವೆ ಮಾಡಲು ತಂದೆ ಹೊರಟಿದ್ದ.
ದಿಕ್ಕೇ ತೋಚದಂತಾದ ನಯೀಮ್, ನನಗೆ ಮದುವೆ ಬೇಡ; ನಾನೊಬ್ಬ ಸಲಿಂಗಕಾಮಿ ಎಂದು ಹೇಳುವುದು ಸಾಧ್ಯವಾಗಲೇ ಇಲ್ಲ. ತನ್ನ ಲೈಂಗಿಕ ಜೀವನವನ್ನು ಅನಿವಾರ್ಯವಾಗಿ ಗುಟ್ಟಾಗಿಡಬೇಕಾಯಿತು.
'ನಿಮಗೆ ಎಚ್ಐವಿ ಪಾಸಿಟಿವ್ ಇದೆ ಎಂದರೆ ಜನ ಸ್ವಲ್ಪ ದಿನ ನಿಮ್ಮನ್ನು ಹೀಯಾಳಿಸಬಹುದು. ಆದರೆ ನಂತರ ಕರುಣೆ ತೋರಿಯಾದರೂ ನಿಮ್ಮನ್ನು ಸ್ವೀಕರಿಸಬಹುದು, ಉಪಚರಿಸಬಹುದು. ಆದರೆ ಇದನ್ನೇ ಸಲಿಂಗಕಾಮಕ್ಕೆ ಹೇಳುವಂತಿಲ್ಲ. ನಿಮ್ಮನ್ನು ಹೆಜ್ಜೆ ಹೆಜ್ಜೆಗೂ ಅಪಮಾನಿಸುತ್ತಾರೆ, ಹಿಜಿಡಾ ಎಂದು ಕರೆಯುತ್ತಾರೆ' ಎಂದು ನಯೀಮ್ ತನ್ನ ಮನದಾಳವನ್ನು ತೋಡಿಕೊಳ್ಳುತ್ತಾನೆ.
ವಿವೇಕನ ಪತ್ನಿಗೆ, ತನ್ನ ಗಂಡ ಓರ್ವ ಸಲಿಂಗಕಾಮಿ ಎಂಬ ವಿಚಾರ ಇದುವರೆಗೂ ಗೊತ್ತಿಲ್ಲ. ಇಂದು ಎಲ್ಲಿಗೆ ಹೋಗಿದ್ದಿರಿ ಎಂದು ಪತ್ನಿ ಪ್ರಶ್ನಿಸಿದರೆ, ಕಚೇರಿಯಲ್ಲೇ ಹೆಚ್ಚು ಕೆಲಸವಿತ್ತು ಎಂದು ಹೇಳುತ್ತೇನೆ ಎಂದು ಸಲಿಂಗಕಾಮಿ ವಿವೇಕ್ ಬಿರಬಿರನೆ ಸಮಯ ನೋಡಿಕೊಂಡು ಹೊರಡುತ್ತಾನೆ.
ಹೇಳಿ, ಅವರೂ ಮನುಷ್ಯರಲ್ಲವೇ? ಅವರವರ ವೈಯಕ್ತಿಕ ಜೀವನ ಹೇಗಿರಬೇಕೆಂದು ನಿರ್ಧರಿಸಬೇಕಾಗಿರುವುದು ಸ್ವತಃ ಅವರೇ ಹೊರತು ಬೇರೆಯವರಿಂದ ಸಾಧ್ಯವೇ? ದೈಹಿಕ ಭಾವನೆಗಳನ್ನು ಬದಲಾವಣೆ ಮಾಡಲು ಸಾಧ್ಯವೇ? ಅಥವಾ ವಿವೇಕನಂತೆ ಆತ್ಮವಂಚನೆ ಮಾಡಿಕೊಂಡು ಬದುಕಬೇಕೇ?