ಮುಂಬೈ ಕಡಲ ತೀರದಲ್ಲಿ ನಡೆದ ಎರಡು ಹಡಗುಗಳ ಪರಸ್ಪರ ಡಿಕ್ಕಿಯಿಂದ ಭಾರೀ ಅನಾಹುತವೇ ಸಂಭವಿಸುತ್ತಿದೆ. ಅದರಲ್ಲೊಂದಾದ ಎಂಎಸ್‌ಸಿ ಚೈತ್ರ ಹಡಗು ಬಹುತೇಕ ಮುಳುಗಡೆಯಾಗಿದ್ದು, ಅದರಲ್ಲಿನ ಭಾರೀ ತೈಲ ಸೋರಿಕೆಯಾಗುತ್ತಿದೆ. ಆ ಮೂಲಕ ಕರಾವಳಿ ವಿಷಮಯವಾಗುತ್ತಿದೆ.
PTI
ಮುಂಬೈ ಬಂದರಿನಿಂದ 10 ಕಿಲೋ ಮೀಟರ್ ದೂರದಲ್ಲಿ ಎರಡು ಸರಕು ಸಾಗಣೆ ಹಡಗುಗಳ ನಡುವೆ ಶನಿವಾರ ಅಪಘಾತ ಸಂಭವಿಸಿತ್ತು. ಪರಿಣಾಮ ಚೈತ್ರ ಹಡಗಿನಿಂದ ತೈಲ ಸೋರಿಕೆ ಆರಂಭವಾಗಿತ್ತು.
ಇದೀಗ ಸುಮಾರು 50 ಟನ್ ತೈಲ ಸಮುದ್ರ ಪಾಲಾಗಿದೆ. ಹಡಗು ಬಹುತೇಕ ಅಡ್ಡಕ್ಕೆ ವಾಲಿದ್ದು, ನಾಳೆ ಬೆಳಗ್ಗಿನ ಹೊತ್ತಿಗೆ ಸಂಪೂರ್ಣ ಮುಳುಗಡೆಯಾಗಬಹುದು ಎಂದು ಕರಾವಳಿ ತಟರಕ್ಷಣಾ ಪಡೆಯ ಕಾರ್ಯಾಚರಣೆಗಳ ಕಮಾಂಡರ್ ಅರುಣ್ ಸಿಂಗ್ ತಿಳಿಸಿದ್ದಾರೆ.
ಈ ಹಡಗಿನಲ್ಲಿದ್ದ ಸುಮಾರು 300 ತೈಲ ಕಂಟೈನರುಗಳು ನೀರಿಗೆ ಬಿದ್ದಿವೆ. ಇದರಲ್ಲಿ ಒಟ್ಟು 1,200 ತೈಲ ಕಂಟೈನರುಗಳಿದ್ದವು. ಇವೆಲ್ಲವೂ ಸಮುದ್ರದಲ್ಲಿ ಮುಳುಗಡೆಯಾಗಲಿದೆ ಎಂದು ವರದಿಗಳು ಹೇಳಿವೆ.
ಹಡಗಿನಲ್ಲಾಗುತ್ತಿರುವ ತೈಲ ಸೋರಿಕೆಯಿಂದ ಉಂಟಾಗುವ ದುಷ್ಪರಿಣಾಮವನ್ನು ತಡೆಯಲು ಕರಾವಳಿ ತಟ ರಕ್ಷಣಾ ಪಡೆಯ ಆರು ಹಡಗುಗಳು ಮತ್ತು ಹೆಲಿಕಾಪ್ಟರುಗಳು ಶತಯತ್ನ ನಡೆಸುತ್ತಿವೆ.
ಎಂಎಸ್‌ಸಿ ಚೈತ್ರ ಮತ್ತು ಎಂವಿ ಖಾಲೀಜಿಯಾ-111 ಎಂಬ ಎರಡು ಪನಾಮಾ ಹಡಗುಗಳ ನಡುವೆ ಡಿಕ್ಕಿ ಸಂಭವಿಸಿತ್ತು. ಈ ಎರಡೂ ಹಡಗುಗಳ ಕ್ಯಾಪ್ಟನ್‌ಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಎರಡೂ ಹಡಗುಗಳಲ್ಲಿದ್ದ 50ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ನೀಡಿ: ಮೀನುಗಾರರು ಮುಂಬೈ ಬಂದರು ಭಾಗದಲ್ಲಿ ಸಂಭವಿಸಿರುವ ಹಡಗುಗಳ ಅಪಘಾತದಿಂದ ಉಂಟಾಗಿರುವ ತೈಲ ಸೋರಿಕೆಯಿಂದ ಮೀನುಗಾರಿಕಾ ಕ್ಷೇತ್ರಕ್ಕೆ ಭಾರೀ ನಷ್ಟವಾಗಿದ್ದು, ಪರಿಹಾರ ಒದಗಿಸಬೇಕು ಎಂದು ಸುಮಾರು ಎಂಟು ಲಕ್ಷ ಮೀನುಗಾರರನ್ನು ಹೊಂದಿರುವ ಸಂಘಟನೆ ಮಹಾರಾಷ್ಟ್ರದಲ್ಲಿ ಆಗ್ರಹಿಸಿದೆ.
ಮುಂಬೈ ಕರಾವಳಿಯಲ್ಲಿ ಹಡಗಿನಿಂದ ತೈಲ ಸೋರಿಕೆಯಾಗುತ್ತಿರುವುದರಿಂದ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಮೀನುಗಾರ ಕುಟುಂಬಗಳು ಉಪವಾಸ ಬೀಳುವ ಪರಿಸ್ಥಿತಿ ಎದುರಾಗಿದೆ. 6,000ಕ್ಕೂ ಹೆಚ್ಚು ಸಣ್ಣ ದೋಣಿಯ ಮೀನುಗಾರರು ಕೆಲಸವಿಲ್ಲದೆ ತೊಂದರೆಗೊಳಗಾಗಿದ್ದಾರೆ. ಹಾಗಾಗಿ ಸರಕಾರವು ನಮಗೆ ಪರಿಹಾರ ನೀಡಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.