ಬಿಜೆಪಿ ಆಡಳಿತವಿರುವ ಗುಜರಾತ್, ಕರ್ನಾಟಕ ಮತ್ತು ಮಧ್ಯಪ್ರದೇಶಗಳಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತರನ್ನು ಗುರಿ ಮಾಡಲಾಗುತ್ತಿದೆ ಮತ್ತು ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಆರೋಪಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಪಕ್ಷದ ಕೇಂದ್ರೀಯ ಸಮಿತಿಯ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಹಿಂದುತ್ವ ಸಿದ್ಧಾಂತದ ಆಧಾರದಲ್ಲಿ ನಡೆಯುತ್ತಿರುವ ಬಹುತೇಕ ಕೋಮುವಾದೀಕರಣಗಳು ದೇಶಕ್ಕೆ ಮತ್ತು ಜನರ ಐಕ್ಯತೆಗೆ ಮಾಡಲಾಗುತ್ತಿರುವ ಗಂಭೀರ ಹಲ್ಲೆ ಎಂದು ವ್ಯಾಖ್ಯಾನಿಸಿದರು.
ಕೋಮುವಾದವು ದೇಶಕ್ಕೆ ಬಹುದೊಡ್ಡ ಬೆದರಿಕೆಯಾಗಿದ್ದು, ಇಂತಹ ಶಕ್ತಿಗಳನ್ನು ನಿರ್ಮೂಲನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವುದೇ ರಿಯಾಯಿತಿಯನ್ನು ತೋರಿಸಬಾರದು ಎಂದು ಯುಪಿಎ ಸರಕಾರದ ಮೊದಲ ಅವಧಿಯಲ್ಲಿ ಕೇಂದ್ರಕ್ಕೆ ಬಾಹ್ಯಬೆಂಬಲ ನೀಡಿ ವಾಪಸ್ ಪಡೆದುಕೊಂಡ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ದೂರವನ್ನು ಕಾಯ್ದುಕೊಳ್ಳಲು ಯತ್ನಿಸುತ್ತಿರುವ ಎಡರಂಗ ಅಭಿಪ್ರಾಯಪಟ್ಟಿದೆ.
ಗುಜರಾತ್, ಕರ್ನಾಟಕ ಅಥವಾ ಮಧ್ಯಪ್ರದೇಶ-- ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳು ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿವೆ. ಅಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರು ಸರಕಾರಗಳ ಬಲಿಪಶುಗಳಾಗುತ್ತಿದ್ದಾರೆ. ಅವರ ಹಕ್ಕುಗಳನ್ನು ಕಸಿದುಕೊಳ್ಳಲು ಸರಕಾರಗಳು ಯತ್ನಿಸುತ್ತಿವೆ ಎಂದೂ ಕಾರಟ್ ಇದೇ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ಇಂತಹ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದಕ್ಕೆ ಗುಜರಾತ್ ಪೊಲೀಸರು ಮತ್ತು ರಾಜ್ಯದ ಆಡಳಿತ ವ್ಯವಸ್ಥೆಯು ಉದಾಹರಣೆ. ಅಲ್ಲಿನ ಕೋಮುವಾದಿಗಳ ಕೃತ್ಯಗಳನ್ನು ಮುಚ್ಚಿಡುವುದಕ್ಕಾಗಿ ಹೇಗೆ ನಕಲಿ ಎನ್‌ಕೌಂಟರುಗಳು ನಡೆಯುತ್ತಿವೆ ಎಂಬುದು ಒಂದೊಂದಾಗಿಯೇ ಬಹಿರಂಗವಾಗುತ್ತಿದೆ ಎಂದರು.
ಅದೇ ಹೊತ್ತಿಗೆ ಕಾರಟ್ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಲೋಭಿಗಳು, ಸುಲಿಗೆಕೋರರು ಮತ್ತು ಮಾರುಕಟ್ಟೆಯನ್ನು ಸ್ತುತಿಸುವಂತೆ ಕಾಣುತ್ತಿರುವ ಕಾಂಗ್ರೆಸ್ ಆಧುನಿಕ ಪ್ರಗತಿಪರ ನೀತಿಗಳನ್ನು ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಾಜ್ಯದ ಪ್ರತಿ ಇಲಾಖೆಗಳು ಮತ್ತು ಸಮಾಜದ ಎಲ್ಲಾ ವಿಭಾಗಗಳು ಭ್ರಷ್ಟಾಚಾರಮಯ ಮತ್ತು ಮಾಲಿನ್ಯಮಯವಾಗುತ್ತಿವೆ. ರಾಜಕೀಯ ಮತ್ತು ಉದ್ಯಮದ ನಡುವಿನ ನಂಟು ಈಗ ಬಹಿರಂಗವಾಗಿಯೇ ಸಾಗುತ್ತಿದೆ ಎಂದರು.
ಬಳ್ಳಾರಿಯಲ್ಲಿನ ಗಣಿ ಸಹೋದರರ ಕುರಿತು ಮಾತಿಗಿಳಿಯುತ್ತಾ, ಅಲ್ಲಿನ ಗಣಿ ಮಾಫಿಯಾವು ಬಿಜೆಪಿ ಆಡಳಿತವಿರುವ ಕರ್ನಾಟಕದ ರಾಜಕೀಯವನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತಿದೆ. ಅಲ್ಲದೆ ಆಂಧ್ರಪ್ರದೇಶಧ ರಾಜಕೀಯದಲ್ಲೂ ತನ್ನ ಪ್ರಭಾವವನ್ನು ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.