ಹೊತ್ತಲ್ಲದ ಹೊತ್ತಿನಲ್ಲಿ ಹುಟ್ಟಿಕೊಳ್ಳುವ ಪ್ರೇಮಕ್ಕೂ ಜಾತಿ-ಧರ್ಮಗಳ ಹಂಗು ಬೇಕು ಎಂದುಕೊಂಡಿರದ ಹೊತ್ತಿನಲ್ಲಿ ಅವರ ನಡುವೆ ಒಂದು ಫಲಭರಿತ ಪ್ರೇಮ ಹುಟ್ಟಿಕೊಂಡಿತ್ತು. ಪ್ರೀತಿಯೇ ಧರ್ಮ, ಸಂಬಂಧವೇ ಕರ್ಮವಿರಬಹುದು ಎಂದು ಮದುವೆಯೂ ಆದರು ಅರುಣ್ ಸಿಂಗ್ ಮತ್ತು ಜುನೈರಾ ಕಮಾಲ್. ಇದು ಸುದ್ದಿಯಲ್ಲ, ಈ ಜೋಡಿಯ ನಡುವೆ ಒಂದಿಷ್ಟು ಕೀಚಕರು ಹುಟ್ಟಿಕೊಂಡು ಬೇರ್ಪಡಿಸಲು ಯತ್ನಿಸುತ್ತಿರುವುದೇ ಸುದ್ದಿ.
PR
ಪ್ರೇಮದ ಮಹಲನ್ನು ಹೊಂದಿರುವ ತಾಜ್ ನಗರದಲ್ಲಿ ನಡೆದಿರುವ ಘಟನೆಯಿದು. ಇಲ್ಲಿನ ನಿವಾಸಿಗಳಾದ ಹಿಂದೂ-ಮುಸ್ಲಿಂ ಜೋಡಿ ಇತ್ತೀಚೆಗಷ್ಟೇ ಮದುವೆಯಾಗಿತ್ತು. ಆದರೆ ಇವರನ್ನು ಬೇರ್ಪಡಿಸಲು ಕೆಲವರು ಯತ್ನಿಸುತ್ತಿರುವುದರಿಂದ ಉತ್ತರ ಪ್ರದೇಶ ಮತ್ತು ರಾಜಸ್ತಾನಗಳ ನಗರಗಳಲ್ಲಿ ತಲೆ ಮರೆಸಿಕೊಳ್ಳಬೇಕಾದ ಅನಿವಾರ್ಯತೆಗೆ ಜೋಡಿ ಸಿಲುಕಿದೆ.
ವರದಿಗಳ ಪ್ರಕಾರ ಜೋಡಿಯನ್ನು ಆಡಳಿತ ಪಕ್ಷ ಬಿಎಸ್‌ಪಿ ಶಾಸಕ ಮತ್ತು ಪೊಲೀಸರು ಹುಡುಕುತ್ತಿದ್ದಾರೆ. ಆಗ್ರಾ ಸೇರಿದಂತೆ ಹಲವು ಕಡೆ ಅವರ ಸಂಬಂಧಿಕರ, ಗೆಳೆಯರ ಮನೆಗಳ ಮೇಲೆ ದಾಳಿ ನಡೆಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಯಾವುದಾದರೂ ವಿಧಿಗಳನ್ನು ಅರುಣ್-ಜುನೈರಾ ಉಲ್ಲಂಘಿಸಿರಬಹುದು ಎಂದುಕೊಂಡರೆ ಅದು ನಿಜವಲ್ಲ. ಹಾಗಾದರೆ ಪೊಲೀಸರು ಈ ರೀತಿ ಬೆನ್ನ ಹಿಂದೆ ಬೀಳಲು ಕಾರಣ? ಹೌದು, ಅವರ ಮನೆಯವರ ಪ್ರಕಾರ ಇದು ಗಂಭೀರ ಅಪರಾಧ. ಪ್ರೀತಿ ಮಾಡಿದ್ದೇ, ಅಲ್ಲದೆ ಅಂತರ್ ಧರ್ಮೀಯ ವಿವಾಹವನ್ನು ಮನೆಯವರ, ಧರ್ಮದ ಇಚ್ಛೆಗೆ ವಿರುದ್ಧವಾಗಿ ಮಾಡಿಕೊಂಡಿದ್ದಾರೆ.
ನಿಮ್ಮನ್ನು ಸುಮ್ಮನೆ ಬಿಡಲ್ಲ... ಆಗ್ರಾ ಕ್ಷೇತ್ರದ ಶಾಸಕ ಜುಲ್ಫೀಕರ್ ಭುಟ್ಟೋ ನಮಗೆ ಜೀವ ಬೆದರಿಕೆ ಹಾಕುತ್ತಿದ್ದಾನೆ. ಒಂದೋ ನಾವು ಬೇರ್ಪಡಬೇಕು, ಇಲ್ಲವಾದಲ್ಲಿ ಎದುರಾಗುವ ಅಪಾಯಗಳನ್ನು ಎದುರಿಸಲು ಸಿದ್ಧರಾಗಬೇಕು ಎಂದು ಆತ ಹೇಳುತ್ತಿದ್ದಾನೆ. ಭಾರತದ ಯಾವುದೇ ಹಳ್ಳಿಗಾಡಲ್ಲಿ ನೀವು ಅಡಗಿದರೂ ನಾನು ನಿಮ್ಮನ್ನು ಪತ್ತೆ ಹಚ್ಚುತ್ತೇನೆ ಎಂದು ಆತ ಬೆದರಿಕೆ ಹಾಕುತ್ತಿದ್ದಾನೆ. ರಾಜ್ಯದ ಇಡೀ ಆಡಳಿತ ಮತ್ತು ಪೊಲೀಸರು ಈ ಶಾಸಕನಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಜುನೈರಾ ಆರೋಪಿಸಿದ್ದಾಳೆ.
ಈ ನಡುವೆ ಜುನೈರಾಳ ಕುಟುಂಬ ಪೊಲೀಸರಿಗೆ ದೂರನ್ನೂ ನೀಡಿದೆ. ನಮ್ಮ ಮಗಳು ಅಪ್ರಾಪ್ತೆಯಾಗಿದ್ದು, ಅರುಣ್ ಆಕೆಯನ್ನು ಅಪಹರಿಸಿದ್ದಾನೆ ಎಂದು ಪ್ರೇಮ ಪ್ರಕರಣಗಳಲ್ಲಿ ನೀಡುವ ರೀತಿಯಲ್ಲೇ ದೂರು ನೀಡಲಾಗಿತ್ತು.
ಆದರೆ ಇದರ ವಿರುದ್ಧ ಅರುಣ್-ಜುನೈರಾ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದರು. ಅರುಣ್‌ನನ್ನು ಬಂಧಿಸುವುದಕ್ಕೆ ತಡೆಯಾಜ್ಞೆ ನೀಡಿದ್ದ ನ್ಯಾಯಾಲಯವು, ಇಬ್ಬರಿಗೂ ಸೂಕ್ತ ಭದ್ರತೆಯನ್ನು ಒದಗಿಸುವಂತೆ ಆಗ್ರಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿತ್ತು.
ಪ್ರೇಮ ಹುಟ್ಟಿದ್ದು ಹೀಗೆ.... ಜುನೈರಾ ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಪ್ರೀತಿ ಹುಟ್ಟಿಕೊಂಡದ್ದು. ಎರಡು ವರ್ಷಗಳ ಹಿಂದೆ ಏನೋ ಕೆಲಸಕ್ಕಾಗಿ ಜುನೈರಾ ಕೆಲಸ ಮಾಡುತ್ತಿದ್ದ ಕಂಪನಿಗೆ ಅರುಣ್ ಬಂದಿದ್ದ. ತಾವಿಬ್ಬರೂ ಬೇರೆ ಬೇರೆ ಧರ್ಮಗಳಿಗೆ ಸೇರಿದವರೆಂಬುದನ್ನು ತಿಳಿಯದೆ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದರು.
ಕೆಲ ತಿಂಗಳ ಹಿಂದೆ ಪರಾರಿಯಾಗಿದ್ದ ಜೋಡಿ ಅಲಹಾಬಾದ್, ಜೈಪುರ ಮತ್ತಿತರ ಕಡೆಗಳಲ್ಲಿ ತಲೆ ಮರೆಸಿಕೊಂಡಿತ್ತು. ಇತ್ತೀಚೆಗಷ್ಟೇ, ಅಂದರೆ ಮೇ 26ರಂದು ಅವರಿಬ್ಬರು ಅಧಿಕೃತವಾಗಿ ಮದುವೆಯಾಗಿದ್ದರು. ಆದರೆ ಬಳಿಕವೂ ಸಾರ್ವಜನಿಕ ಜೀವನ ನಡೆಸುವುದು ಅವರಿಗೆ ಸಾಧ್ಯವಾಗುತ್ತಿಲ್ಲ.
ಅರುಣ್ ಓರ್ವ ಹಿಂದೂ ಎಂದು ನನಗೆ ಅನಿಸಿರಲಿಲ್ಲ. ಆತ ಓರ್ವ ಭಾರತೀಯ ಎಂದೇ ನಾನು ಪರಿಗಣಿಸಿದ್ದೆ. ಅದೇ ಕಾರಣಕ್ಕಾಗಿ ನಾನು ಆತನನ್ನು ಮದುವೆಯಾದೆ ಎಂದು ಹಿಂದೂ ಧರ್ಮದ ಸಂಪ್ರದಾಯದಂತೆ ಕರಿಮಣಿ ಧರಿಸಿರುವ ಜುನೈರಾ ಹೇಳಿಕೊಂಡಿದ್ದಾಳೆ.