ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲ್-ಮಮತಾ; ಕಾಂಗ್ರೆಸ್ ಸಮರ್ಥನೆ, ಸಂಸತ್ತಲ್ಲಿ ಗದ್ದಲ (Trinamool Congress | Mamata Banerjee | Maoists | Congress)
Bookmark and Share Feedback Print
 
ಕೇಂದ್ರ ಸರಕಾರದ ಸಂಪುಟ ಸಚಿವೆಯೊಬ್ಬರು ನಕ್ಸಲರಿಗೆ ಬಹಿರಂಗವಾಗಿ ಬೆಂಬಲ ನೀಡುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಪ್ರತಿಪಕ್ಷಗಳು, ಸರಕಾರವು ಈ ಸಂಬಂಧ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸುತ್ತಾ ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ ಎಬ್ಬಿಸುತ್ತಿವೆ. ಅತ್ತ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಕ್ರಮವನ್ನು ಸಮರ್ಥಿಸಿಕೊಂಡಿದೆ.

ನಕ್ಸಲ್ ನಾಯಕ ಆಜಾದ್ ಎನ್‌ಕೌಂಟರ್ ಕುರಿತು ಪ್ರಶ್ನಿಸಿರುವುದು ಮತ್ತು ಮಾವೋವಾದಿಗಳಿಗೆ ರೈಲ್ವೇ ಸಚಿವೆ ಬ್ಯಾನರ್ಜಿ ಬೆಂಬಲ ನೀಡಿರುವುದನ್ನು ತೀವ್ರವಾಗಿ ಖಂಡಿಸಿರುವ ಎಡಪಕ್ಷಗಳು ಮತ್ತು ಬಿಜೆಪಿ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಇಂದು ಗದ್ದಲ ಎಬ್ಬಿಸುತ್ತಿದ್ದು, ಪ್ರಧಾನ ಮಂತ್ರಿಯವರು ಈ ಸಂಬಂಧ ಹೇಳಿಕೆ ನೀಡಬೇಕು ಎಂದು ಆಗ್ರಹಿಸುತ್ತಿವೆ.

ಎನ್‌ಕೌಂಟರನ್ನು ಪ್ರಶ್ನಿಸುತ್ತಿರುವ ಬ್ಯಾನರ್ಜಿ ವಿಚಾರದ ಕುರಿತು ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಉಪ ನಾಯಕ ಗೋಪಿನಾಥ್ ಮುಂಡೆಯವರು ಸ್ಪೀಕರ್ ಮೀರಾ ಕುಮಾರ್ ಅವರಲ್ಲಿ ಅವಕಾಶ ಕೋರಿದ್ದರು.

ಆದರೆ ಈ ವಿಚಾರವನ್ನು ಪ್ರಶ್ನೋತ್ತರ ವೇಳೆಯಲ್ಲಿ ಎತ್ತುವಂತೆ ಗೋಪಿನಾಥ್‌ಗೆ ಮೀರಾ ಸೂಚಿಸಿದರು. ಇದನ್ನು ತಳ್ಳಿ ಹಾಕಿದ ಬಿಜೆಪಿ ನಾಯಕ, ತಕ್ಷಣವೇ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸ್ಪೀಕರ್ ಪ್ರಶ್ನೋತ್ತರ ವೇಳೆಯನ್ನು ಆರಂಭಿಸುತ್ತಿದ್ದಂತೆ ಗೋಪಿನಾಥ್ ಅವರು ನಕ್ಸಲ್-ಮಮತಾ ಸಂಬಂಧದ ಕುರಿತು ಮಾತನಾಡಲಾರಂಭಿಸಿದರು. ಈ ಹಂತದಲ್ಲಿ ಕುಪಿತಗೊಂಡ ತೃಣಮೂಲ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು. ಇದರಿಂದ ಆಕ್ರೋಶಿತರಾದ ಎಡಪಕ್ಷಗಳ ಸದಸ್ಯರು ಆಸನದಿಂದ ಎದ್ದಾಗ, ಬಿಜೆಪಿ ಕೂಡ ಅವರಿಗೆ ಬೆಂಬಲ ನೀಡಿತು. ಈ ಹಂತದಲ್ಲಿ ಎಡಪಕ್ಷಗಳು ಮತ್ತು ಬಿಜೆಪಿ - ತೃಣಮೂಲ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಗ್ವಾದಗಳು ನಡೆದವು.

ರಾಜ್ಯಸಭೆಯಲ್ಲೂ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಮತ್ತು ಇತರ ಸದಸ್ಯರು ಸರಕಾರವನ್ನು ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದಾರೆ. ಸ್ವತಃ ಪ್ರಧಾನ ಮಂತ್ರಿಯವರು ಸರಕಾರದ ನಡೆಯನ್ನು ಸ್ಪಷ್ಟಪಡಿಸಬೇಕೆಂದು ನಾಯಕರು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಸಮರ್ಥನೆ...
ನಕ್ಸಲ್ ಪ್ರಾಬಲ್ಯ ಪ್ರದೇಶದಲ್ಲಿ ಮಾವೋವಾದಿಗಳನ್ನು ಬೆಂಬಲಿಸಿ ನಡೆಸಲಾಗಿದ್ದ ಸಮಾವೇಶದಲ್ಲಿ ಸಚಿವೆ ಪಾಲ್ಗೊಂಡಿರುವುದನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ.

ಕಾಂಗ್ರೆಸ್ ಪಕ್ಷಕ್ಕೂ ಸಮಾವೇಶದಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿತ್ತು. ಆದರೆ ಇತರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇಲ್ಲದೇ ಇದ್ದರೆ ನಾವೂ ಭಾಗವಹಿಸುತ್ತಿದ್ದೆವು. ಶಾಂತಿ ಮತ್ತು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಗುರಿಯನ್ನಷ್ಟೇ ಈ ಸಮಾವೇಶ ಹೊಂದಿತ್ತು ಎಂದು ಕಾಂಗ್ರೆಸ್ ನಾಯಕ ಕೆ. ಕೇಶವ್ ರಾವ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ