ಜನತೆ ಶಾಂತಿಗೆ ಒಂದು ಅವಕಾಶ ನೀಡಬೇಕು ಎಂದು ಅಶಾಂತಿಯುತ ಕಾಶ್ಮೀರಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೂತನ ಕ್ರಮಗಳಿಗೆ ಮುಂದಾಗಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದು, ಆಂತರಿಕ ಮತ್ತು ಬಾಹ್ಯ ಮಾತುಕತೆಗಳಿಗೆ ಮನ್ನಣೆ ನೀಡುವ ಭರವಸೆ ನೀಡಿದ್ದಾರೆ.
ಸುಮಾರು 50ರಷ್ಟು ನಾಗರಿಕರ ಸಾವಿಗೆ ಕಾರಣವಾಗಿರುವ ಕಾಶ್ಮೀರ ಕಣಿವೆಯ ಇತ್ತೀಚಿನ ಸಮಸ್ಯೆಗಳ ಬಗ್ಗೆ ಮೊದಲ ಬಾರಿ ಸಾರ್ವಜನಿಕ ಹೇಳಿಕೆ ನೀಡಿರುವ ಸಿಂಗ್ ಇಂದು ರಾಜ್ಯದ ರಾಜಕೀಯ ಪಕ್ಷಗಳ ನಾಯಕರ ಸಭೆ ಕರೆದು ಪರಿಹಾರ ಕಂಡುಕೊಳ್ಳುವ ಕುರಿತು ಚರ್ಚೆ ನಡೆಸಿದರು.
ಕಾಶ್ಮೀರ ಹಿಂಸಾಚಾರದಿಂದ ತನಗೆ ತೀವ್ರ ನೋವಾಗಿದೆ ಎಂದ ಪ್ರಧಾನಿಯವರ ಹೇಳಿಕೆ ರಾಷ್ಟ್ರದಾದ್ಯಂತ ದೂರದರ್ಶನದಲ್ಲಿ ನೇರ ಪ್ರಸಾರಯಿತು. ಕಾಶ್ಮೀರದ ಪ್ರತಿಯೊಬ್ಬ ತಾಯಿ, ಪ್ರತಿ ತಂದೆ, ಪ್ರತಿ ಕುಟುಂಬ ಮತ್ತು ಮಗುವಿನ ನಷ್ಟದ ಕುರಿತ ದುಃಖ ಮತ್ತು ಕೊರಗನ್ನು ನಾನು ಹಂಚಿಕೊಳ್ಳುತ್ತಿದ್ದೇನೆ. ಇದರಿಂದ ನನಗೆ ತೀವ್ರ ದುಃಖವಾಗಿದೆ ಎಂದರು.
ಹೊಸ ಆರಂಭವೊಂದಕ್ಕೆ ನಮಗೆ ಅವಕಾಶ ನೀಡಿ. ಯುವ ಜನತೆ ಶಾಲಾ-ಕಾಲೇಜುಗಳಿಗೆ ಮರಳಬೇಕು ಮತ್ತು ತರಗತಿಗಳು ಮತ್ತೆ ಆರಂಭವಾಗಬೇಕು. ನಿಮ್ಮ ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳದೇ ಇದ್ದರೆ ನಿಮ್ಮ ಮಕ್ಕಳಿಗೆ ಯಾವ ರೀತಿಯ ಭವಿಷ್ಯವಿದೆ ಎಂದು ಅವರ ಹೆತ್ತವರಲ್ಲಿ ನಾನು ಪ್ರಶ್ನಿಸುತ್ತಿದ್ದೇನೆ. ದಯವಿಟ್ಟು ಶಾಲೆಗಳಿಗೆ ಮರಳಿ ಎಂದು ಪ್ರಧಾನಿ ಸಿಂಗ್ ಮನವಿ ಮಾಡಿಕೊಂಡರು.
ಅದೇ ಹೊತ್ತಿಗೆ ಹಿಂಸಾಚಾರಗಳ ಸರಣಿಯು ಈಗಿನಿಂದಲೇ ಕೊನೆಗೊಳಿಸಬೇಕು ಎಂದು ಸ್ಪಷ್ಟಪಡಿಸಿರುವ ಸಿಂಗ್, ಅಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗಳನ್ನು ಕಾಪಾಡಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ; ಅಲ್ಲಿನ ಪ್ರಕ್ಷ್ಯುಬ್ಧತೆ ಮುಂದುವರಿಯಲು ನಾವು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಅದೇ ಹೊತ್ತಿಗೆ ಕಾಶ್ಮೀರದಲ್ಲಿನ ಸ್ಥಳೀಯ ಚುನಾವಣೆಗಳನ್ನು ಅವಧಿಗೆ ಮುಂಚೆ ನಡೆಸುವುದರಿಂದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಿದೆ ಎಂದು ಪ್ರಧಾನಿಯವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾಪ್ರಭುತ್ವ ಹೊಂದಿರುವ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಜನತೆಗೆ ಹೆಚ್ಚು ಅವಕಾಶ ಲಭಿಸುವ ಸ್ಥಳೀಯ ಚುನಾವಣೆಗಳನ್ನು ಶೀಘ್ರವಾಗಿ ನಡೆಸುವುದರಿಂದ ಪರಿಸ್ಥಿತಿ ಸುಧಾರಣೆಯಾಗಬಹುದು ಎಂದು ಉರ್ದುವಿನಲ್ಲಿ ಮಾಡಿದ ಭಾಷಣದಲ್ಲಿ ಅವರು ತಿಳಿಸಿದ್ದಾರೆ.
ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ, ರಕ್ಷಣಾ ಸಚಿವ ಎ.ಕೆ. ಆಂಟನಿ, ಗೃಹಸಚಿವ ಪಿ. ಚಿದಂಬರಂ, ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಗುಲಾಂ ನಬೀ ಆಜಾಜ್, ಫಾರೂಕ್ ಅಬ್ದುಲ್ಲಾ ಮತ್ತು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ನಾಯಕರು ಪ್ರಧಾನಿಯವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ಪ್ರಮುಖ ಪ್ರತಿಪಕ್ಷಗಳಾದ ಪಿಡಿಪಿ ಮತ್ತು ಬಿಜೆಪಿ ಪಕ್ಷಗಳು ಸಭೆಯಿಂದ ದೂರವೇ ಉಳಿದವು.